ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸಹಪಾಠಿಗಳು ನೀಡಿದ ಕಿರುಕುಳದಿಂದ ಬೇಸತ್ತ ಬಹುಮುಖ ಪ್ರತಿಭೆ, ಪ್ರತಿಭಾವಂತ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಗುಳೇದಗುಡ್ಡ ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ.ಪಟ್ಟಣದ ಭಂಡಾರಿ ಹಾಗೂ ರಾಠಿ ಪದವಿ ಮಹಾವಿದ್ಯಾಲಯದಲ್ಲಿ ಬಿಎ 4ನೇ ಸೆಮಿಸ್ಟರ್ ಅಧ್ಯಯನ ಮಾಡುತ್ತಿದ್ದ ಪಟ್ಟಣದ ಅಂಜಲಿ ಸಂಗಪ್ಪ ಮುಂಡಾಸದ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ನನ್ನ ಸಾವಿಗೆ ಸಹಪಾಠಿಗಳ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ದಲ್ಲಿ ಬರೆದಿದ್ದಾಳೆ.
ಪ್ರಕರಣ ದಾಖಲಿಸಿದ ತಾಯಿ:ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಂಜಲಿ ಗುಳೇದಗುಡ್ಡದ ಭಂಡಾರಿ ಕಾಲೇಜಿನಲ್ಲಿ ಬಿಎ 4ನೇ ಸೆಮಿಸ್ಟರ್ ಅಧ್ಯಯನ ಮಾಡುತ್ತಿದ್ದಳು. ಕಾಲೇಜಿನಲ್ಲಿ ಸಹಪಾಠಿ ವಿದ್ಯಾರ್ಥಿಗಳು ಅವಳಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದ ಬೇಸತ್ತು ಮನೆಗೆ ಬಂದು, ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಿಸಿಊಟ ಮಾಡುವ ಕೂಲಿ ಕೆಲಸ ಮುಗಿಸಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ಬಂದಾಗ ಮುಚ್ಚಿಕೊಂಡಿದ್ದ ಬಾಗಿಲು ಬಾರಿಸಿದರೂ ಬಾಗಿಲು ತೆರೆಯದಿದ್ದಾಗ ಮನೆಯ ಬಾಗಿಲು ತೆಗೆದು ನೋಡಿದಾಗ ಮಗಳು ನೇಣು ಹಾಕಿಕೊಂಡಿರುವುದು ಕಂಡುಬಂತು ಎಂದು ಮೃತಳ ತಾಯಿ ಗುಳೇದಗುಡ್ಡ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.ಡೆತ್ ನೋಟ್‌ನಲ್ಲಿ ಏನಿದೆ?: ನನ್ನ ಸಾವಿಗೆ ಕಾರಣವಾದ ಈ ಮೂವರು ವ್ಯಕ್ತಿಗಳು ನನ್ನ ಜೀವನದಲ್ಲಿ ಪರಿಣಾಮ ಬೀರಿದ್ದಾರೆ. ಅವರುಗಳೆಂದರೆ ವರ್ಷಾ ಜಮ್ಮನಕಟ್ಟಿ, ಪ್ರದೀಪ ಆಳಗುಂದಿ ಮತ್ತು ಇನ್ನಿತರ ಸ್ನೇಹಿತರು. ಇವರೆಲ್ಲ ನನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದಾರೆ. ಇವರೆಲ್ಲ ನನ್ನ ಬದುಕಿನ ಮಾರಕ ವ್ಯಕ್ತಿಗಳಾಗಿದ್ದಾರೆ. ಇವರನ್ನು ಸುಮ್ಮನೆ ಬಿಡಬಾರದು ಎಂದಿರುವ ಅಂಜಲಿ ಪತ್ರದ ಕೊನೆಗೆ ಸೇಯಿಂಗ್ ಗುಡ್ ಬೈ ಎಂದು ಡೆತ್ ನೋಟ್‌ದಲ್ಲಿ ಬರೆದಿದ್ದಾಳೆ.
ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಅಂಜಲಿ, ಮೆಥೆಮೆಟಿಕಲ್ ಎಕನಾಮಿಕ್ಸ್ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಳು. ಗಾಯನ, ನೃತ್ಯ, ಅಭಿನಯ ಹಾಗೂ ಎನ್.ಸಿ.ಸಿ.ಯಲ್ಲಿ ಬಿ ಸರ್ಟಿಫಿಕೇಟ್‌ನಲ್ಲಿ ಎ ಗ್ರೇಡ್ ತೆಗೆದುಕೊಂಡಿದ್ದಳು. ಹಲವು ಎನ್‌ಸಿಸಿ ಕ್ಯಾಂಪ್ ಮಾಡಿ, ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಳು.