ಕನ್ನಡಪ್ರಭ ವಾರ್ತೆ ಹಲಗೂರು
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಶ್ರೀ ಮುತ್ತತ್ತಿರಾಯಸ್ವಾಮಿ ಭವ್ಯ ರಥೋತ್ಸವದಲ್ಲಿ ಅಪಾರ ಭಕ್ತರು ಹಾಲರವಿ ಸೇವೆ, ತೆಂಗಿನಕಾಯಿ ಸಿಪ್ಪೆಯನ್ನು ಎಡೆಯುವ ಸೇವೆ, ಪಲ್ಲಕ್ಕಿ ಸೇವೆ ಸೇರಿದಂತೆ ನಾಲ್ಕು ದಿನಗಳ ವಿಶೇಷ ಪೂಜೆ- ಪುನಸ್ಕಾರಗಳಲ್ಲಿ ಭಾಗವಹಿಸಿದರು.
ಕಳೆದ ಸೆ.1 ರಂದು ಪಾದಧಾರೆಯಲ್ಲಿ ಉಪವಾಸ, ದೇವರಿಗೆ ವಿಶೇಷ ಪೂಜೆಗಳು ನಡೆದವು. ಸೆ.2 ರಂದು ಮಧ್ಯಾಹ್ನ ಪಾದಧಾರೆಯಲ್ಲಿ ಹಾಲರವಿ ಸೇವೆ, ಕಾಯಿ ಒಡೆಯುವ ಸೇವೆ ಮತ್ತು ದೇವರ ಉತ್ಸವಗಳು ನಡೆದವು.ಸೆ.3 ರಂದು ಕಾವೇರಿ ನದಿಯಿಂದ ಗಂಗೆಯನ್ನು ತಂದು ಶ್ರೀ ಆಂಜನೇಯಸ್ವಾಮಿ ಮೂರ್ತಿಯನ್ನು ಶುಚಿಗೊಳಿಸಿ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕಗಳನ್ನು ನಡೆಸಿ ದೇವರಿಗೆ ಪ್ರಿಯವಾದ ತುಳಸಿ ಹಾರ ಸೇರಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳನ್ನು ನಡೆಸಲಾಯಿತು.
ನಂತರ ತೆಂಗಿನಕಾಯಿಯನ್ನು ಹಗ್ಗದಿಂದ ಬಿಗಿದು ತೆಂಗಿನಕಾಯಿ ಸಿಪ್ಪೆಯನ್ನು ಬಿದಿರು ದೊಣ್ಣೆಯಿಂದ ಎಡೆಯುವುದನ್ನು ವಿಶೇಷವಾಗಿ ಭಕ್ತಿ, ಭಾವ ಪೂರಕವಾಗಿ ನಡೆಸಲಾಯಿತು. ಮಧ್ಯಾಹ್ನ 12 ಗಂಟೆಗೆ ವಿವಿಧ ಬಗೆಯ ಹೂಗಳಿಂದ ಆಲಂಕಾರ ಮಾಡಿದ್ದ ಮುತ್ತತ್ತಿರಾಯನ ರಥೋತ್ಸವಕ್ಕೆ ಹಲಗೂರು ಉಪ ತಹಸೀಲ್ದಾರ್ ಕೆ. ನಟರಾಜು ಅವರು ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವಾಲಯದಿಂದ ಕಾವೇರಿ ನದಿ ದಂಡೆಯವರೆಗೂ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ರಥ ಎಳೆದು ಮುತ್ತತ್ತಿರಾಯನ ಕೃಪೆಗೆ ಪಾತ್ರರಾದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಜಾನಪದ ಕಲಾ ತಂಡದಿಂದ ವೀರಗಾಸೆ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ, ಪೂಜಾ ಕುಣಿತ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.
ಜಾತ್ರೋತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ನಾಲ್ಕು ದಿನಗಳ ಜಾತ್ರೋತ್ಸವದಲ್ಲಿ ಮಳವಳ್ಳಿ, ಮಂಡ್ಯ, ಕನಕಪುರ, ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಮುತ್ತತ್ತಿರಾಯನ ಕೃಪೆಗೆ ಪಾತ್ರರಾದರು.