ಸರ್ಕಾರಿ ನೌಕರರೆಂದು ಘೋಷಿಸಲು ಗ್ರಾಪಂ ನೌಕರರ ಆಗ್ರಹ

KannadaprabhaNewsNetwork |  
Published : Oct 11, 2026, 03:00 AM IST
ಫೋಟೋ | Kannada Prabha

ಸಾರಾಂಶ

ರಾಮನಗರ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರಿಗೆ ಅನುಮೋದನೆ ನೀಡಿ ಸರ್ಕಾರಿ ನೌಕರರೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಗ್ರಾಪಂ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು

ರಾಮನಗರ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರಿಗೆ ಅನುಮೋದನೆ ನೀಡಿ ಸರ್ಕಾರಿ ನೌಕರರೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಗ್ರಾಪಂ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಜಿಪಂ ಮುಂದೆ ಜಮಾವಣೆಗೊಂಡ ನೌಕರರು ಪ್ರತಿಭಟನಾ ಧರಣಿ ನಡೆಸಿದರು. ತಮ್ಮ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು. ಬಹುತೇಕ ನೌಕರರಿಗೆ ಕನಿಷ್ಠ ವೇತನ ಹಾಗೂ ತುಟ್ಟಿ ಭತ್ಯೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಏಕಕಾಲದಲ್ಲಿ ಎಲ್ಲಾ ನೌಕರರಿಗೆ ಅನುಮೋದನೆ ನೀಡಬೇಕೆಂದು ಆದೇಶ ಮಾಡಿ 3 ವರ್ಷ ಕಳೆದರೂ ಸಹ ಜಿಪಂ ಸಿಇಒ ಅನುಮೋದನೆ ನೀಡಿಲ್ಲ ಎಂದು ಆರೋಪಿಸಿದರು.

ಸಿಐಟಿಯು ರಾಜ್ಯಾಧ್ಯಕ್ಷ ಸಂಗಾತಿ ಎಂ.ಬಿ.ನಾಡಗೌಡ ಮಾತನಾಡಿ, ವಿದ್ಯಾಭ್ಯಾಸ ಇಲ್ಲದವರಿಗೆ ಮತ್ತು ವಿದ್ಯಾಭ್ಯಾಸ ಇರುವವರಿಗೆ ಅ. 31, 2017ಕ್ಕಿಂತ ಮೊದಲು ನೇಮಕಗೊಂಡಿರುವ ಎಲ್ಲಾ ಗ್ರಾಪಂ ನೌಕರರ ಸೇವಾ ದಾಖಲಾತಿಗಳನ್ನು ಜಿಪಂ ಮಟ್ಟದಲ್ಲಿ ಶೀಘ್ರವಾಗಿ ಪರಿಶೀಲಿಸಿ, ತಕ್ಷಣವೇ ಅನುಮೋದನೆ ನೀಡಬೇಕು. ಹಲವು ತಿಂಗಳುಗಳಿಂದ ಬಾಕಿ ಇರುವ ನೌಕರರ ವೇತನವನ್ನು 15ನೇ ಹಣಕಾಸು ಯೋಜನೆಯ ನಿಧಿಯಡಿ ತಕ್ಷಣವೇ ಪಾವತಿಸಬೇಕು ಎಂದು ಒತ್ತಾಯಿಸಿದರು.

ಕಚೇರಿಗೆ ಬೆಳಗಿನ ಸಮಯ ಬಂದು ಹಾಜರಾತಿ ಹಾಕುತ್ತಿದ್ದಾರೆ. ಆದರೆ ಸಂಜೆ ವೇಳೆ ಹಾಜರಾತಿ ಹಾಕಲು ಕಾಡುಪ್ರಾಣಿಗಳ ಭಯ ಮತ್ತು ವಿದ್ಯುತ್ ಅವಗಡಗಳ ಕಾರಣ ಮೊಬೈಲ್ ಹಾಜರಾತಿ ನೀಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಇತ್ತಿಚೆಗೆ ಹಣಕಡುಬೂರು ಗ್ರಾಮದ ಕೆಲವು ಪುರುಷರು ಮತ್ತು ಮಹಿಳೆಯರು ಸೇರಿ ಹೊಸದುರ್ಗ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ಮುನಿಸಿದ್ದೇಗೌಡ ಅವರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ. ಈ ವಿಚಾರವಾಗಿ ಮೇಲಾಧಿಕಾರಿಗಳ ಗಮನಕ್ಕೆ ತಂದರು ಸಹ ಏನು ಪ್ರಯೋಜನವಾಗದ ಕಾರಣ ಮನನೊಂದ ಅವರು ಸಾವನ್ನಪ್ಪಿದ್ದರು. ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮವಹಿಸಬೇಕು. ಜತೆಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ಗ್ರಾ.ಪಂ.ನೌಕರರ ನ್ಯಾಯಯುತ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಸಂಗಾತಿ ಜಿ.ರಾಮಕೃಷ್ಣ, ಪ್ರಮುಖರಾದ ಜಿ.ನಾಗರಾಜಯ್ಯ, ಸಿ.ಆರ್.ವೆಂಕಟೇಶಯ್ಯ, ಪರಶಿವಮೂರ್ತಿ ಕನಕಪುರ, ಹೇಮಂತ್ ಕುಮಾರ್, ಎಂ.ಶ್ರೀನಿವಾಸ್, ಮಹಾದೇವಯ್ಯ, ಸಿದ್ದಲಿಂಗಯ್ಯ, ಲಕ್ಷ್ಮೀಬಾಯಿ, ಧನುಶ್ರೀ, ಪವಿತ್ರಾ, ನಿಸರ್ಗ ಸೇರಿದಂತೆ ನೂರಾರು ಗ್ರಾ.ಪಂ.ನೌಕರರು ಭಾಗಿಯಾಗಿದ್ದರು.

ಬಾಕ್ಸ್

ಬೇಡಿಕೆಗಳು

1. ಗ್ರಾಮ ಪಂಚಾಯಿತಿಯ ನೌಕರರಿಗೆ ಅನುಮೋದನೆ ನೀಡುವುದು.

2. ತರಬೇತಿ ಪಡೆದ ಮಹಿಳಾ ಚಾಲಕರು ಮತ್ತು ಸಹಾಯಕಿಯರ ಎಲ್ಲರಿಗೂ ಕೆಲಸ ನೀಡುವುದು ಮತ್ತು ವೇತನ ಪಾವತಿಸುವುದು

3. ಕೆಲಸದ ಸ್ಥಳದಲ್ಲಿ ಭದ್ರತೆ ನೀಡುವುದು.

4. ಹೊಸ ಕನಿಷ್ಠ ವೇತನ ದಿನಾಂಕ: 22-05-2026ರ ಜಾರಿ ಮಾಡುವುದು.

5. ಅನುಕಂಪದ ನೇಮಕಾತಿ ನೀಡುವುದು.

6. ನಿವೃತ್ತರಾದವರಿಗೆ ಉಪಧನ ನೀಡುವುದು.

7. ಮೊಬೈಲ್ ಹಾಜರಾತಿ ನೀಡುವುದು.

8. ಇತರೆ ಬೇಡಿಕೆಗಳು:

(ಫೋಟೊ ಕ್ಯಾಫ್ಞನ್‌)

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ರಾಮನಗರದ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಕ್ಕೆಜೋಳದ ಬೆಲೆ ಏರಿಕೆ; ರೈತರ ಕೈ ಖಾಲಿ
ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆ ಪ್ರಚಾರಕ್ಕೆ ಗಾಂಧಿ ಕೊಡುಗೆ ಅಪಾರ