ಸರ್ಕಾರಿ ಶಾಲಾ ಮಕ್ಕಳಿಗೆ ಅದ್ಧೂರಿ ಸ್ವಾಗತ

KannadaprabhaNewsNetwork | Published : Jun 1, 2024 12:46 AM

ಸಾರಾಂಶ

ರಾಮನಗರ: ಜಿಲ್ಲೆಯಲ್ಲಿ ಶುಕ್ರವಾರದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತರಗತಿ ಆರಂಭವಾಗಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕರು ಹೂ ನೀಡಿ ಬರ ಮಾಡಿಕೊಂಡರು.

ರಾಮನಗರ: ಜಿಲ್ಲೆಯಲ್ಲಿ ಶುಕ್ರವಾರದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತರಗತಿ ಆರಂಭವಾಗಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕರು ಹೂ ನೀಡಿ ಬರ ಮಾಡಿಕೊಂಡರು.

ಇಷ್ಟು ದಿನ ಬೇಸಿಗೆ ರಜೆಯಿಂದಾಗಿ ಮನೆಯ ಆವರಣದಲ್ಲಿ ಆಟಾಡಿಕೊಂಡಿದ್ದ ಮಕ್ಕಳು, ಶುಕ್ರವಾರ ಶಾಲಾ ಸಮವಸ್ತ್ರ ಧರಿಸಿ, ಸ್ನೇಹಿತರೊಂದಿಗೆ ಗುಂಪು ಗುಂಪಾಗಿ ಶಾಲೆಗೆ ಆಗಮಿಸಿದರು. ಸಣ್ಣ ಮಕ್ಕಳು ಸಹೋದರರೊಂದಿಗೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ನೋಡುಗರಿಗೆ ಖುಷಿಯ ಸಂಗತಿಯನ್ನಾಗಿಸಿತ್ತು.

ಜಿಲ್ಲೆಯ ಕೆಲವು ಕಡೆ ಶಾಲೆಗಳಲ್ಲಿ ಸಾರ್ವಜನಿಕರು ಸಿಹಿ ಹಂಚಿಕೆ ಮಾಡಿ ಬರ ಮಾಡಿಕೊಂಡಿದ್ದಾರೆ. ಶಾಲೆಗಳಿಗೆ ಮಕ್ಕಳನ್ನು ಹಬ್ಬದ ರೀತಿಯಲ್ಲಿ ಬರ ಮಾಡಿಕೊಳ್ಳುವ ಸಂಬಂಧ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಶಿಕ್ಷಕರು ಸಿದ್ಧತೆ ಮಾಡಿಕೊಂಡಿದ್ದರು. ಇನ್ನು ಶುಕ್ರವಾರ ಬೆಳಗ್ಗೆ ಶಾಲಾ ಆವರಣದಲ್ಲಿ ತಳಿರು ತೋರಣ ಕೊಟ್ಟಲಾಗಿತ್ತು. ಹೂ ಸೇರಿದಂತೆ ರಂಗೋಲಿ ಬಿಡಿಸಿ ಶೃಂಗಾರ ಮಾಡಲಾಗಿತ್ತು.

ಪಠ್ಯಪುಸ್ತಕ - ಸಮವಸ್ತ್ರ ವಿತರಣೆ

ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ವಿತರಣೆಗೆ ಶೇಕಡ 90ರಷ್ಟು ಪಠ್ಯ ಪುಸ್ತಕಗಳು ಹಾಗೂ ಸಮವಸ್ತ್ರಗಳು ಶಾಲೆಗಳಿಗೆ ತಲುಪಿದ್ದವು. ತರಗತಿಗಳಿಗೆ ಹಾಜರಾದ ಮಕ್ಕಳಿಗೆ ಅವುಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಶಾಲೆಗಳಲ್ಲಿ ಮಧ್ಯಾಹ್ನ ಸಿಹಿಯೊಂದಿಗೆ ಬಿಸಿಯೂಟ ವಿತರಿಸಲಾಯಿತು.

ಶಾಲೆಯ ಸುತ್ತಮುತ್ತಲಿನ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಪ್ರತಿನಿಧಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ, ಮಕ್ಕಳಿಗೆ ಸ್ಥೈರ್ಯ ತುಂಬುವ ಕೆಲಸ ಮಡಲಾಗಿದೆ. ಇದಾದ ಬಳಿಕ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೂಡಿ, ಆಟೋಟಗಳಲ್ಲಿ ಭಾಗವಹಿಸಿದ್ದಾರೆ.

ದಾಖಲಾತಿ ಆರಂಭವಾಗಿದೆ :

ಜಿಲ್ಲೆಯಲ್ಲಿ ಶಾಲೆಗೆ ದಾಖಲಾತಿ ನೀಡುವ ಕೆಲಸ ಆರಂಭವಾಗಿದೆ. ಪೋಷಕರು ತಮಗೆ ಇಷ್ಟ ಬಂದ ಸರ್ಕಾರಿ ಹಾಗೂ ಸರ್ಕಾರೇತರ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಲು ಮುಂದಾಗಿದ್ದಾರೆ. ಶಾಲಾ ಮುಖ್ಯೋಪಾಧ್ಯಯರು ಸಹ ದಾಖಲಾತಿ ಕುರಿತು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.ಬಾಕ್ಸ್‌.............

