ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಕಳೆದ ಎರಡು ವರ್ಷಗಳಿಂದ ಭಗವಂತನ ಅನುಗ್ರಹ ಹಾಗೂ ನನ್ನ ಅಳಿಯ ಮಂಜುನಾಥ್, ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಸುದರ್ಶನ್ ಬಲ್ಲಾಳ್ ಮತ್ತವರ ತಂಡದ ಪ್ರಾಮಾಣಿಕ ಪ್ರಯತ್ನದಿಂದ ಆರೋಗ್ಯವಾಗಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವೈದ್ಯರ ಸೇವೆಯನ್ನು ಶ್ಲಾಘಿಸಿದರು.ತಾಲೂಕಿನ ಹಳೇಕೋಟೆ ಗ್ರಾಮದ ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಭಾನುವಾರ ಸಹಸ್ರ ಕುಂಭಾಭಿಷೇಕ ಜರಗುವ ಹಿನ್ನೆಲೆಯಲ್ಲಿ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾವು ದೇವರನ್ನು ನಂಬಿದ್ದೇವೆ. ನಮ್ಮ ತಂದೆ ಇಲ್ಲಿನ ಹಳೆಯ ದಾರಿಯಲ್ಲಿ ನನ್ನನ್ನು ಕರೆದುಕೊಂಡು ಬರುತ್ತಿದ್ದರು. ನನಗೆ ಎಂಟು ವರ್ಷವಿದ್ದಾಗ ಈ ಕಾರ್ಯಕ್ರಮ ನಡೆದಿತ್ತು. ನನ್ನ ಆರೋಗ್ಯ ಗುಣಮುಖವಾದರೆ ನಿನ್ನ ಸಮ್ಮುಖದಲ್ಲಿ ೧೦೦೧ ಕಳಸ ಪೂಜಾ ಕೈಂಕರ್ಯ ಮಾಡುತ್ತೇನೆ ಎಂದು ಹರಕೆ ಕಟ್ಟಿಕೊಂಡಿದ್ದೆ. ಇಂದು ಅದನ್ನು ತೀರಿಸಿದ್ದೇನೆ. ನಿನ್ನೆ ಸಂಜೆ ಆರು ಗಂಟೆಯಿಂದ ರಂಗನಾಥನ ಸಾನಿಧ್ಯದಲ್ಲಿ ಹಲವಾರು ಪುರೋಹಿತರು ಶಾಸ್ತ್ರೋಕ್ತವಾಗಿ, ನಮ್ಮ ಸಂಪ್ರದಾಯದಂತೆ ಪೂಜಾ ಕಾರ್ಯಕ್ರಮ ಮಾಡುತ್ತಿದ್ದಾರೆ ಮತ್ತು ಭಾನುವಾರ ಸಂಜೆ ೪ ಗಂಟೆಗೆ ಪೂಜೆ ಮುಗಿಯಬಹುದು ಎಂದರು. ಎಂಬತ್ತು ವರ್ಷಗಳ ಹಿಂದೆ ಪೂಜೆ ನಡೆದಿತ್ತು, ವಯಸ್ಸಿನ ಕಾರಣದಿಂದ ನನಗೆ ಮಂಡಿ ನೋವಿದೆ, ನಾನು ಮೇಲೆ ಹತ್ತಿ ಕಳಸಕ್ಕೆ ಪೂಜೆ ಮಾಡಲು ಆಗಲ್ಲ, ನಾನು ದೇವರಿಗೆ ತುಂಬಾ ಆಭಾರಿಯಾಗಿದ್ದೇನೆ, ನನಗೆ ಕಿಡ್ನಿ ಫೇಲಾಗಿ ತೊಂದರೆ ಆಗಿತ್ತು, ಎಲ್ಲಾ ಸರಿ ಹೋಗಿದೆ ಎಂದು ನುಡಿದು, ವೈದ್ಯರ ಸೇವೆಯನ್ನು ಪುನಃ ಸ್ಮರಿಸಿ ಅಭಿನಂದಿಸಿದರು.
