ಗ್ರಾಪಂ ಅಧ್ಯಕ್ಷ, ಸದಸ್ಯರಿಗೆ ಉಷಾರಾಣಿ ಮಾಹಿತಿ ಕೊಟ್ಟಿಲ್ಲ: ಮಲ್ಲೇಶ್
ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆಯಬೇಕಿದ್ದ ನರೇಗಾ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯು ಗ್ರಾಪಂ ಅಧ್ಯಕ್ಷ, ಕೆಲ ಸದಸ್ಯರಿಗೆ ಮಾಹಿತಿ ಇಲ್ಲದೆ, ನೋಡಲ್ ಅಧಿಕಾರಿ ಗೈರಿನಲ್ಲಿ ನಡೆಯುತ್ತಿತ್ತು. ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಹಾಗಾಗಿ ಇದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಭೆ ರದ್ದುಗೊಂಡಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಮಲ್ಲೇಶ್ ಮಾತನಾಡಿ, ಇಲ್ಲಿನ ಪಿಡಿಒ ಉಷಾರಾಣಿ ಗ್ರಾಮಸಭೆಯ ವಾರದ ಮುಂಚೆ ಅಧ್ಯಕ್ಷ, ಸಂಬಂಧಪಟ್ಟ ಗ್ರಾಪಂ ಸದಸ್ಯರಿಗೆ ಮಾಹಿತಿ ನೀಡಬೇಕು. ಆದರೆ ಇವರು ಮಾಹಿತಿ ಕೊಟ್ಟಿಲ್ಲ. ನೋಡಲ್ ಅಧಿಕಾರಿ ಸಭೆಗೆ ಗೈರಾಗಿದ್ದಾರೆ. ಇವರ ಇಲಾಖೆಯ ಅಧಿಕಾರಿಯೊಬ್ಬರನ್ನು ಕಳುಹಿಸಿದ್ದಾರೆ. ಆದರೆ ಇದು ನಿಯಮಕ್ಕೆ ವಿರುದ್ಧವಾಗಿದೆ. ಗ್ರಾಮದಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆ ಇದೆ.ಪಂಚಾಯಿತಿಯಲ್ಲಿ ಪಿಡಿಒ ಏಕ ಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಲಂಚಗುಳಿತನ ಹೆಚ್ಚಾಗಿದೆ. ಇಲ್ಲಿ ಇ-ಸ್ವತ್ತು ಮಾಡಬೇಕಾದರೆ ಕನಿಷ್ಠ ೫ ಸಾವಿರ ರು. ಲಂಚ ನೀಡಬೇಕು. ನರೇಗಾ ಯೋಜನೆಯಡಿ ₹೯ ಲಕ್ಷ ವೆಚ್ಚದಲ್ಲಿ ಬಾಳಯ್ಯನ ಕಟ್ಟೆ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಇಲ್ಲಿ ಪಿಡಿಒ ಕೂಡ ಪಾಲುದಾರರಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ವಹಿಸಬೇಕು.
ಈ ಬಗ್ಗೆ ಇಒ ಉಮೇಶ್ ಮಾತನಾಡಿ, ಈ ಸಂಬಂಧ ನವೆಂಬರ್ ತಿಂಗಳಲ್ಲಿ ನಾನು ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ವಹಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಲಕ್ಷ್ಮಿಪತಿ ಮುಖಂಡರಾದ ರಜಿನಿ, ರಾಜಪ್ಪ, ಮಹೇಶ್ ಸೇರಿದಂತೆ ಅನೇಕರು ಇದ್ದರು.
ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆಯಬೇಕಿದ್ದ ನರೇಗಾ ಹಾಗೂ 15ನೇ ಹಣಕಾಸು ಗ್ರಾಮಸಭೆ ರದ್ದುಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಂಚಾಯಿತಿ ಮುಂದೆ ನಿಂತಿರುವುದು.