ಜಿಲ್ಲೆಯಾದ್ಯಂತ ಅದ್ಧೂರಿ ಹನುಮ ಜಯಂತಿ ಆಚರಣೆ

KannadaprabhaNewsNetwork |  
Published : Dec 14, 2024, 12:47 AM IST
ಹೊಸದುರ್ಗ ತಾಲೂಕಿನ ಸೋಮಸಂದ್ರ ಗ್ರಾಮದಲ್ಲಿ ಹನುಮ ಜಯಂತಿ ಅಂಗವಾಗಿ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಶುಕ್ರವಾರ ಅಧ್ದೂರಿಯಾಗಿ ನಡೆಯಿತು. | Kannada Prabha

ಸಾರಾಂಶ

ಹೊಸದುರ್ಗ: ತಾಲೂಕಿನ ಪ್ರಮುಖ ಹನುಮನ ಕ್ಷೇತ್ರಗಳಾದ ಸೋಮಸಂದ್ರ ಆಂಜನೇಯ ಹಾಗೂ ಬೆಲಗೂರಿನ ವೀರ ಪ್ರತಾಪ ಆಂಜನೇಯ ಸ್ವಾಮಿ ದೇಗುಲ ಸೇರಿದಂತೆ ತಾಲೂಕಿನ ಎಲ್ಲಾ ಹಳ್ಳಿ ಹಳ್ಳಿಗಳಲ್ಲೂ ಹನುಮ ಜಯಂತಿಯನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಹೊಸದುರ್ಗ: ತಾಲೂಕಿನ ಪ್ರಮುಖ ಹನುಮನ ಕ್ಷೇತ್ರಗಳಾದ ಸೋಮಸಂದ್ರ ಆಂಜನೇಯ ಹಾಗೂ ಬೆಲಗೂರಿನ ವೀರ ಪ್ರತಾಪ ಆಂಜನೇಯ ಸ್ವಾಮಿ ದೇಗುಲ ಸೇರಿದಂತೆ ತಾಲೂಕಿನ ಎಲ್ಲಾ ಹಳ್ಳಿ ಹಳ್ಳಿಗಳಲ್ಲೂ ಹನುಮ ಜಯಂತಿಯನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಪ್ರತಿಯೊಂದು ಆಂಜನೇಯ ದೇವಾಲಯಗಳಲ್ಲೂ ಬೆಳಿಗ್ಗೆಯಿಂದಲೇ ವಿಶೇಷ ಅಭೀಷೇಕ, ವಿಶೇಷ ಪೂಜೆ ಅಲಂಕಾರಗಳನ್ನು ಮಾಡಲಾಗಿತ್ತು. ಪಾನಕ, ಪಲ್ಲಾರ ಸೇರಿದಂತೆ ವಸಂತ ಸೇವೆಯನ್ನು ನಡೆಸುವ ಮೂಲಕ ಭಕ್ತರು ಹನುಮನಿಗೆ ಭಕ್ತಿ ಸಮರ್ಪಿಸಿದರು.

ಬೆಲಗೂರು: ಇಲ್ಲಿನ ಅವಧೂತ ಸದ್ಗುರು ಬಿಂಧು ಮಾಧವ ಶರ್ಮಾ ಅವರ ಅರಾಧ್ಯ ದೈವ ವೀರ ಪ್ರತಾಪ ಆಂಜನೇಯ ದೇಗುಲದಲ್ಲಿ ಹನುಮಜಯಂತಿ ಅಂಗವಾಗಿ ವಿಶೇಷ ಹೋಮ ಹವನ ಸೇರಿದಂತೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಈ ಸಂಬಂಧ ಗುರುವಾರ ರಾತ್ರಿ ಲಕ್ಷ್ಮೀ ಕಲ್ಯಾಣೋತ್ಸವ ಹಾಗೂ ಸೀತಾ ಕಲ್ಯಾಣೋತ್ಸವ ನಡೆಸಲಾಯಿತು. ಶುಕ್ರವಾರ ಮಧ್ಯಾಹ್ನ ಸುಮಾರು 64 ಅಡಿ ಎತ್ತರದ 2 ಬೃಹತ್‌ ರಥಗಳಲ್ಲಿ ಲಕ್ಷ್ಮೀ ನಾರಾಯಣ ಹಾಗೂ ವೀರ ಪ್ರತಾಪ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ನೆರೆದಿದ್ದ ಸಹಸ್ರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಬಳಿಕ ಪಾನಕದ ಗಾಡಿ ಸೇವೆ ಸೇರಿದಂತೆ ಪಾನಕ ಪಲ್ಲಾರದ ಸೇವೆ ವಸಂತ ಸೇವೆಗಳು ನಡೆದವು. ಬೆಂಗಳೂರು ಸೇರಿದಂತೆ ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು.

ಸೋಮಸಂದ್ರ: ಇಲ್ಲಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಶುಕ್ರವಾರ ಹನುಮ ಜಯಂತಿ ಅಂಗವಾಗಿ ಗರ್ಭಗುಡಿಯಲ್ಲಿರುವ ಬೃಹದಾಕಾರದ ಹನುಮನ ಮೂರ್ತಿಗೆ ಬೆಳ್ಳಿ ಕವಚವನ್ನು ಧರಿಸುವ ಮೂಲಕ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಜಾತ್ರ ಮಹೋತ್ಸವಕ್ಕೆ ಈ ಭಾಗದ ಗ್ರಾಮ ದೇವತೆ ಕೈನಡು ಕರಿಯಮ್ಮ ದೇವಿಯವರನ್ನು ಕರೆತರಲಾಗಿತ್ತು. ಅಲಂಕೃತ ರಥದಲ್ಲಿ ಆಂಜನೇಯ ಸ್ವಾಮಿ ಹಾಗೂ ಕರಿಯಮ್ಮ ದೇವಿಯವರನ್ನು ಪ್ರತಿಷ್ಠಾಪಿಸಿ ರಥವನ್ನು ಭಕ್ತರು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಈ ಜಾತ್ರಾ ಮಹೋತ್ಸವದಲ್ಲಿ ಬ್ರಹ್ಮವಿದ್ಯಾನಗರದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸೇರಿದಂತೆ ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಇದೇ ರೀತಿ ಶ್ರೀರಾಂಪುರದ ಕೋಟೆ ಆಂಜನೇಯ ಸ್ವಾಮಿ, ಹೊನ್ನೇನಹಳ್ಳಿಯ ಆಂಜನೇಯ ಸ್ವಾಮಿ ಹಾಗೂ ಹಳೆಕುಂದೂರು ಆಂಜನೇಯ ಸ್ವಾಮಿ ದೇಗುಲಗಳಲ್ಲೂ ರಥೋತ್ಸವ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!