ಬಳ್ಳಾರಿ: ಪಠ್ಯೇತರ ಚಟುವಟಿಕೆಗಳಿಗೆ ಒಳಗಾಗದ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಶಿಕ್ಷಣ ಅಭ್ಯಾಸದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ಕುಲಸಚಿವ ಎಸ್.ಎನ್.ರುದ್ರೇಶ್ ಹೇಳಿದರು.
ವಿವಿಯ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ಕುಮಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವುದೇ ಯುವಜನೋತ್ಸವದ ಉದ್ದೇಶವಾಗಿದೆ ಎಂದರು. ಬಳಿಕ ಯುವಜನೋತ್ಸವ ಕುರಿತು ವರದಿ ವಾಚನ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮೋಹನದಾಸ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ರಾಬರ್ಟ್ ಜೋಸ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಡಾ.ಶಶಿಧರ ಕೆಲ್ಲೂರ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳು, ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಚೌಡಪ್ಪ ವಿ.ಎ., ಡಾ.ನಾಗರಾಜ್ ದಂಡೋತಿ, ಡಾ.ಭಾಗ್ಯಜ್ಯೋತಿ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.ಶಿಬಿರದಲ್ಲಿ ರಾಜ್ಯದ 21 ವಿಶ್ವವಿದ್ಯಾಲಯಗಳಿಂದ ಆಗಮಿಸಿರುವ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಐದು ದಿನಗಳ “ರಾಜ್ಯ ಮಟ್ಟದ ಯುವಜನೋತ್ಸವ 2024”ರ 10 ವಿವಿಧ ಸ್ಪರ್ಧೆಗಳಲ್ಲಿ ಮೊದಲನೇ ಸ್ಥಾನದಲ್ಲಿ ಸಮಗ್ರ ಪ್ರಶಸ್ತಿಯನ್ನು ಮಂಗಳೂರು ವಿಶ್ವವಿದ್ಯಾಲಯವು ಅಲಂಕರಿಸಿತು. ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಡೆದುಕೊಂಡಿತು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಫಲಕಗಳನ್ನು ಹಾಗೂ ಪ್ರಮಾಣಪತ್ರಗಳನ್ನು ವಿವಿಯ ಕುಲಸಚಿವರು ವಿತರಿಸಿದರು.
ವಿವಿಧ ವಿಶ್ವವಿದ್ಯಾಲಯಗಳ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಜರುಗಿದ ಐದು ದಿನಗಳ “ರಾಜ್ಯ ಮಟ್ಟದ ಯುವಜನೋತ್ಸವ-2024”ದ ಸಮಾರೋಪದಲ್ಲಿ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿದರು.