ರಾಯಚೂರಿನ ವಿವಿಧೆಡೆ ವಿನಾಯಕನಿಗೆ ಅದ್ಧೂರಿ ವಿದಾಯ

KannadaprabhaNewsNetwork |  
Published : Sep 24, 2026, 01:30 AM IST
23ಕೆಪಿಆರ್‌ಸಿಆರ್‌ 01ಮತ್ತು02:  | Kannada Prabha

ಸಾರಾಂಶ

ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿ ವಿವಿಧ ತಾಲೂಕುಗಳಲ್ಲಿ ಗಣೇಶೋತ್ಸವ ಸಂಭ್ರಮ ಮುಂದುವರಿದಿದ್ದು, 9ನೇ ದಿನವಾದ ಬುಧವಾರ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನೆ ಅದ್ಧೂರಿಯಾಗಿ ನಡೆಯಿತು. ಗಣೇಶ ಮೂರ್ತಿಗಳನ್ನು ಅಲಂಕೃತ ವಾಹನಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಡಿಜೆ ಸದ್ದಿಗೆ ಯುವಕರು, ಮಕ್ಕಳು ಸೇರಿದಂತೆ ಭಕ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿ ವಿವಿಧ ತಾಲೂಕುಗಳಲ್ಲಿ ಗಣೇಶೋತ್ಸವ ಸಂಭ್ರಮ ಮುಂದುವರಿದಿದ್ದು, 9ನೇ ದಿನವಾದ ಬುಧವಾರ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನೆ ಅದ್ಧೂರಿಯಾಗಿ ನಡೆಯಿತು. ಗಣೇಶ ಮೂರ್ತಿಗಳನ್ನು ಅಲಂಕೃತ ವಾಹನಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಡಿಜೆ ಸದ್ದಿಗೆ ಯುವಕರು, ಮಕ್ಕಳು ಸೇರಿದಂತೆ ಭಕ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಸಾಗುತ್ತಿದ್ದಂತೆ ಭಕ್ತರು ‘ಗಣಪತಿ ಬಪ್ಪಾ ಮೋರಿಯಾ’ ಘೋಷಣೆಗಳನ್ನು ಕೂಗಿದರು. ಡಿಜೆ ಸಂಗೀತಕ್ಕೆ ಯುವಕರ ನೃತ್ಯ ಗಮನ ಸೆಳೆಯಿತು. ಕೆಲವೆಡೆ ಮಳೆ ಸುರಿದರೂ ಮೆರವಣಿಗೆಯ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ. ಮಳೆಯನ್ನೂ ಲೆಕ್ಕಿಸದೆ ಯುವಕರು ಹಾಗೂ ಭಕ್ತರು ನೃತ್ಯ ಮಾಡುತ್ತಾ ಸಾಗಿದರು.

ನಗರದ ವಿವಿಧ ಬಡಾವಣೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆಯು ಮಂಗಳವಾರ ಮಧ್ಯಾಹ್ನದಿಂದ ಆರಂಭಗೊಂಡು ಇಡೀ ರಾತ್ರಿ ನಡೆದು ಬುಧವಾರ ರಾತ್ರಿವರೆಗೂ ಭರದಿಂದ ನಡೆಯಿತು. ಮಂಗಳವಾರ ಸಂಜೆಯಿಂದಲೆಯೇ ಮಳೆ ಆರಂಭ ಕಂಡಿತು. ಇಡೀ ರಾತ್ರಿ ಮೆರವಣಿಗೆಯು ಜಿಟಿಜಿಟಿ ಮಳೆಯಲ್ಲಿಯೇ ಸಾಗಿತು. ವಿವಿಧ ಭಂಗಿಯ, ಬೃಹದಾಕಾರದ ಗಣೇಶ ಮೂರ್ತಿಗಳನ್ನು ವಾಹನಗಳಲ್ಲಿರಿಸಿ, ದೀಪಾಲಂಕಾರ, ಪುಷ್ಪಾಲಂಕಾರ ಮಾಡಿ, ಡಿಜೆ ಹಾಡುಗಳನ್ನು ಹಾಕುತ್ತಾ ನಗರದ ಪ್ರಮುಖ ರಸ್ತೆ, ವೃತ್ತಗಳ ಮುಖಾಂತರ ಸಾಗಿದ ಮೆರವಣಿಗೆಯು ಸ್ಥಳೀಯ ಐತಿಹಾಸಿಕ ಖಾಸಬಾವಿಗೆ ಬಂದು ತಲುಪಿತು. ನಂತರ ಕ್ರೇನ್‌ ಮುಖಾಂತರ ಗಣೇಶನ ಬಾವಿಯಲ್ಲಿ ನಿಮಜ್ಜನಗೊಳಿಸಿ ವಿನಾಯಕನಿಗೆ ವಿದಾಯ ಹೇಳಲಾಯಿತು.

