ಕನ್ನಡಪ್ರಭ ವಾರ್ತೆ ರಾಯಚೂರು
ಯತಿಕುಲ ತಿಲಕ, ಕಲಿಯುಗದ ಕಾಮಧೇನು, ಕಲ್ಪವೃಕ್ಷ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಸಪ್ತರಾತ್ರೋತ್ಸವ ನಾಲ್ಕನೇ ದಿನ ಆಚರಿಸಲ್ಪಡುವ ರಾಯರ ಮಧ್ಯಾರಾಧನೆಯನ್ನು ಅತ್ಯಂತ ವೈಭವದಿಂದ ಸೋಮವಾರ ನೆರವೇರಿಸಲಾಯಿತು.ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಶ್ರೀಗುರುರಾಯರ ಮೂಲಬೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕ, ಅಲಂಕಾರ, ಪ್ರಹ್ಲಾದ ರಾಜರ ಉತ್ಸವ ಮೂರ್ತಿಯ ಚಿನ್ನದ ರಥೋತ್ಸವ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವೋಪೇತವಾಗಿ ಶ್ರದ್ಧಾ ಭಕ್ತಿ, ಸಂಭ್ರಮ ಸಡಗರದಿಂದ ಜರುಗಿದವು. ಮಹಾಪಂಚಾಮೃತ ಅಭಿಷೇಕ:ಮಧ್ಯಾರಾಧನೆ ಪ್ರಯುಕ್ತ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಮೂಲ ಬೃಂದಾವನದಕ್ಕೆ ಮಹಾ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ ಸೇವೆ ಮಾಡಿ, ಕಳೆದ ಆ.9 ರಂದು ಟಿಟಿಡಿಯಿಂದ ವಸ್ತ್ರ ರೂಪದಲ್ಲಿ ಆಗಮಿಸಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಿದರು. ಚಿನ್ನದ ರಥೋತ್ಸವ:
ಶ್ರೀಮಠದ ಒಳಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಸುವರ್ಣ ರಥದಲ್ಲಿ ರಾಯರ ಚಿನ್ನದ ಪ್ರಭಾವಳಿ, ಪಾದುಕೆ ಹಾಗೂ ಪರಿಮಳ ಗ್ರಂಥವನ್ನಿರಿಸಿ ಮಹಾಮಂಗಳಾರತಿ ಸೇವೆ ಮೂಲಕ ಡಾ.ಸುಬುಧೇಂದ್ರ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಪ್ರಾಕಾರದ ಸುತ್ತು ಹೊಡೆದ ರಥೋತ್ಸವದ ಮುಂದೆ ಸೇರಿದದ್ದ ಜನಸ್ತೋಮವು ವೇದ-ಮಂತ್ರಗಳ ಘೋಷಣೆ, ಗಾಯನ, ನೃತ್ಯರೂಪಕಗಳನ್ನು ನಡೆಸಿ ಮಧ್ಯಾರಾಧನದ ಸಂಭ್ರಮದಲ್ಲಿ ಮಿಂದೆದ್ದರು. ಇನ್ನು ಸಂಜೆ ಹಗಲು ದೀವಟಗೆ, ಮಾಲ್ಕಿ ಮಂಗಳಾರತಿ ಸೇವೆ, ಸ್ವಸ್ಥಿ ವಚನ ಮತ್ತು ಪ್ರಾಕಾರ ಉತ್ಸವದ ಜೊತೆಗೆ ಶ್ರೀಮಠದ ಮುಂಭಾಗದ ಯೋಗೀಂದ್ರ ಸಭಾಮಂಟಪದಲ್ಲಿ ಜರುಗಿದ ವಿವಿಧ ಸಾಂಸ್ಕೃತಿಕ-ಧಾರ್ಮಿಕ ಸಮಾರಂಭಗಳು ಭಕ್ತರ ಗಮನ ಸೆಳೆದವು.ಈ ಸಂದರ್ಭದಲ್ಲಿ ಶ್ರೀಮಠದ ವೇದ ಪಂಡಿತರು, ವಿದ್ವಾಂಸರು, ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ಅಧಿಕಾರಿ-ಸಿಬ್ಬಂದಿ ಹಾಗೂ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು.