ಮೈಸೂರಿನಲ್ಲಿ ಅದ್ಧೂರಿ ಹನುಮ ಜಯಂತಿ ಮೆರವಣಿಗೆ: ಸಾವಿರಾರು ಮಂದಿ ಭಾಗಿ

KannadaprabhaNewsNetwork | Published : Dec 31, 2023 1:31 AM

ಸಾರಾಂಶ

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೋಮ- ಹವನ ನಡೆಸಿ ವಿಶೇಷ ಪೂಜೆ. ನಂತರ, ತುಳಸಿ, ಮೈಸೂರು ಮಲ್ಲಿಗೆ, ಕಜ್ಜಾಯ, ಹಲಸಂದೆಯಿಂದ ಮಾಡಿದ್ದ ವಡೆ ಹಾರವನ್ನು ಹಾಕಿ ಹೂವಿನ ಅಲಂಕಾರದಿಂದ ಸಿಂಗಾರಗೊಳಿಸಲಾಗಿದ್ದ ಹನುಮ ಮೂರ್ತಿಗೆ ಪೂಜೆ ಸಲ್ಲಿಕೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹನುಮ ಜಯಂತಿ ಪ್ರಯುಕ್ತ ಹನುಮ ಜಯಂತ್ಯೋತ್ಸವ ಸಮಿತಿಯು ಶನಿವಾರ ಆಯೋಜಿಸಿದ್ದ ಆಂಜನೇಯಸ್ವಾಮಿ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೋಮ- ಹವನ ನಡೆಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ, ತುಳಸಿ, ಮೈಸೂರು ಮಲ್ಲಿಗೆ, ಕಜ್ಜಾಯ, ಹಲಸಂದೆಯಿಂದ ಮಾಡಿದ್ದ ವಡೆ ಹಾರವನ್ನು ಹಾಕಿ ಹೂವಿನ ಅಲಂಕಾರದಿಂದ ಸಿಂಗಾರಗೊಳಿಸಲಾಗಿದ್ದ ಹನುಮ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.

ಇದಾದ ಬಳಿಕ ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ಕೆ. ಹರೀಶ್ ಗೌಡ, ಮಾಜಿ ಮೇಯರ್ ಶಿವಕುಮಾರ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಿ.ಟಿ. ಪ್ರಕಾಶ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಅವರು ತೆರೆದ ವಾಹನದಲ್ಲಿ ವಿರಾಜಮಾನರಾಗಿ ನಿಂತಿದ್ದ ಹನುಮ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಹೊರಟ ಆಂಜನೇಯ ಮೂರ್ತಿಗಳ ಮೆರವಣಿಗೆಯು ದೊಡ್ಡ ಗಡಿಯಾರ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ಸಯ್ಯಾಜಿ ರಾವ್ ರಸ್ತೆ, ಚಿಕ್ಕಗಡಿಯಾರ, ಡಿ. ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಶಾಂತಲಾ ಚಿತ್ರಮಂದಿರ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದ ಮೂಲಕ ಹಾದು ಗನ್ ಹೌಸ್ ಬಳಿ ಅಂತ್ಯವಾಯಿತು. ಮಧ್ಯಾಹ್ನ 12ಕ್ಕೆ ಆರಂಭವಾದ ಮೆರವಣಿಗೆಯು ಸಂಜೆ 5 ಗಂಟೆಯ ನಂತರ ಅಂತ್ಯವಾಯಿತು.

ರಾವಣನ ವಿರುದ್ಧ ಸೆಣಸಾಡುವಾಗ ಗದೆಯನ್ನು ಎತ್ತಿದ ಹನುಮಂತ, ಜೈ ಶ್ರೀರಾಮ್ ಎನ್ನುವಂತೆ ಕೈಯಲ್ಲಿ ಗದೆ ಹಿಡಿದು ನಿಂತಿರುವುದು, ಓಂ ಅಕ್ಷರದ ಎದುರು ನಿಂತಿದ್ದ ಆಂಜನೇಯ ಸೇರಿದಂತೆ 9 ಮೂರ್ತಿಗಳು ಗಮನ ಸೆಳೆದರೆ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮಮಂದಿರ ಸ್ತಬ್ಧಚಿತ್ರ ರಾಜಬೀದಿಗಳಲ್ಲಿ ಸಾಗುವ ಮೂಲಕ ನೋಡುಗರ ಗಮನ ಸೆಳೆಯಿತು.

