ಅಲೆಮಾರಿ ಜನಾಂಗಗಳಿಗೆ ಸರ್ಕಾರ ನಿವೇಶನ ಒದಗಿಸಲಿ: ರವೀಂದ್ರ ಶೆಟ್ಟಿ ಆಗ್ರಹ

KannadaprabhaNewsNetwork | Published : Jan 17, 2024 1:46 AM

ಸಾರಾಂಶ

ಸ್ಮಶಾನಕ್ಕಾಗಿ ಸರ್ಕಾರಿ ಜಾಗವನ್ನು ಕಾಯ್ದಿರಿಸಬೇಕು. ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯ ಭವನಗಳ ನಿರ್ಮಾಣ, ಸಮುದಾಯದ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ಜಾತಿ ಮತ್ತು ಆದಾಯ ಪ್ರಮಾಣಪತ್ರ, ಶಾಲಾ ವರ್ಗಾವಣೆ ಪತ್ರದಲ್ಲಿ ಅಂತಹವರ ಹೆಸರಿನ ಜೊತೆಗೆ ಜಾತಿ ಮತ್ತು ಪ್ರವರ್ಗ ನಮೂದಿಸುವ ಜೊತೆಗೆ ಜನಾಂಗದವರಿಗೆ ಹೆಚ್ಚು ಮೀಸಲಾತಿ ನೀಡಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯಾದ್ಯಂತ ಹಿಂದುಳಿದ ವರ್ಗದ ಪ್ರವರ್ಗ-1ಕ್ಕೆ ಸೇರಿದ 46 ಜಾತಿಗಳ ಒಳಗೊಂಡ ಅಲೆಮಾರಿ ಮತ್ತು ಅರೆ ಅಲೆಮಾರಿ ಕುಟುಂಬಗಳಿಗೆ ಸರ್ಕಾರ ನಿವೇಶನ ನೀಡುವ ಮೂಲಕ ಬದುಕು ಕಟ್ಟಿಕೊಡಬೇಕು ಎಂದು ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ಕಾರಿ ಜಾಗದಲ್ಲಿ 10 ವರ್ಷಕ್ಕೂ ಮೇಲ್ಪಟ್ಟು ಡೇರೆ, ಗುಡಿಸಲು, ಟೆಂಟ್ ಹಾಕಿ ವಾಸಿಸುತ್ತಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಆ ಜಾಗವನ್ನು ಖಾತೆ ಮಾಡಿಸಿಕೊಡಬೇಕು ಎಂದರು.

ಸ್ಮಶಾನಕ್ಕಾಗಿ ಸರ್ಕಾರಿ ಜಾಗವನ್ನು ಕಾಯ್ದಿರಿಸಬೇಕು. ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯ ಭವನಗಳ ನಿರ್ಮಾಣ, ಸಮುದಾಯದ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ಜಾತಿ ಮತ್ತು ಆದಾಯ ಪ್ರಮಾಣಪತ್ರ, ಶಾಲಾ ವರ್ಗಾವಣೆ ಪತ್ರದಲ್ಲಿ ಅಂತಹವರ ಹೆಸರಿನ ಜೊತೆಗೆ ಜಾತಿ ಮತ್ತು ಪ್ರವರ್ಗ ನಮೂದಿಸುವ ಜೊತೆಗೆ ಜನಾಂಗದವರಿಗೆ ಹೆಚ್ಚು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯಾದ್ಯಂತ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರು ಅನೇಕ ವರ್ಷಗಳಿಂದಲೂ ಸರ್ಕಾರಿ, ಖಾಸಗಿ ಖಾಲಿ ನಿವೇಶನಗಳಲ್ಲಿ ಗುಡಿಸಲು, ಗುಡಾರ ಹಾಕಿಕೊಂಡು ಜೀವನೋಪಾಯಕ್ಕಾಗಿ ಹಳ್ಳಿಗಳ ಕಡೆಗೆ ವ್ಯಾಪಾರಕ್ಕೆ ಹೋಗುತ್ತಾರೆ. ಬಾಂಡೆ, ಸೂಜಿ ದಾರ, ಪಿನ್, ಟೇಪ್‌, ಬಳೆಯಂತಹ ವಸ್ತುಗಳನ್ನು ಮಾರಾಟ ಮಾಡುವುದು, ಬೀಗ ರಿಪೇರಿ, ಪಶು ಸಾಕಾಣಿಕೆ, ಬಲೆ ಹೆಣೆಯುವುದು, ಮೀನುಗಾರಿಕೆ, ಭಿಕ್ಷಾಟನೆ, ಕಣಿ ಹೇಳುವುದು ಹೀಗೆ ನಾನಾ ಕೆಲಸ ಮಾಡಿ, ಬಾಳುವ ಜನ ಎಂದು ತಿಳಿಸಿದರು.

ಹೀಗೆ ಅಲೆಮಾರಿಗಳು, ಅರೆ ಅಲೆಮಾರಿಗಳು ಸಾಗುವ ಮಾರ್ಗದಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಪ್ರತಿ ದಿನವೂ ದುಡಿದು ಜೀವನ ಸಾಗಿಸುತ್ತಿರುವ ಬಡ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳಿಗೆ ಸರ್ಕಾರ ಸೂಕ್ತ ನೆರವು ನೀಡಿ, ಸ್ಪಂದಿಸಬೇಕು. ಶೀಘ್ರವೇ ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಏಕಾಂಗಿಯಾಗಿ ಹೋರಾಟ ನಡೆಸುವುದಾಗಿ ರವೀಂದ್ರ ಶೆಟ್ಟಿ ಎಚ್ಚರಿಸಿದರು.

ಸಂಘದ ಎಸ್.ಆರ್‌.ಇಂದಿರಾ, ಚೌಡೋಜಿ ರಾವ್‌ ಲಾಗ್ವೆ, ಮಂಜುನಾಥ ಜೋಗಿ, ವೀರೇಶ ದೊಂಬಿದಾಸ ಇತರರಿದ್ದರು.

Share this article