ಶಿಗ್ಗಾವಿ: ಗ್ರಾಮದೇವಿ ಜಾತ್ರೆ, ದೇವಿಯ ಆರಾಧನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಫಕೀರ ಸಿದ್ದರಾಮ ಸ್ವಾಮೀಜಿ ಹೇಳಿದರು.
ತಾಲೂಕಿನ ಕುನ್ನೂರ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.೪೫೦ ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಫಕೀರ ಸ್ವಾಮಿಗಳು ಕೋಳಿವಾಡ ಗ್ರಾಮದಲ್ಲಿ ವಸತಿ ಇದ್ದು, ಪೂಜಾರಿ ದೇವಿಗೆ ಮಂಗಳಾರತಿ ಮುಗಿಸಿ ದೇವಸ್ಥಾನದ ಬಾಗಿಲು ಹಾಕಿ ಹೋಗಿದ್ದು, ಫಕೀರ ಸ್ವಾಮಿಗಳು ದೇವಿಯನ್ನು ಮನಸ್ಸಿನಲ್ಲಿ ಅರಾಧಿಸಿದಾಗ ತನ್ನ ತಾನೇ ಬಾಗಿಲು ತೆರೆದ ದೇವಿಯು ಮಹಾ ಸ್ವಾಮಿಗಳಿಗೆ ಆಶೀರ್ವದಿಸಿದ ಪುರಾವೆ ಇದೆ ಎಂದರು. ಮಗುವಿನ ಬೆರಳಿಗೆ ಗಾಯವಾದರೆ ತಾಯಿಯ ಕರುಳಿಗೆ ನೋವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹತ್ತು ಮಕ್ಕಳು ಸೇರಿ ಒಬ್ಬ ತಾಯಿಯನ್ನು ಪೋಷಣೆ ಮಾಡದ ದುಸ್ಥಿತಿಗೆ ಸಮಾಜ ತಲುಪಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಗಂಜಿಗಟ್ಟಿಯ ಚರಮೂರ್ತೇಶ್ವರ ಮಠದ ಡಾ. ವೈಜನಾಥ ಮಹಾಸ್ವಾಮಿಗಳು ನೆರವೇರಿಸಿ ಆಶೀರ್ವಚನ ನೀಡಿದರು.ನಂತರ ಮಾತನಾಡಿದ ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಧಾರ್ಮಿಕತೆ ಹಾಗೂ ಸಂಸ್ಕೃತಿ ಉಳಿದಿರುವುದು ಹಳ್ಳಿಗಳಲ್ಲಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವ ಕಾರ್ಯ ಪಾಲಕರು ಮಾಡಬೇಕು, ದೂರದರ್ಶನ ಹಾಗೂ ಮೊಬೈಲ್ ಸಂಸ್ಕೃತಿಯನ್ನು ದೂರ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ವರ್ಷಾ ಮುಳಗುಂದ ನೀಡಿದರು. ಧಾರವಾಡ ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ್ ಜಾತ್ರೆಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ಯುಗಾದಿ ಹೊಸ ವರ್ಷ ಭಾರತೀಯ ಸಂಸ್ಕೃತಿಯ ಹೊಸದಿನಮಾನ ಹಬ್ಬ ಆಗಿದೆ. ಕಾಲ ಮಾನವು ಬದಲಾವಣೆ ಆಗುವ ಈ ದಿನ ಭಾರತೀಯ ಹಬ್ಬವಾಗಿದೆ, ರಾಜ್ಯದಲ್ಲಿ ನೀರಿನ ಹಾಹಾಕಾರ ಸೃಷ್ಟಿಯಾಗಿದ್ದು, ನೀರು ಅತಿ ಮುಖ್ಯ, ಅದನ್ನು ನಾವೆಲ್ಲ ಮಿತವಾಗಿ ಬಳಸಬೇಕು ಎಂದರು.ಈ ಸಂದರ್ಭದಲ್ಲಿ ಶ್ಯಾಡಂಬಿಯ ಲ್ಯಾಂಡ್ ಲಾರ್ಡ ಕಿರಣ್ ಪಾಟೀಲ್, ರಾಮಣ್ಣ ಮತ್ತಿಗಟ್ಟಿ, ಯಲ್ಲಪ್ಪ ನವಲೂರ, ಕಲ್ಲಪ್ಪ ಅಗಸಿಮನಿ, ಗಂಗಣ್ಣ ಹುಲ್ಲೂರು, ಸುರೇಶಗೌಡ ಪಾಟೀಲ, ಆಸ್ಪಕಲಿ ಮತ್ತೇಖಾನ, ಎಂ.ಎಸ್. ಹಿರೇಮಠ, ಗ್ರಾಮದ ಮುಖಂಡರು, ತಾಯಿಂದಿರು, ಯುವಕರು ಉಪಸ್ಥಿತರಿದ್ದರು.
ನಾಗರಾಜ ನಡಗೇರಿ ಕಾರ್ಯಕ್ರಮ ನಿರೂಪಿಸಿದರು.