ಯಾದಗಿರಿ : ನರೇಗಾ ಕಾಮಗಾರಿ ಸ್ಥಳಕ್ಕೆ ಜಿಪಂ ಸಿಇಓ ಪನ್ವಾರ ಭೇಟಿ

KannadaprabhaNewsNetwork |  
Published : Apr 08, 2024, 01:13 AM ISTUpdated : Apr 08, 2024, 09:33 AM IST
ಯಾದಗಿರಿ ತಾಲೂಕು ಪಂಚಾಯ್ತಿ ವ್ಯಾಪ್ತಿಯ ವರ್ಕನಳ್ಳಿ ಗ್ರಾಮ ಪಂಚಾಯ್ತಿಯ ಕೊಯ್ಲೂರ್ ಗ್ರಾಮದಲ್ಲಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಅವರು ಭೇಟಿ ನೀಡಿ, ಪರಿಶೀಲಿಸಿದರು. | Kannada Prabha

ಸಾರಾಂಶ

ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಜಾಬ್ ಕಾರ್ಡ್ ಗೆ 100 ದಿನ ಅಕುಶಲ ಕೂಲಿ ಕೆಲಸ ನೀಡಲಾಗುವುದು. ಎಪ್ರೀಲ್, ಮೇಹಾಗೂ ಜೂನ್ ತಿಂಗಳಲ್ಲಿ ನಿರಂತರವಾಗಿ ಕೂಲಿ ಕೆಲಸ ನೀಡಲು ಈಗಾಗಲೇ ನರೇಗಾ ವಾರ್ಷಿಕ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

 ಯಾದಗಿರಿ :  ತಾಲೂಕು ಪಂಚಾಯ್ತಿ ವ್ಯಾಪ್ತಿಯ ವರ್ಕನಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಕೊಯ್ಲೂರ್ ಗ್ರಾಮದಲ್ಲಿ ಮನರೇಗಾ ಯೋಜನೆಯ ಜಲಶಕ್ತಿ ಹಾಗೂ ‘ವಲಸೆ ಯಾಕ್ರಿ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿ’ ದುಡಿಮೆ ಖಾತ್ರಿ ವಿಶೇಷ ಅಭಿಯಾನದಡಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಅವರು ಭೇಟಿ ನೀಡಿ, ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಜಾಬ್ ಕಾರ್ಡ್ ಗೆ 100 ದಿನ ಅಕುಶಲ ಕೂಲಿ ಕೆಲಸ ನೀಡಲಾಗುವುದು. ಎಪ್ರೀಲ್, ಮೇಹಾಗೂ ಜೂನ್ ತಿಂಗಳಲ್ಲಿ ನಿರಂತರವಾಗಿ ಕೂಲಿ ಕೆಲಸ ನೀಡಲು ಈಗಾಗಲೇ ನರೇಗಾ ವಾರ್ಷಿಕ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

ಕೆರೆ, ಹಳ್ಳ ಹಾಗೂ ನಾಲಾ ಹೂಳೆತ್ತುವ ಕಾಮಗಾರಿ ಮಾಡುವುದರಿಂದ ಮಳೆಗಾಲದಲ್ಲಿ ಮಳೆ ನೀರು ಸಂಗ್ರಹವಾಗಿ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಾಗುವುದರಿಂದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿರುವ ಕೊಳವೆ ಬಾವಿಗಳ ನೀರಿನ ಮಟ್ಟ ವೃದ್ಧಿಸುತ್ತದೆ ಎಂದು ತಿಳಿಸಿದರು.

ಮನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳು ಗ್ರಾಮೀಣ ಭೂರಹಿತ ಕೃಷಿ ಕೂಲಿಕಾರರು, ರೈತರು ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಲಾಗುತ್ತಿದ್ದು, ನೀವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಬೆಸಿಗೆ ಬಿಸಿಲು ಹೆಚ್ಚು ಇರುವುದರಿಂದ ಸರ್ಕಾರವು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಿದ್ದು, ಎಪ್ರೀಲ್, ಮೇ ತಿಂಗಳಲ್ಲಿ ಶೇ.30 ಹಾಗೂ ಜೂನ್ ತಿಂಗಳಲ್ಲಿ ಶೇ. 20 ರಷ್ಟು ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡುವ ಪ್ರಮಾಣದಲ್ಲಿ ವಿನಾಯಿತಿ ನೀಡಲಾಗಿದೆ. ಏ.1 ರಿಂದ ಕೂಲಿ ಮೊತ್ತವು ದಿನಕ್ಕೆ 349 ರು.ಗಳಾಗಿದ್ದು, ಕೆಲಸ ಮಾಡಿದ ಕೂಲಿ ಹಣ ನೇರವಾಗಿ ಕೂಲಿಕಾರರ ನೋಂದಾಯಿತ ಬ್ಯಾಂಕ್ ಖಾತೆಗೆ ಜಮೆಯಾಗುವುದು ಎಂದು ತಿಳಿಸಿದರು.

ಕಾಮಗಾರಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಒಂದು ಕೆಲಸ ಮುಗಿದ ಮೇಲೆ ಇನ್ನೊಂದು ಕೆಲಸಕ್ಕಾಗಿ ಯೋಚನೆ ಮಾಡುವಂತಿಲ್ಲ. ಕೂಲಿಕಾರರು ನಿರಂತರವಾಗಿ ಕೆಲಸ ಮಾಡಲು ಈಗಾಗಲೇ ನರೇಗಾ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೊದನೆ ನೀಡಿದ್ದು ಒಂದು ಕುಟುಂಬಕ್ಕೆ 100 ದಿನ ಕೂಲಿ ಕೆಲಸ ನೀಡಲು ಕಾಮಗಾರಿಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಇದರ ಬಗ್ಗೆ ತಾಲೂಕು ಮತ್ತು ಗ್ರಾಮ ಪಂಚಾಯ್ತಿಗಳ ಹಂತದ ಅಧಿಕಾರಿಗಳಿಗೆ ಈಗಾಗಲೆ ನಿರ್ದೇಶನ ನೀಡಲಾಗಿದೆ ಎಂದರು.

ಈ ವೇಳೆ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 7ರಂದು ನಡೆಯುವ ಮತದಾನದ ಹಿನ್ನೆಲೆ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.

ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ್, ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಮಲ್ಲಣ್ಣ ಸಂಕನೂರ, ಆಪ್ತ ಸಹಾಯಕ ಕಿಶನ್ ರಾಠೋಡ, ಎಡಿಪಿಸಿ ಬನ್ನಪ್ಪ, ತಾಂತ್ರಿಕ ಸಂಯೋಜಕ ಉಮೇಶ, ಐಇಸಿ ಸಂಯೋಜಕ ಭಿಮರೆಡ್ಡಿ ವಡಗೇರಾ, ತಾಂತ್ರಿಕ ಸಹಾಯಕ ಅಭಿಲಾಷ್ ರೆಡ್ಡಿ, ಬಿಎಫ್‌ಟಿ ಚಂದ್ರಶೇಖರ, ಡಿಇಒ ರಾಜೇಶ್ವರಿ ಸೇರಿದಂತೆ ಕಾಯಕ ಬಂಧುಗಳು ಹಾಗೂ 223 ಜನ ನರೇಗಾ ಕೂಲಿಕಾರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