ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : May 06, 2026, 03:00 AM IST
ಫೋಟೋ ಶೀರ್ಷಿಕೆ: ೫ಎಸ್‌ಡಿಟಿ೧/೨/೩/೪/೫/೬/೭ಸವದತ್ತಿಯಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಯ ಉಭಯ ದೇವಿಯ ಪುರ ಪ್ರವೇಶದ ಮೆರವಣಿಗೆಯಲ್ಲಿ ಪಾಲ್ಗೊಂಡ ಸಹಸ್ರಾರು ಜನಸ್ತೋಮ ಮತ್ತು ಮೆರವಣಿಗೆಯ ಭಾವಚಿತ್ರಗಳು. | Kannada Prabha

ಸಾರಾಂಶ

ನಾಲ್ಕೂವರೆ ದಶಕಗಳ ನಂತರ ಸವದತ್ತಿ ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯೊಂದಿಗೆ ಪ್ರಾರಂಭಗೊಂಡಿದೆ.

ಕನ್ನಡಪ್ರಭ ವಾರ್ತೆ ಸವದತ್ತಿ

ನಾಲ್ಕೂವರೆ ದಶಕಗಳ ನಂತರ ಸವದತ್ತಿ ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯೊಂದಿಗೆ ಪ್ರಾರಂಭಗೊಂಡಿದೆ.

