ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24 ಘಟಿಕೋತ್ಸವದಲ್ಲಿ ಚಿಕ್ಕಬಳ್ಳಾಪುರದ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಮಧುಸೂದನ್ ಸಾಯಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ.ಎಸ್. ಸೋಮನಾಥ್, ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ವ್ಯವಸ್ಥಾಪನೆ ನಿರ್ದೇಶಕ ಹರಿ ಕೆ.ಮರಾರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ಪ್ರದಾನ ಮಾಡಿದರು.ಇಸ್ರೋ ಅಧ್ಯಕ್ಷ ಡಾ.ಎಸ್. ಸೋಮನಾಥ ಅವರ ಅನುಪಸ್ಥಿತಿಯಲ್ಲಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಯಿತು.ಗೌರವ ಸ್ವೀಕರಿಸಿ ಮಾತನಾಡಿದ ಚಿಕ್ಕಬಳ್ಳಾಪುರ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಸದ್ಗುರು ಮಧುಸೂದನ್ ಸಾಯಿ, ಘಟಿಕೋತ್ಸವದಲ್ಲಿ ಭಾಗವಹಿಸಿರುವುದು ಹೆಮ್ಮಯ ವಿಷಯ. ಸಮಾಜದಲ್ಲಿ ನಾವು ತರುವ ಉನ್ನತ ಬದಲಾವಣೆಗಳು ಮುಂದಿನ ಪೀಳಿಗೆಗೆ ದಾರಿ ಮಾಡಿ ಕೊಡುತ್ತವೆ. ಸರ್ಕಾರ, ಸಮಾಜ, ಸಂಸ್ಥೆಗಳು ದೇಶದ ಆಧಾರ ಸ್ತಂಭವಾಗಿವೆ. ನಿರಂತರ ಕಲಿಕೆ, ಅಧ್ಯಯನಗಳ ಮೂಲಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಹೇಳಿದರು.ಬೆಂಗಳೂರು ಕೆಂಪೇಗೌಡ ಇಂಟರ್‌ನ್ಯಾಶನಲ್ ಏರ್ ಪೋರ್ಟ್ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿ ಹರಿ ಕೆ. ಮರಾರ್ ಮಾತನಾಡಿ, ವಿಶ್ವದಲ್ಲೇ ಭಾರತ ಉನ್ನತ ಸ್ಥಾನಕ್ಕೆ ಬರಲು ಇಂದಿನ ಪೀಳಿಗೆಯ ಪಾತ್ರ ಪ್ರಮುಖವಾಗಿದೆ. ಯುವಕರು ಸಾಧನೆ ಮೂಲಕ ದೇಶದ ಹೆಸರನ್ನು ಪ್ರಪಂಚದಾದ್ಯಂತ ಪಸರಿಸುವ ಕಾರ್ಯಕ್ಕೆ ಮುಂದಾಗಬೇಕು. ನಿಮ್ಮ ಜ್ಞಾನವನ್ನು ಶಿಕ್ಷಣದಲ್ಲಿ ಹೂಡಿಕೆ ಮಾಡಿ, ಎಲ್ಲ ಕ್ಷೇತ್ರಗಳಲ್ಲಿಯೂ ನಿರಂತರ ಸಂಪರ್ಕ ಹೊಂದಬೇಕು. ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಚಿನ್ನದ ಪದಕ ವಿಜೇತರು:ಬೆಳಗಾವಿಯ ಕೆ.ಎಲ್.ಇ. ಡಾ.ಎಂ.ಎಸ್ ಶೇಷಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿ ಸಾಹಿಲ್ ಎಂ. ಸೋಮನಾಚೆಗೆ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ 12 ಚಿನ್ನದ ಪದಕ, ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಜಿ.ವಿಷ್ಣು ಪ್ರಿಯಾಗೆ ಕಂಪ್ಯೂಟರ್ ಸೈನ್ಸ್ ಮತ್ತಿ ಎಂಜಿನಿಯರಿಂಗ್ ವಿಭಾಗದಲ್ಲಿ 10, ಬೆಂಗಳೂರಿನ ಎಸ್.ಜೆ.ಬಿ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ರೇಷ್ಮಾ ಜಿ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ 7, ಬೆಂಗಳೂರಿನ ಎಸ್.ಜೆ.ಬಿ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮೋಹನಕುಮಾರ ಎಲ್. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ 7, ಬಳ್ಳಾರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಹೃತಿಕಾ ಜಿ. ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ 7, ಬೆಂಗಳೂರಿನ ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಕೃತಿಕಾ ಸೆಂಥಿಲ್ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 4, ಬೆಂಗಳೂರಿನ ಆರ್.ಎನ್.ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಅನುಶ್ರೀ ಪಿ. ಎಲೆಕ್ಟ್ರಾನಿಕ್ಸ್ ಮತ್ತು ಇನಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ 4, ಕೆ.ಜಿ.ಎಫ್.ನ ಡಾ.ಟಿ. ತಿಮ್ಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮಾಲತೇಶ ಎನ್., ಮೈನಿಂಗ್ ಎಂಜಿನಿಯರಿಂಗ್ ವಿಭಾಗದಲ್ಲಿ 2, ದಾವಣಗೆರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಜನನಿ ಡಿ. ಬಯೋ ಟೆಕ್ನಾಲಜಿ ಎಂಜಿನಿಯರಿಂಗ್ ವಿಭಾಗದಲ್ಲಿ 2 ಹಾಗೂ ಮಂಗಳೂರಿನ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸೌರವ ವಿ.ಇಂಗಲ್ ಗೆ 2 ಚಿನ್ನದ ಪದಕ ಪ್ರದಾನ ಮಾಡಲಾಯಿತು.