ಕನ್ನಡಪ್ರಭ ವಾರ್ತೆ ಶಿವಮೊಗ್ಗ ತುಂಗಾಭದ್ರ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಹಲವು ಗೊಂದಲಗಳು ಎದ್ದಿವೆ. ಕೆಲವರು ರಾಜಕೀಯಗೊಳಿಸಲು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದೆ. ಯಾವುದೇ ಕಾರಣಕ್ಕೂ ಅವರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಬಿಜೆಪಿ ಕೆಲವು ಮುಖಂಡರು ಈ ಬಗ್ಗೆ ಗೊಂದಲ ಹುಟ್ಟಿಸುತ್ತಿದ್ದಾರೆ. ಆಡಳಿತ ಸರ್ಕಾರಕ್ಕೆ ಪ್ರಶ್ನೆ ಕೇಳುವುದು ಸಹಜವೇ, ಅದಕ್ಕೆ ಉತ್ತರ ಕೊಡುವುದು ನಮ್ಮ ಕರ್ತವ್ಯ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ. ಇದು ಉಹಾಪೋಹದ ಮಾತಷ್ಟೇ ಎಂದರು.
ಈಗಾಗಲೇ ಹಲವು ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಮತ್ತು ಈ ಜಾಗಗಳಲ್ಲಿ ಕಾಡ ಕಚೇರಿ, ಆರ್‌ಟಿಒ ಕಚೇರಿ, ದೇವಸ್ಥಾನಗಳು, ಗ್ರಾ.ಪಂ.ಕಟ್ಟಡಗಳು, ವಾಸದ ಕಟ್ಟಡಗಳು ಇವೆ. ಇವೆಲ್ಲವನ್ನು ಕಂಪನಿಯ ಆಡಳಿತ ಮಂಡಳಿಗೆ ಕೊಡಲು ಸಾಧ್ಯವಿಲ್ಲ. ಈ ವಿಷಯ ಇನ್ನೂ ನ್ಯಾಯಾಲಯದ ಹಂತದಲ್ಲಿದೆ. ರೈತರ ಪರವಾಗಿ ಮತ್ತು ವಿರೋಧವಾಗಿ ಎರಡು ತೀರ್ಪುಗಳು ಬಂದಿವೆ. ಇದನ್ನು ನ್ಯಾಯಾಲಯದ ಗಮನಕ್ಕೆ ತರಬೇಕಾಗಿದೆ ಎಂದರು.ಸದಾಶಿವಪುರ ಸರ್ವೆ ನಂ.ಗೆ ಸೇರಿದ ಸಾಗುವಳಿ ಭೂಮಿಯನ್ನು ಸುಮಾರು 166 ಎಕರೆ ಜಾಗವನ್ನು ಈಗಾಗಲೇ ಗ್ರ್ಯಾಂಟ್ ಮಾಡಲಾಗಿದೆ. ಆ ಜನರ ಎಲ್ಲಾ ವಿವರಗಳನ್ನು ಕಲೆ ಹಾಕಲಾಗಿದೆ. ಸುಮಾರು 220 ಜನರು ತಮ್ಮ ವಿವರಗಳನ್ನು ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಒಟ್ಟಾರೆ ಇಲ್ಲಿಯ ಜನರನ್ನು ಒಕ್ಕಲೆಬ್ಬಿಸಲು ಆಗುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಎಸ್.ಪಿ. ದಿನೇಶ್, ಚಂದ್ರಭೂಪಾಲ್, ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ದೇವೇಂದ್ರಪ್ಪ, ಧರ್ಮರಾಜ್, ವಿಜಯಕುಮಾರ್ ಮತ್ತಿತರರು ಇದ್ದರು.
- - - -1ಎಸ್‌ಎಂಜಿಕೆಪಿ05: ಕಿಮ್ಮನೆ ರತ್ನಾಕರ್