ನಗರವೆಲ್ಲಾ ಹಬ್ಬದ ವಾತಾವರಣದಿಂದ ಕೂಡಿದೆ. ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಗ್ರಾಮದೇವಿಯರ ಪುರಪ್ರವೇಶ ಅತೀ ವಿಜೃಂಭಣೆಯಿಂದ ಜರುಗಿತು. ಶಾಸಕ ವಿಶ್ವಾಸ ವೈದ್ಯ ಹಾಗೂ ಗ್ರಾಮದೇವಿ ಜಾತ್ರಾ ಸಮಿತಿ ಅಧ್ಯಕ್ಷ ವಿರುಪಾಕ್ಷಿ ಮಾಮನಿ ಹಾಗೂ ರೈತ ಮುಖಂಡರು, ಬಾಬದಾರರು, ಹಳಬರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.ದೇವಿಯ ಮಂಟಪದ ಮುಂದೆ ವಿವಿಧ ಪೂಜಾ ಪದ್ಧತಿಯನ್ನು ನೆರವೇರಿಸಿ ನಂತರ ಸಂಗಪ್ಪನಕೊಳ್ಳಕ್ಕೆ ಆಗಮಿಸಿದ್ದ ಶ್ರೀದೇವಿಯ ಮೂರ್ತಿಗಳನ್ನು ಮೆರವಣಿಗೆ ಮೂಲಕ ಎಪಿಎಂಸಿಗೆ ಕರೆತರಲಾಯಿತು. ಎಪಿಎಂಸಿಯಲ್ಲಿ ಕುಂಭ ಮೇಳ, ಡೊಳ್ಳು, ನಗಾರಿ, ಗೊಂಬೆ ಕುಣಿತ, ಸಕಲ ವಾದ್ಯ ಮೇಳದೊಂದಿಗೆ ಉಭಯ ದೇವಿಯರನ್ನು ಸ್ವಾಗತಿಸಿ ದೇವಿಯರ ಭವ್ಯ ಮೆರವಣಿಗೆ ನೆರವೇರಿಸಲಾಯಿತು.ಹೊಸಪೇಟ ಓಣಿ ಮುಖಾಂತರ ಆನಿ ಅಗಸಿಯ ಶಕ್ತಿಗಡ್ಡಿಗೆ ದೇವಿಯರ ಆಗಮನವಾಗಿ, ಅಲ್ಲಿಂದ ಮೊಕಾಶಿ ಓಣಿಯ ತವರು ಮನೆ ಕಟ್ಟಿಗೆ ದೇವಿಯರನ್ನು ಕರೆತಂದು ಅಲ್ಲಿ ವಿವಿಧ ಆಭರಣಗಳೊಂದಿಗೆ ದೇವಿಯರಿಗೆ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ತವರು ಮನೆಯಿಂದ ಬಂಡಿ ಓಣಿ ಮುಖಾಂತರ ಸಾಗಿ ಕೋಟೆಗೆ ತಲುಪಿ ಸಂಪ್ರದಾಯದಂತೆ ಅಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಮಾಂಗಲ್ಯಧಾರಣೆ ಮಾಡಿ ಪೂಜೆ ನೆರವೇರಿಸಲಾಯಿತು. ಕೋಟೆಯಿಂದ ದೇವಿಯರ ಪಲ್ಲಕ್ಕಿಗಳ ಮೆರವಣಿಗೆಯು ಕಟ್ಟಿ ಓಣಿಯಲ್ಲಿ ನಿರ್ಮಿಸಿರುವ ಗ್ರಾಮದೇವಿಯರ ಕಟ್ಟಿಯ ಮಂಟಪದಲ್ಲಿ ದೇವಿಯರನ್ನು ಪ್ರತಿಷ್ಠಾಪಿಸಿ ಜಾತ್ರಾ ಮಹೋತ್ಸಕ್ಕೆ ಚಾಲನೆ ನೀಡಲಾಯಿತು.ಈ ಐತಿಹಾಸಿಕ ಜಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು, ಯುವಕರು, ಯುವತಿಯರು, ಹಿರಿಯರು ಪರಸ್ಪರ ಭಂಡಾರ ಎರಚಿ ಭಕ್ತಿ ಮೆರೆದರು. ಇಡೀ ನಗರವೇ ಹಬ್ಬದ ವಾತಾವರಣದಲ್ಲಿ ಮಿಂದೆದ್ದಿತು. ಗ್ರಾಮದ ಯುವಕರು ಹಳದಿ ಹಾಗೂ ಬಿಳಿ ಬಣ್ಣದ ಬಟ್ಟೆ ಧರಿಸಿ ಭಂಡಾರ ಎರಚುತ್ತಾ ಸಾಗಿದರು. ಭಕ್ತರ ದಂಡು "ಉಧೋ ಉಧೋ " ಎಂದು ಜಯಘೋಷ ಎಲ್ಲೆಡೆ ಮೊಳಗಿತ್ತು.ಮೆರವಣಿಗೆಯುದ್ದಕ್ಕೂ ಭಕ್ತರು ತಮ್ಮ ಮನೆಯ ಮುಂದೆ ನೀರನ್ನು ಹಾಕಿ ದೇವಿಯರನ್ನು ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಿದರು. ಸದಾಶಿವ ಕೌಜಲಗಿ, ಅಶ್ವತ ವೈದ್ಯ, ಜಾರಿ ನಿರ್ದೇಶನಾಲಯದ ಉಪನಿರ್ದೇಶಕ ಮಲ್ಲಿಕಾರ್ಜುನ ಮಾಮನಿ, ಅಲ್ಲಮಪ್ರಭು ಪ್ರಭುನವರ, ಚಂದ್ರಣ್ಣ ಶಾಮರಾಯನವರ, ಶ್ರೀಶೈಲ ಮುತಗೊಂಡ, ಅಡಿವೆಪ್ಪ ಬೀಳಗಿ, ಸಂಜೀವ ನವಲಗುಂದ, ಭರಮಪ್ಪ ಅಣ್ಣಿಗೇರಿ, ಅಮೀರ ಗೋರಿನಾಯ್ಕ, ಬಸವರಾಜ ಗುರನ್ನವರ, ವಿರೇಶ ಬ್ಯಾಹಟ್ಟಿ, ಬಸವರಾಜ ಅತ್ತಿಗೇರಿ, ಶ್ರೇಯಸ್‌ ಮಾಮನಿ, ಸಿದ್ದಯ್ಯ ವಡಿಯರ, ಡಿಎಸ್‌ಪಿ ಚಿದಂಬರ ಮಡಿವಾಳರ, ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಪೌರಾಯುಕ್ತ ಸಂಗನಬಸಯ್ಯ ಗದಗಿಮಠ, ೧೬ ಮನೆತನದ ರೈತರು, ಬಾಬದಾರರು, ಹಳಬರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಾಘಾತ: ಆಸ್ಪತ್ರೆಯಲ್ಲಿ 10 ಬೆಡ್‌ಗಳು ಸನ್ನದ್ಧ
ಅಥಣಿಗೆ ಬರಲಿದೆ ಕವರ್ಡ್ ಕಂಡಕ್ಟರ್ ಕೇಬಲ್‌