ವಿಶೇಷತೆಗೆ ಸಾಕ್ಷಿಯಾದ ಹಲ ಶಾಲೆಗಳು

ರಾಮನಗರ: ತಾಲೂಕಿನ ಕಸಬಾ, ಕೂಟಗಲ್ , ಕೈಲಾಂಚ ಹಾಗೂ ಬಿಡದಿ ಹೋಬಳಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶೈಕ್ಷಣಿಕ ವರ್ಷದ ಪ್ರಾರಂಭ ಕೆಲ ವಿಶೇಷತೆಗೆ ಸಾಕ್ಷಿಯಾಯಿತು.

ಕಸಬಾ ಹೋಬಳಿ ಹರೀಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳನ್ನು ವಿಭಿನ್ನವಾಗಿ ಬರ ಮಾಡಿಕೊಳ್ಳಲಾಯಿತು. ಗ್ರಾಮದಲ್ಲಿ ಕಲಾವಿದರ ಡೊಳ್ಳು ಕುಣಿತ, ಪೂಜಾ ಕುಣಿತದೊಂದಿಗೆ ವಿದ್ಯಾರ್ಥಿನಿಯರು ಪೂರ್ಣಕುಂಭ ಹೊತ್ತು ನಡೆದ ಮೆರವಣಿಗೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

ಕೂಟಗಲ್ ಹೋಬಳಿಯ ಅನುಮಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮೊದಲ ದಿನ ವಿದ್ಯಾರ್ಥಿಗಳು ಖುಷಿಯಿಂದ ಶಾಲೆಗೆ ಆಗಮಿಸಿದರು. ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಶಾಲೆಯ ಪುಟ್ಟ ಮಕ್ಕಳ ಪೂರ್ಣಕುಂಭ ಹೊತ್ತು ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆದರು.

ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶಾರದಾ ದೇವಿಗೆ ಪೂಜೆ ಸಲ್ಲಿಸಿದರು. ವಿಶೇಷ ಉಡುಗೆಯಲ್ಲಿ ಆಗಮಿಸಿದ್ದ ಮಕ್ಕಳು ಶಾಲಾವರಣದಲ್ಲಿ ಶಾರದಾ ದೇವಿಗೆ ಫೋಟೋ ಇರಸಿ ಅದಕ್ಕೆ ಮಂಗಳಾರತಿ ಮಾಡಿದ್ದು ವಿಶೇಷವಾಗಿತ್ತು.

ಬೆತ್ತಂಗೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಅ‍ವರ ಮನೆಯಿಂದಲೇ ಎತ್ತಿನ ಗಾಡಿಯಲ್ಲಿ ಶಾಲೆಗೆ ಕರೆತರಲಾಯಿತು. ಅವ್ವೇರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಗೊಂಬೆಗಳ ಪೋಷಕು ಧರಿಸಿ ಸಂಭ್ರಮಿಸಿದರು.

ಶೇಷಗಿರಿಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳ ತಂಡ ಬ್ಯಾಂಡ್ ಸೆಟ್ ನೊಂದಿಗೆ ಸಹೊದ್ಯೋಗಿಗಳನ್ನು ಬರಮಾಡಿಕೊಂಡರು. ಉಳಿದಂತೆ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಗುಲಾಬಿ ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಿದರು.ಕೋಟ್ ...............

2024-25ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಶುಕ್ರವಾರ ಆರಂಭಗೊಂಡ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿಕೊಳ್ಳಲಾಯಿತು. ಪ್ರತಿಯೊಂದು ಶಾಲೆಯು ವಿಭಿನ್ನ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಬರ ಮಾಡಿಕೊಂಡಿತು. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಗುಲಾಬಿ ಹೂವು, ಸಿಹಿ ಹಂಚಲಾಯಿತು.

-ಸೋಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ರಾಮನಗರ

(ಫೋಟೋಗಳನ್ನು ಹೆಚ್ಚಾಗಿಯೇ ಬಳಸಿ ಸಾಧ್ಯವಾದರೆ ಅಷ್ಟೂ ಬಳಸಿ)

31ಕೆಆರ್ ಎಂಎನ್ 1,2,3,4,5,6.ಜೆಪಿಜಿ

1.ಬೆತ್ತಂಗೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಅ‍ವರ ಮನೆಯಿಂದಲೇ ಎತ್ತಿನ ಗಾಡಿಯಲ್ಲಿ ಶಾಲೆಗೆ ಕರೆತರಲಾಯಿತು.

2.ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಶಾಲೆಯ ಪುಟ್ಟ ಮಕ್ಕಳ ಪೂರ್ಣಕುಂಭ ಹೊತ್ತು ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆದರು.

3.ಹರೀಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳನ್ನು ಕಲಾವಿದರ ಡೊಳ್ಳು ಕುಣಿತ, ಪೂಜಾ ಕುಣಿತದೊಂದಿಗೆ ಬರ ಮಾಡಿಕೊಳ್ಳಲಾಯಿತು.

4.ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶಾರದಾ ದೇವಿಗೆ ಪೂಜೆ ಸಲ್ಲಿಸಿದರು.

5.ಶೇಷಗಿರಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ತಂಡ ಬ್ಯಾಂಡ್ ಸೆಟ್ ನೊಂದಿಗೆ ಸಹೊದ್ಯೋಗಿಗಳನ್ನು ಬರಮಾಡಿಕೊಂಡರು.

6.ಅವ್ವೇರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಗೊಂಬೆಗಳ ಪೋಷಕು ಧರಿಸಿ ಸಂಭ್ರಮಿಸಿದರು.

Share this article