ಕನ್ನಡಪ್ರಭ ವಾರ್ತೆ ಮೈಸೂರು
ತಾಲೂಕು ಜಯಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ಗ್ರಾಮದಲ್ಲಿ ಗ್ರಾಪಂ ಮತ್ತು ಸಂಜೀವಿನಿ ಮಹಿಳಾ ಒಕ್ಕೂಟದಿಂದ ನೂತನವಾಗಿ ಆರಂಭಿಸಲಾಗಿರುವ, ಸಾರ್ವಜನಿಕ ಸಂತೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಯಪುರ ಹೋಬಳಿ ಕೇಂದ್ರ ಬಹುವಿಸ್ತಾರ ವ್ಯಾಪ್ತಿಯನ್ನು ಹೊಂದಿದ್ದು, ತಾಲೂಕು ಕೇಂದ್ರವಾಗಲು ಅರ್ಹವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು. ಜಯಪುರ ಗ್ರಾಮದಲ್ಲಿ ಹೊಸದಾಗಿ ಸಂತೆ ಆರಂಭವಾಗಿರುವುದು ಸ್ಥಳೀಯ ರೈತರಿಗೆ ಅನುಕೂಲವಾಗಿದೆ. ಜಯಪುರ ಗ್ರಾಪಂ ಅಧಿಕಾರಿಗಳು ಎಪಿಎಂಸಿ ಗೆ ಸೂಕ್ತ ಜಾಗ ಕಲ್ಪಿಸಿಕೊಟ್ಟರೆ ಎಪಿಎಂಸಿ ಯವರು ಅಭಿವೃದ್ಧಿಪಡಿಸಿ, ಸಂತೆ ನಡೆಸುವವರಿಗೆ ಶಾಶ್ವತ ವಾಗಿ ಅನುಕೂಲ ಕಲ್ಪಿಸಬಹುದು. ಈ ಬಗ್ಗೆ ಕೂಡಲೇ ಕ್ರಮ ವಹಿಸಿ ಎಂದು ಎಪಿಎಂಸಿ ಕಾರ್ಯದರ್ಶಿ ಕುಮಾರಸ್ವಾಮಿ ಅವರಿಗೆ ಸೂಚಿಸಿದರು.ಜಯಪುರ ಹೋಬಳಿ ಕೇಂದ್ರದಲ್ಲಿ ಗುಣಮಟ್ಟದ ಡಿಜಿಟಲ್ ಗ್ರಂಥಾಲಯ ಹೊಸದಾಗಿ ಆರಂಭವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ವಿದ್ಯಾವಂತರಾಗಬೇಕು. ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು.ಕಬಿನಿ ಕುಡಿಯುವ ನೀರು ಸಮರ್ಪಕವಾಗಿ ಸಿಗುವಂತೆ ಮಾಡುವೆ ಎಂದರು. ರೈತರು ಜಮೀನು ಮಾರಿಕೊಳ್ಳದೆ ಕೃಷಿ ಮಾಡಿ, ಜೀವನ ಸಾಗಿಸಬೇಕು. ಆಡಂಬರ ಮದುವೆ ಮಾಡಲು ಜಮೀನು ಮಾರಬೇಡಿ. ಅದೇ ಜಮೀನನ್ನು ಮಕ್ಕಳ ಹೆಸರಿಗೆ ಬರೆದು ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಿ. ಸಾಮೂಹಿಕ ವಿವಾಹಗಳಲ್ಲಿ ಸರಳ ವಿವಾಹ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ನಂತರ ಉನ್ನತ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಿದರು. ಗ್ರಾಪಂ ಅಂಗವಿಕಲರ ಶೇ. 3ರ ಅನುದಾನದಲ್ಲಿ 57 ಮಂದಿ ಅಂಗವಿಕಲರಿಗೆ ಹಾಗೂ ಶವ ಸಂಸ್ಕಾರ ಸಹಾಯದನವಾಗಿ 5 ಸಾವಿರ ಸಹಾಯದನ ಚೆಕ್ ನೀಡಿದರು. ರೇಷ್ಮೆ ಘಟಕ ನಿರ್ಮಿಸಲು ರೈತರಿಗೆ ಮಂಜೂರಾತಿ ಪತ್ರ ನೀಡಿದರು.ಸಮುದಾಯ ಅರೋಗ್ಯ ಕೇಂದ್ರದಲ್ಲಿ ಹೆರಿಗೆ ವಾರ್ಡ್ ಗೆ 3 ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಸೋಲಾರ್ ಪ್ಲಾಂಟ್ ಗೆ ಚಾಲನೆ ನೀಡಿದರು. 20 ಲಕ್ಷ ವೆಚ್ಚದ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ, ಅರಿವು ಕೇಂದ್ರ ನೂತನ ಕಟ್ಟಡ ಉದ್ಘಾಟಿಸಿದರು. 3 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು. ಕಂದಾಯ ಅಧಿಕಾರಿಗಳ ಕಟ್ಟಡ ಉದ್ಘಾಟಿಸಿದರು.
ಜಿಪಂ ಉಪಕಾರ್ಯದರ್ಶಿ ಸವಿತಾ, ತಾಪಂ ಸಿಇಒ ಸಿ. ಕೃಷ್ಣ, ಪಂಚಾಯತ್ ರಾಜ್ ಉಪವಿಭಾಗ ಸಹಾಯಕ ಎಂಜಿನಿಯರ್ ಎಚ್.ಸಿ. ರವಿಕುಮಾರ್, ಜಯಪುರ ನಾಡಕಚೇರಿ ಉಪತಹಸೀಲ್ದಾರ್ ಎಂ. ನಿಂಗಪ್ಪ, ಕಂದಾಯ ಅಧಿಕಾರಿ ಲೋಹಿತ್, ಎಪಿಎಂಸಿ ಮಾಜಿ ನಿರ್ದೇಶಕ ಮಹದೇವು, ಸಮಾಜ ಸೇವಕ ಎಸ್. ಶ್ರೀಕಾಂತ್, ಜಯಪುರ ಗ್ರಾಪಂ ಅಧ್ಯಕ್ಷ ಎಂ. ಮಹಾದೇವಯ್ಯ, ಉಪಾಧ್ಯಕ್ಷೆ ಬಿ.ರಾಣಿ ಮಂಜುನಾಥ್ ಇದ್ದರು.