ಈ ಪೂಜಾ ಮಹೋತ್ಸವದ ಆಯೋಜನೆಯ ಬಗ್ಗೆ ರಾಜಕೀಯ ಬೆರಸಬಾರದು ಮತ್ತು ಯಾವುದೇ ರಾಜಕೀಯ ಇಲ್ಲ, ಆದ್ದರಿಂದ ರೇವಣ್ಣ ವ್ಯವಸ್ಥೆ ಮಾಡಿದರೆ ಅಪಾರ್ಥ ಕಲ್ಪಿಸುತ್ತಾರೆ ಎಂಬ ದೃಷ್ಠಿಯಿಂದ ಸ್ನೇಹಿತರಿಗೆ ಹೇಳಿ ವ್ಯವಸ್ಥೆ ಮಾಡಲು ತಿಳಿಸಿದ್ದೆ, ಅವರೇ ಖದ್ದು ನಿಂತು ಎಲ್ಲಾ ವ್ಯವಸ್ಥಿತವಾಗಿ ಮಾಡಿದ್ದಾರೆ ಎಂದರು. ಪೂಜಾ ಮಹೋತ್ಸವದಲ್ಲಿ ನನ್ನ ಶ್ರೀಮತಿ, ರೇವಣ್ಣ, ಭವಾನಿ ರೇವಣ್ಣ ಇದ್ದಾರೆ ಮತ್ತು ನಾಳೆ ಬರುವ ಎಲ್ಲಾ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.ರಾಜಕೀಯದಿಂದ ದೂರ ಹೋಗಲ್ಲವೆಂದು ಸ್ಪಷ್ಟನೆ:
ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, ಬಾಂಬ್ ಬ್ಲಾಸ್ಟ್ ಬಗ್ಗೆ ಗೊತ್ತಿಲ್ಲ, ಪೂರ್ಣ ವಿವರ ನನ್ನ ಮುಂದೆ ಇಲ್ಲ, ನನ್ನ ಮಗ ಹರದನಹಳ್ಳಿಯಲ್ಲಿ ಟಿವಿ ಹಾಕಿಸಿಲ್ಲ ಮತ್ತು ಪೇಪರ್ ಕೂಡ ನೋಡಿಲ್ಲ. ಸದ್ಯ ನಾನು ನನ್ನ ಮನಸ್ಸು ರಂಗನಾಥಸ್ವಾಮಿ ಅಷ್ಟೇ, ಹಾಗಂದ ಮಾತ್ರಕ್ಕೆ ರಾಜಕೀಯದಿಂದ ದೂರ ಹೋಗಲ್ಲವೆಂದು ಸ್ಪಷ್ಟನೆ ನೀಡಿದರು.ಮುಜರಾಯಿ ಇಲಾಖೆಯ ಆಗಮಿಕ ಪಂಡಿತ ವಿಜಯ ಕುಮಾರ್ ರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಜರುಗುತ್ತಿದೆ. ಶುಕ್ರವಾರ ರಾತ್ರಿ ಹರದನಹಳ್ಳಿ ಗ್ರಾಮದ ತಮ್ಮ ಸ್ವಗೃಹದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಶ್ರೀಮತಿ ಚನ್ನಮ್ಮನವರ ಜತೆಗೆ ವಾಸ್ತವ್ಯ ಮಾಡಿದ್ದರು ಎನ್ನಲಾಗಿದೆ.
ಗತ ರಾಜಕೀಯದ ಮೆಲುಕು:ಹಿಂದೆ ಹತ್ತು ರು.ಗೆ ಬಾಡಿಗೆ ಮನೆಯಲ್ಲಿ ಇದ್ದೆ. ಕಾಂಗ್ರೆಸ್ ಟಿಕೆಟ್ ತಪ್ಪಿತು. ಆ ಸನ್ನಿವೇಶದಲ್ಲಿ ಬ್ರಾಹ್ಮಿ ಮುಹೂರ್ತದ ೫ ಗಂಟೆಗೆ ದೇವರ ದರ್ಶನವಾಯಿತು, ನನ್ನ ಹೆಂಡತಿ ಹೇಳಿದ್ರು, ಆ ರಂಗನಾಥ ಇದ್ದಾನೆ. ಚುನಾವಣೆಗೆ ನಿಂತ್ಕಳಿ ಎಂದು. ನಂತರ ಜನರೇ ದುಡ್ಡು ಹಾಕಿ ಚುನಾವಣೆ ಮಾಡಿದ್ರು, ಗೆದ್ದೆ. ಅಲ್ಲಿಂದ ಪ್ರದಾನಮಂತ್ರಿಯಾದೆ ಎಂದು ಹಿಂದಿನ ರಾಜಕೀಯ ಜೀವನವನ್ನು ಮೆಲುಕು ಹಾಕಿದರು.