ಭೂಗತ ಜಲವಿದ್ಯುತ್‌ ಯೋಜನೆ ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ತಾಲೂಕು ಒಕ್ಕೂಟ ವಿರೋಧ

KannadaprabhaNewsNetwork |  
Published : Feb 06, 2025, 11:48 PM IST
ಹೊನ್ನಾವರದ ತಾಪಂ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ತಾಲೂಕು ಒಕ್ಕೂಟದ ಸಭೆ ನಡೆಯಿತು. | Kannada Prabha

ಸಾರಾಂಶ

ಪರಿಸರ ಸೂಕ್ಷ್ಮ ಪಶ್ಚಿಮಘಟ್ಟ ಪ್ರದೇಶದಲ್ಲಿ ಶರಾವತಿ ಭೂಗತ ಜಲ ವಿದ್ಯುತ್ ಯೋಜನೆ ಅನುಷ್ಠಾನ ಮಾಡುವುದು ಯೋಗ್ಯವಲ್ಲ. ಉದ್ದೇಶಿಸಿತ ಯೋಜನೆ ಅನುಷ್ಠಾನಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಭೂಕುಸಿತದ ಅಪಾಯದ ಆತಂಕವಿದೆ.

ಹೊನ್ನಾವರ: ಶರಾವತಿ ಭೂಗತ ಜಲವಿದ್ಯುತ್‌ ಯೋಜನೆ(ಪಂಪ್ಡ್‌ ಸ್ಟೋರೇಜ್‌ ಸ್ಕೀಮ್‌) ಜಾರಿಗೆ ತರದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ತಾಲೂಕು ಒಕ್ಕೂಟ ಆಗ್ರಹಿಸಿದೆ.

ತಾಪಂ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ತಾಲೂಕು ಒಕ್ಕೂಟದ ಸಭೆಯು ಒಕ್ಕೂಟದ ಅಧ್ಯಕ್ಷ ಗಣೇಶ ಟಿ. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರ ಸಮ್ಮುಖದಲ್ಲಿ ಸಭೆ ನಡೆಯಿತು.

ಪರಿಸರ ಸೂಕ್ಷ್ಮ ಪಶ್ಚಿಮಘಟ್ಟ ಪ್ರದೇಶದಲ್ಲಿ ಶರಾವತಿ ಭೂಗತ ಜಲ ವಿದ್ಯುತ ಯೋಜನೆ ಅನುಷ್ಠಾನ ಮಾಡುವುದು ಯೋಗ್ಯವಲ್ಲ. ಉದ್ದೇಶಿಸಿತ ಯೋಜನೆ ಅನುಷ್ಠಾನಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಭೂಕುಸಿತದ ಅಪಾಯದ ಆತಂಕವಿದೆ. ಅರಣ್ಯ ನಾಶ, ಜನವಸತಿ ಪ್ರದೇಶಗಳಿಗೆ ವನ್ಯಜೀವಿಗಳು ಗುಳೆ ಹೋಗುವ ಭೀತಿ, ಪರಿಸರ ನಾಶ, ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಜನರ ಜನಜೀವನದ ಮೇಲೆ ಬೀರುವ ಅನೇಕ ದುಷ್ಪರಿಣಾಮಗಳು ಹಾಗೂ ನದಿ ನೀರಿಗೆ ಸಮುದ್ರದ ಉಪ್ಪುನೀರು ಸೇರುವ ಅಪಾಯದ ಹಿನ್ನೆಲೆ ಯೋಜನೆಯನ್ನು ಅನುಷ್ಠಾನ ಮಾಡುವುದು ಯೋಗ್ಯವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಇತ್ತೀಚಿನ ದೀನಗಳಲ್ಲಿ ಅರಬ್ಬೀ ಸಮುದ್ರದಲ್ಲಿ ಭರತ ಬಂದಾಗ ಸಮುದ್ರದ ಉಪ್ಪುನೀರು ಸುಮಾರು 15- 20 ಕಿಲೋಮೀಟರ್ ಹಿಮ್ಮುಖವಾಗಿ ಚಲಿಸಿ, ಶರಾವತಿ ನದಿ ಇಕ್ಕೆಲಗಳಲ್ಲಿ ವಾಸಿಸುವವರ ಬದುಕನ್ನು ನಾಶ ಮಾಡುತ್ತಿದೆ. ಅವರ ಬಾವಿಗಳಲ್ಲಿ ಉಪ್ಪು ನೀರು ಶೇಖರಣೆಯಾಗುತ್ತಿದೆ. ಯಾವ ಬೆಳೆಯನ್ನೂ ಬೆಳೆದು ಬದುಕಲು ಅವರಿಂದ ಸಾಧ‍್ಯವಾಗುತ್ತಿಲ್ಲ. ಹಲವು ಭಾಗಗಳಲ್ಲಿ ಜನರಿಗೆ ಕುಡಿಯುವ ನೀರು ಪೂರೈಸಲು ಗ್ರಾಮ ಪಂಚಾಯಿತಿಗಳಿಗೆ ಕಷ್ಟವಾಗುತ್ತಿದೆ. ಉದ್ದೇಶಿಸಿತ ಯೋಜನೆಯಿಂದ ಶರಾವತಿ ನದಿಯನ್ನೇ ನಂಬಿಕೊಂಡು ಬದುಕುವವರ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಮುಖಂಡರು ತಿಳಿಸಿದರು.ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಗಣೇಶ ಟಿ. ನಾಯ್ಕ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಾವಿತ್ರಿ ಎಸ್. ಭಟ್ ಕಡತೋಕಾ, ಪ್ರೇಮಾ ಎಂ. ನಾಯ್ಕ ಚಂದಾವರ, ಲಕ್ಷ್ಮೀ ಎ. ಗೌಡ ಮೆ. ಇಡಗುಂಜಿ, ಮೇರಿ ಬಿ. ಡಾಯಸ್ ಹೆರಂಗಡಿ, ಶ್ರೀಧರ ಎನ್. ನಾಯ್ಕ ಖರ್ವಾ, ಐ.ವಿ. ನಾಯ್ಕ ಮುಗ್ವಾ, ತಿಮ್ಮಪ್ಪ ಎನ್. ನಾಯ್ಕ ಕೊಡಾಣಿ, ಸುಬ್ರಹ್ಮಣ್ಯ ಎಸ್. ಭಟ್ಟಕಡ್ಲೆ, ಶ್ಯಾಮಲಾ ಜೆ. ನಾಯ್ಕ ಚಿಕ್ಕನಕೋಡ, ಮಹಾದೇವಿ ನಾಯ್ಕ ನವಿಲಗೋಣ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