ಶಾಲಾ ವಾರ್ಷಿಕೋತ್ಸವ । ಸರ್ಕಾರಿ ಶಾಲೆಯ ಕಾರ್ಯಕ್ರಮ । ಶಿಕ್ಷಕರಿಗೆ ಸನ್ಮಾನ
ಅಂತಾರಾಷ್ಟ್ರೀಯ, ನವೋದಯ ಶಾಲೆಗಳಲ್ಲಿ ಸಿಗುವಂಥ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗುವಂತಾಗಬೇಕು ಎಂಬ ದೊಡ್ಡ ಕನಸು ಹೊಂದಿದ್ದೇನೆ, ಸಾಕಷ್ಟು ಪ್ರಯತ್ನಪಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ.ವಿನಯ್ ಕುಮಾರ್ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಕಕ್ಕರಗೊಳ್ಳದಲ್ಲಿ ಏರ್ಪಡಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಗಳು ಮೇಲ್ದರ್ಜೆಗೇರಬೇಕು. ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ಕೃಷ್ಟ ಶಿಕ್ಷಣ ಸಿಗಬೇಕು ಎಂದರು.ಉನ್ನತ ಸ್ಥಾನಕ್ಕೆ ಹೋಗಬೇಕೆಂಬುದು ಪ್ರತಿಷ್ಠೆಯ ವಿಚಾರ ಅಲ್ಲ. ದೊಡ್ಡಮಟ್ಟದಲ್ಲಿ ಜನರಿಗೆ ಸೇವೆ ಮಾಡಲು. ಕರ್ನಾಟಕದಲ್ಲಿ ಇನ್ ಸೈಟ್ಸ್ ಸಂಸ್ಥೆಯ ಆರು ವಿದ್ಯಾರ್ಥಿಗಳು ಡಿಸಿ, ಸಿಇಒ ಆಗಿದ್ದಾರೆ. ಎಸ್ಪಿ, ಎಎಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಸಂಸ್ಥೆಗೆ ಐಎಎಸ್, ಐಪಿಎಸ್ ತಯಾರಿಸುವ ಶಕ್ತಿ ಇದೆ. ಜೀವನ ಸಾರ್ಥಕಗೊಳಿಸಬೇಕಾದರೆ ಉನ್ನತ ಸ್ಥಾನಕ್ಕೆ ಹೋಗಬೇಕು. ಇದಕ್ಕೆ ಸತತ ಪರಿಶ್ರಮ, ಅಧ್ಯಯನ, ಪುಸ್ತಕ ಓದುವ ಹವ್ಯಾಸ, ಸಂಸ್ಕಾರ ಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳಿಗೆ ಬೈಯ್ಯಬೇಡಿ. ಜೀವನದಲ್ಲಿ ಸವಾಲು ಎದುರಿಸುವ ಗುಣ ಬೆಳೆಸಿ. ಭವಿಷ್ಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಅವರಲ್ಲಿ ಬರುತ್ತದೆ. ಪ್ರತಿಯೊಬ್ಬರೂ ಮೊದಲ ಪ್ರಯತ್ನದಲ್ಲಿ ಯಶಸ್ವಿ ಆಗುವುದು ಕಡಿಮೆ. ಸೋತಾಗ ಧೈರ್ಯ ತುಂಬಿ. ಮರಳಿ ಪ್ರಯತ್ನವ ಮಾಡು ಎಂಬ ಧೈರ್ಯ ಹೇಳಿ ಎಂದು ತಿಳಿಸಿದರು.
ಮಕ್ಕಳೂ ಚಿಕ್ಕ ವಯಸ್ಸಿನಿಂದಲೇ ಐಎಎಸ್, ಐಪಿಎಸ್, ದೊಡ್ಡ ಉದ್ಯಮಿಗಳಾಗುತ್ತೇವೆ ಎಂಬ ಕನಸು ಕಂಡರೆ ಮುಂದೊಂದು ದಿನ ನನಸಾಗುವ ಸಮಯ ಬರುತ್ತದೆ. ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡು ಹೆಚ್ಚಾಗಿ ಪುಸ್ತಕ ಅಧ್ಯಯನ ಮಾಡಿದರೆ ಕಷ್ಟವಾಗದು ಎಂದು ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ಆವರಗೊಳ್ಳದ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಬಸನಗೌಡ್ರು, ಸಾಹಿತಿ ಲೋಕೇಶ್ ಒಡೆಯರ್, ಕೆ.ಜಿ.ಶಾಂತರಾಜ್, ಪುಷ್ಪ, ಕೆ.ಎನ್.ಸದಾಶಿವಪ್ಪ, ಆಶಾ ಸಿದ್ದೇಶ್, ಗುತ್ಯಪ್ಪ, ಆರ್.ಡಿ.ಕುಲಕರ್ಣಿ, ಹದಡಿ ಯಲ್ಲಪ್ಪ, ಹಂಪನೂರು ಪಾಲಾಕ್ಷಪ್ಪ, ಅಂಗಡಿ ಚಮನ್ ಸಾಬ್, ಎಸ್.ಮುಸ್ತು ಇತರರು ಇದ್ದರು.