ದಾವಣಗೆರೆ: ಪ್ರಸ್ತುತ ವ್ಯಾಕರಣ, ಛಂದಸ್ಸು, ಹಳೆಗನ್ನಡ ಸರಿಯಾಗಿ ಓದಿ, ಬೋಧಿಸುವ ಶಿಕ್ಷಕರು, ಬೋಧಕರ ಸಂಖ್ಯೆ ಕಡಿಮೆ ಇದ್ದು, ಇಂತಹ ವಿಪರ್ಯಾಸದ ಸ್ಥಿತಿಯಲ್ಲಿ ನಾವು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಕುಮಾರ ಚಲ್ಯ ವಿಷಾದಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಸಂವಹನ ಪ್ರಕಾಶನ, ಮಳಲ್ಕೆರೆ ಗುರುಮೂರ್ತಿ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಮಳಲ್ಕೆರೆ ಗುರುಮೂರ್ತಿ ವ್ಯಾಖ್ಯಾನಿಸಿರುವ ಸೋಮೇಶ್ವರ ಶತಕ ಕೃತಿ ಲೋಕಾರ್ಪಣೆಯಲ್ಲಿ ಮಾತನಾಡಿದರು.ಮೂಕ ಕಾವ್ಯ, ಪಠ್ಯಗಳನ್ನು ಸರಿಯಾದ ಕ್ರಮದಲ್ಲಿ ಅಧ್ಯಯನ ಮಾಡಬೇಕು. ಆದರೆ, ಕನ್ನಡ ಪ್ರಾಧ್ಯಾಪಕರು, ಬೋಧಕರು ಮೂಲಪಠ್ಯವನ್ನೇ ಓದುತ್ತಿಲ್ಲ. ಇದೇ ಇಂದಿನ ದುರಂತ ಎಂದರು.
ಶತಮಾನಗಳ ಹಿಂದಿನ ಸಾಹಿತ್ಯವನ್ನೇ ಇಟ್ಟುಕೊಂಡು, ಜ್ಞಾನಪೀಠ ಪಡೆಯುವ ಕಾಲಘಟ್ಟದಲ್ಲೇ ನಾವು ಇಂದಿಗೂ ಇದ್ದೇವೆ. ಹಳೆಯ ಸಾಹಿತ್ಯ ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿಯನ್ನು ಕಸಾಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪರ ಹೋರಾಟಗಾರರು ಮಾಡಬೇಕಾಗಿದೆ. ಕಸಾಪ, ಪ್ರಾಧಿಕಾರ ಮಾಡಿದ ಅನುದಾನ, ವ್ಯಾಖ್ಯಾನಗಳಲ್ಲೂ ಸಾಕಷ್ಟು ಲೋಪ ಇವೆ ಎಂದು ತಿಳಿಸಿದರು.ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕನ್ನಡವನ್ನು ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ, ಬಂಡಾಯ ಹೀಗೆ ವಿಭಜನೆ ಮಾಡಿ, ಸರಳೀಕೃತ ಮಾಡಿಕೊಂಡಿದ್ದೇವೆ. ಈಗಿನ ಪ್ರಾಧ್ಯಾಪಕರು ಹಳೆಗನ್ನಡ, ಮಧ್ಯಕಾಲೀನ ಕನ್ನಡವನ್ನು ಓದದೇ, ವ್ಯಾಖ್ಯಾನ ಓದಿ, ಬೋಧಿಸುತ್ತಿರುವುದು ತಪ್ಪು. ಮೂಲ ಕಾವ್ಯ, ಪಠ್ಯಗಳನ್ನು ಸರಿಯಾದ ಕ್ರಮದಲ್ಲಿ ಅಧ್ಯಯನಮಾಡಬೇಕು. ಇನ್ನಾದರೂ ಈ ನಿಟ್ಟಿನಲ್ಲಿ ಪ್ರಾಧ್ಯಾಪಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ, ಸಾಂಸ್ಕೃತಿಕ ಸಂದರ್ಭದಲ್ಲಿ ಪ್ರಾಚೀನರು (ವಯೋವೃದ್ಧರು) ಅರ್ಹತೆ ವೃದ್ಧಾಶ್ರಮ ಸೇರುವಂತಾಗಿದೆ. ಅದೇ ಪರಿಸ್ಥಿತಿ ಹಳೆಗನ್ನಡ ಸಾಹಿತ್ಯದ್ದೂ ಆಗಿದೆ. ಹಳೆ ಗನ್ನಡವನ್ನೇ ಮೂಲೆಗುಂಪು ಮಾಡಲಾಗಿದೆ. ಈ ಬಗ್ಗೆ ಮಾತನಾಡುವ ನಮ್ಮನ್ನು ಪಂಡಿತರನ್ನಾಗಿ ದೂರ ಇಡುತ್ತಾ ಬಂದಿದ್ದಾರೆ. ಹಿರಿಯರ ಬಗ್ಗೆ ಗೌರವ, ಪಂಡಿತರ ಬಗ್ಗೆ ಗೌಣ ಇರುವ ಅಪಸವ್ಯಗಳ ಮಧ್ಯೆ ನಾವುಗಳು ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ದಿನಮಾನಗಳಲ್ಲಿ ಹಳೆಗನ್ನಡ ನಿರ್ಲಕ್ಷ್ಯಕ್ಕೊಳಗಾಗಿದೆ. ಮಧ್ಯ ಕಾಲೀನ ಸಾಹಿತ್ಯದಲ್ಲಿ ಇರುವ ಲೋಪ, ದೋಷವಾದರೂ ಏನೆಂಬುದೇ ಅರ್ಥವಾಗುತ್ತಿಲ್ಲ. ಸಾಹಿತ್ಯ ಓದುವ ಗಾಂಭೀರ್ಯ, ಶಿಸ್ತು, ಬದ್ಧತೆ ಈಗ ಕಾಣುತ್ತಲೇ ಇಲ್ಲ. ಕಾವ್ಯ, ಸಾಹಿತ್ಯವನ್ನು ಓದಿ, ತಿದ್ದುವವನೇ ನಿಜವಾದ ಓದುಗನಾಗುತ್ತಾರೆ. ಸರಿಯಾಗಿ ಓದದೇ, ದೋಷ ಹುಡುಕುವವರು ವಿಮರ್ಶಕರಾಗುತ್ತಾರೆ. ಕಾವ್ಯವಾಚನ ಪ್ರತಿಭೆ ಮತ್ತು ಪಾಂಡಿತ್ಯದ ಸಂಗಮವಾಗಿದೆ ಎಂದು ತಿಳಿಸಿದರು.ಕನ್ನಡ ಅಧ್ಯಾಪಕ ಸಿರಿಗೆರೆ ನಾಗರಾಜ ಮಾತನಾಡಿ, ಗುರುಮೂರ್ತಿಯವರ ಸಾಹಿತ್ಯ ಕೃಷಿ ವಿಶೇಷವಾದುದು. ತ್ರಿಪದಿಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ನಾಲ್ಕು ಸಾವಿರಕ್ಕೂ ಅದಿಕ ತ್ರಿಪದಿ ರಚಿಸಿದ್ದಾರೆ. ಷಟ್ಪದಿಯಲ್ಲಿ ಕಾವ್ಯ ರಚಿಸುವಲ್ಲೂ ಜಿಲ್ಲೆಯ ಅಪರೂಪದ ಕವಿ. ಹಳೆಗನ್ನಡ ಕಾವ್ಯ ಓದುವುದು ಅಸಾಧ್ಯವೆಂಬ ಕಾಲದಲ್ಲಿ ಗುರುಮೂರ್ತಿಯವರು ಕಾವ್ಯ ಬರೆಯುತ್ತಿದ್ದಾರೆ. ಕನ್ನಡ ಪ್ರಾಧ್ಯಾಪಕರಿಗೆ ಸೋಮೇಶ್ವರ ಶತಕ ಬೋಧಿಸುವುದು ಕಷ್ಟವಾಗುತ್ತಿದೆ. ಅಂತಹವರಿಗೆ ಇದೊಂದು ಸೂಕ್ತ ಕೃತಿ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಮಳಲ್ಕೆರೆ ಗುರುಮೂರ್ತಿ, ನಿವೃತ್ತ ಪ್ರಾಧ್ಯಾಪಕ ಸಿ.ವಿ.ಪಾಟೀಲ, ಸಹಾಯಕ ಪ್ರಾಧ್ಯಾಪಕ ಹಾ.ಮ.ನಾಗಾರ್ಜುನ, ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ಸುರೇಶ, ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಬೇತೂರು ಎಂ.ಷಡಕ್ಷರಪ್ಪ ಮತ್ತಿತರರಿದ್ದರು.ಯುವ ವಿದ್ವಾಂಸರು ಸಮಾಜದಲ್ಲಿ ಕಾಣದೇ, ವಿಧ್ವಂಸಕರೆ ಕಾಣಿಸುತ್ತಿದ್ದಾರೆ. ಅಧ್ಯಯನ ಸಂಸ್ಥೆಯ ಬದಲಾಗಿ ಅಧ್ವಾನ ಸಂಸ್ಥೆಯಾಗಿ ರೂಪುಗೊಂಡಿವೆ. ಶಿಕ್ಷಣ ಕ್ಷೇತ್ರ ಸಹ ಭ್ರಷ್ಟವಾಗಿರುವ ಕಾಲದಲ್ಲಿ ಅಪ್ಪಟ ಪ್ರಾಧ್ಯಾಪಕರನ್ನು ಹುಡುಕುವುದು ಕಷ್ಟವಾಗಿದೆ. 14ನೇ ಶತಮಾನದ ಕವಿ ಬರೆದ ಕೃತಿಯನ್ನು ಮಳಲ್ಕೆರೆ ಗುರುಮೂರ್ತಿ ಎಲ್ಲರಿಗೂ ಸಲ್ಲುವಂತೆ ವ್ಯಾಖ್ಯಾನ ಮಾಡಿದ್ದಾರೆ. ಸರಳ ಭಾಷೆಯಲ್ಲೇ ಬರೆದಿದ್ದಾರೆ.
- ಡಾ.ಕುಮಾರ ಚಲ್ಯ, ನಿವೃತ್ತ ಪ್ರಾಧ್ಯಾಪಕರು.