ಗಣೇಶ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದ ಪರಿಣಾಮ ಹಲವು ಕಡೆ ಸಂಚಾರ ದಟ್ಟಣೆ ಉಂಟಾಯಿತು. ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದರು. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸಪಟ್ಟರು.

ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಪ್ರಮುಖ ವೃತ್ತಗಳು, ಮೆರವಣಿಗೆ ಸಾಗುವ ರಸ್ತೆಗಳು ಹಾಗೂ ವಿಸರ್ಜನಾ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಂಚಾರ ನಿಯಂತ್ರಣಕ್ಕಾಗಿ ಹಲವು ಕಡೆ ಬ್ಯಾರಿಕೇಡ್ಗಳನ್ನು ಅಳವಡಿಸಿ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿತ್ತು.

ಇಬ್ಬರು ಬಾಲಕರ ಸಾವು: ಶ್ರದ್ಧಾಂಜಲಿ: 5ನೇ ದಿನದ ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್‌ ಹರಿದು ಇಬ್ಬರು ಬಾಲಕರು ಮೃತಪಟ್ಟ ದುರ್ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ನಗರದ ಕೆಲ ಗಜಾನನ ಮಂಡಳಿ ಯವರು ಬುಕ್‌ ಮಾಡಿದ್ದ ಡಿಜೆಯನ್ನು ರದ್ದು ಪಡಿಸಿ ಮೌನ ಮೆರವಣಿಗೆ ಮುಖಾಂತರ 9ನೇ ದಿನದ ಗಣೇಶ ಮೂರ್ತಿ ವಿಸರ್ಜನೆಯನ್ನು ನಡೆಸಿದರು. ಇನ್ನು ಕೆಲ ವರು ಇಬ್ಬರು ಬಾಲಕ ಭಾವಚಿತ್ರದ ಬ್ಯಾನರ್‌ ಹಿಡಿದು ಆತ್ಮಕ್ಕೆ ಶಾಂತಿ ಕೋರಿದರೆ ಉಳಿದವರು ಡಿಜೆ ಭಾರಿಸುವ ಸಮಯದಲ್ಲಿ ಜನರು ತಮ್ಮ ಮೊಬೈಲ್‌ ಟಾರ್ಚ್‌ ಹಾಕಿ ಶ್ರದ್ಧಾಂಜಲಿ ಘಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಂಚಜನ್ಯ ಗಣಪತಿ ಅದ್ಧೂರಿ ವಿಸರ್ಜನಾ ಮೆರವಣಿಗೆ
ವಿದ್ಯಾಭ್ಯಾಸ ವೇಳೆ ಕಲಿಕೆ ತುಡಿತ, ಉತ್ಸಾಹ ಸ್ವಾಭಿಮಾನದ ಬದುಕಿಗೆ ಸಹಕಾರಿ: ಡಾ. ಕೃಷ್ಣೇಗೌಡ