ಪಟ್ಟಣದಲ್ಲಿ ಹಿಂದೂ ಸಮ್ಮೇಳನದ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆ ದೇಶಭಕ್ತಿ, ಧಾರ್ಮಿಕ ಉತ್ಸಾಹ ಮತ್ತು ಸಂಸ್ಕೃತಿಯ ವೈಭವ ಎತ್ತಿಹಿಡಿದ ಅದ್ಧೂರಿ ಕಾರ್ಯಕ್ರಮವಾಗಿ ಗಮನ ಸೆಳೆಯಿತು.
ಸವಣೂರು:ಪಟ್ಟಣದಲ್ಲಿ ಹಿಂದೂ ಸಮ್ಮೇಳನದ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆ ದೇಶಭಕ್ತಿ, ಧಾರ್ಮಿಕ ಉತ್ಸಾಹ ಮತ್ತು ಸಂಸ್ಕೃತಿಯ ವೈಭವ ಎತ್ತಿಹಿಡಿದ ಅದ್ಧೂರಿ ಕಾರ್ಯಕ್ರಮವಾಗಿ ಗಮನ ಸೆಳೆಯಿತು.
ಪಟ್ಟಣದ ಶುಕ್ರವಾರ ಪೇಟೆಯ ವೀರಭದ್ರೇಶ್ವರ ದೇವಸ್ಥಾನದ ಮಹಾದ್ವಾರದಿಂದ ಹಿಂದೂ ಸಮ್ಮೇಳನದ ಅಂಗವಾಗಿ ಬೃಹತ್ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು. ಹಿಂದೂ ಪ್ರಮುಖರಾದ ಮಹೇಶ ಸಾಲಿಮಠ ಅವರು ಕೇಸರಿ ಧ್ವಜ ಪ್ರದರ್ಶಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದ ನೂರಾರು ಯುವಕರು ಜೈ ಶ್ರೀರಾಮ, ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸುತ್ತ ದೇಶಭಕ್ತಿಯ ಉತ್ಸಾಹವನ್ನು ಹೆಚ್ಚಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಈ ಮೆರವಣಿಗೆ ಭಕ್ತಿ, ಸಂಸ್ಕೃತಿ ಮತ್ತು ರಾಷ್ಟ್ರಾಭಿಮಾನದ ಸಂಗಮವಾಗಿ ಮೂಡಿಬಂದಿತು.ಪೂರ್ಣಕುಂಭ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ಗೌರವವನ್ನು ತೋರಿದರು. ಗ್ರಾಮೀಣ ಸೊಗಡಿನ ಕೋಲಾಟ ಪ್ರದರ್ಶನ ಜನಮನ ಸೆಳೆಯುವಂತಿತ್ತು. ಭಾರತಾಂಬೆಯ ಭಾವಚಿತ್ರದೊಂದಿಗೆ ಸಾಗಿದ ಮೆರವಣಿಗೆ ದೇಶದ ಸ್ವಾತಂತ್ರ‍್ಯ ಹೋರಾಟಗಾರರು ಮತ್ತು ಮಹನೀಯರ ಸ್ಮರಣೆಯನ್ನು ಜೀವಂತಗೊಳಿಸಿತು.ಈ ವೇಳೆ ವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಸ್ವಾಮಿ ವಿವೇಕಾನಂದ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಸಂತ ಕನಕದಾಸರು, ಸಂತ ಸೇವಾಲಾಲರು, ಡಾ. ಬಿ.ಆರ್. ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಬಸವಣ್ಣನವರ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ದೇಶಭಕ್ತಿ ಮತ್ತು ಧಾರ್ಮಿಕ ಚೈತನ್ಯವನ್ನು ಸಾರುವ ವಿವಿಧ ಮಹನೀಯರ ಭಾವಚಿತ್ರಗಳನ್ನು ಎತ್ತು ಚಕ್ಕಡಿಗಳು ಹಾಗೂ ಆಟೋ ರಿಕ್ಷಾಗಳಲ್ಲಿ ಅಲಂಕರಿಸಿ ಪ್ರದರ್ಶಿಸಲಾಯಿತು.ಪಟ್ಟಣದ ಭರಮಲಿಂಗೇಶ್ವರ ವೃತ್ತ, ಮಾರ್ಕೆಟ್ ರಸ್ತೆ, ಸಿಂಪಿಗಲ್ಲಿ, ಗಣಪತಿ ದೇವಸ್ಥಾನ, ಸರಕಾರಿ ಆಸ್ಪತ್ರೆ ಮಾರ್ಗವಾಗಿ ಸಾಗಿದ ಮೆರವಣಿಗೆ ಕೊನೆಗೆ ತಾಲೂಕು ಕ್ರೀಡಾಂಗಣ ತಲುಪಿ ಸಮಾರೋಪಗೊಂಡಿತು. ಮೆರವಣಿಗೆ ಉದ್ದಕ್ಕೂ ರಾಷ್ಟ್ರಭಕ್ತಿಯ, ಹಿಂದೂ ಏಕತೆಯ ಜಯಘೋಷಣೆಗಳು ಪ್ರತಿಧ್ವನಿಸಿದವು.ಶೋಭಾಯಾತ್ರೆಯ ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಹಿಂದೂ ಸಮ್ಮೇಳನ ಜರುಗಿದ್ದು, ಧರ್ಮ, ಸಂಸ್ಕೃತಿ ಹಾಗೂ ರಾಷ್ಟ್ರಭಕ್ತಿ ಕುರಿತಂತೆ ಗಣ್ಯರು ಸಂದೇಶ ನೀಡಿದರು. ಭಾವಸಾರ ಕ್ಷತ್ರಿಯ ಸಮಾಜದಿಂದ ತಂಪು ಪಾನೀಯ ವಿತರಣೆ ಕೈಗೊಳ್ಳಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.