ಕೇಸರಿ ಶಾಲು, ಟೀ ಶರ್ಟ್ ಗಳನ್ನು ಧರಿಸಿದ್ದ ಯುವಕರು ದೊಡ್ಡ ದೊಡ್ಡದಾದ ಬಾವುಟಗಳನ್ನು ಹಿಡಿದು ಜೈ ಶ್ರೀರಾಮ್, ಜೈ ಜೈ ಶ್ರೀರಾಮ, ಪವನಸುತ ಹನುಮಾನ್ ಕೀ ಜೈ ಮೊದಲಾದ ಘೋಷಣೆಗಳನ್ನು ಮೊಳಗಿಸಿದರು. ಅಲ್ಲದೆ, ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರು.

ಹನುಮ ಮೂರ್ತಿಗಳ ಮುಂದೆ ಭಜನೆ, ನಂದಿಕಂಬ, ವೀರಗಾಸೆ, ಕಂಸಾಳೆ, ಬೀಸು ಕಂಸಾಳೆ, ಗಾರುಡಿ ಗೊಂಬೆ, ಡೊಳ್ಳು ಕುಣಿತ, ನಗಾರಿ ಕಲಾವಿದರು ದಾರಿಯುದ್ದಕ್ಕೂ ತಮ್ಮದೇ ಆದ ಶೈಲಿಯಲ್ಲಿ ನೃತ್ಯ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಮೂರು ಪಕ್ಷದವರು ಭಾಗಿ:

ಹನುಮ ಜಯಂತಿ ಮೆರವಣಿಗೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ, ಕಾಂಗ್ರೆಸ್ ಶಾಸಕ ಕೆ. ಹರೀಶ್ ಗೌಡ, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ ಶಿವಕುಮಾರ್, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಲ್.ಆರ್. ಮಹದೇವಸ್ವಾಮಿ, ಎಂ. ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಎಂ. ಶಿವಣ್ಣ, ಡಾ. ಶುಶ್ರುತ್ ಗೌಡ, ಎಸ್.ಆರ್.ರವಿಕುಮಾರ್, ಗಿರೀಶ್ ನಾಯಕ, ನಾಗೇಶ್, ಬಿಜೆಪಿ ಮುಖಂಡರಾದ ಕವೀಶ್ ಗೌಡ, ವಾಣೀಶ್ ಕುಮಾರ್, ವಿ. ಸೋಮಸುಂದರ್, ಎಚ್.ಜಿ. ಗಿರಿಧರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ. ಸತೀಶ್, ಸೌಮ್ಯ ಉಮೇಶ್, ಛಾಯಾದೇವಿ, ಲಕ್ಷ್ಮೀ ಕಿರಣ್, ಹನುಮಂತ್ಯೋತ್ಸವ ಸಮಿತಿಯ ಸಂಜಯ್, ಜೀವನ್, ಕುಮಾರ್, ಅಭಿಲಾಷ್, ಮೋಹನ್, ಸಂತೋಷ್, ನಿತೀನ್ ಮೊದಲಾದವರು ಭಾಗವಹಿಸಿದ್ದರು.

ಬಿಗಿ ಭದ್ರತೆ:

ಹನುಮ ಜಯಂತಿ ಮೆರವಣಿಗೆ ಹಿನ್ನೆಲೆಯಲ್ಲಿ ನಗರ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಡಿಸಿಪಿ ಎಂ. ಮುತ್ತುರಾಜು ಖುದ್ದು ಭದ್ರತೆಯ ಉಸ್ತುವಾರಿ ವಹಿಸಿದ್ದರು.

ಮೆರವಣಿಗೆ ಸಾಗಿದ ಮಾರ್ಗದಲ್ಲಿ ಸಂಚಾರ ಪೊಲೀಸರು ವಾಹನ ಸಂಚಾರ ಮಾರ್ಗ ಬದಲಿಸಿದ್ದರು. ಮೆರವಣಿಗೆಯಿಂದ ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು.

Share this article