ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬುದ್ಧ ಒಕ್ಕಲುತನ ಮನೆತನದ ಮಹಾ ರಾಜಕುಮಾರ. ಬೇಸಾಯಗಾರರೆಲ್ಲ ಬೌದ್ಧರು ಎಂದು ತಾಲೂಕು ಬೌದ್ಧ ಯುವ ಘಟಕದ ನೇತಾರ ಗಂಗಾಧರ್ ಅಭಿಪ್ರಾಯಪಟ್ಟರು.ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಬುದ್ಧ, ಬಸವ, ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಯೋಗ ಗುರು ಎಸ್.ಎಂ. ಅಲ್ಲಮಪ್ರಭು ನೇತೃತ್ವದಲ್ಲಿ ನಡೆದ ಧರ್ಮ ಚಕ್ರ ಪರಿವರ್ತನಾ ದಿನ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಅನುಯಾಯಿಗಳೊಂದಿಗೆ 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ಬೌದ್ಧ ಧರ್ಮಕ್ಕೆ ಸೇರ್ಪಡೆಗೊಂಡರು. ಹೀಗಾಗಿ ಅಕ್ಟೋಬರ್ 14ರಂದು ಧರ್ಮ ಚಕ್ರ ಪರಿವರ್ತನಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.ಒಕ್ಕಲುತನ ಜಗತ್ತಿನ ಸರ್ವಶ್ರೇಷ್ಠ ಕಸುಬು. ಜಗತ್ತಿಗೆ ಅನ್ನ ಕೊಡುವ ಅನ್ನದಾತರ ಕಸುಬು ಒಂದು ಕಾಲದಲ್ಲಿ ಬೌದ್ಧರ ನೆಲೆಬೀಡಾಗಿತ್ತು. ಬೌದ್ಧ ಧರ್ಮದಿಂದ ವಿಮುಖರಾಗಿದ್ದರಿಂದ ಜಗತ್ತು ಇಂದು ಶಾಂತಿ ಮತ್ತು ಸಹನೆಯ ಬದುಕನ್ನು ಕಳೆದುಕೊಂಡು ಹಿಂಸೆ ನಡುವೆ ಜೀವಿಸುವಂತಾಗಿದೆ ಎಂದು ವಿಷಾದಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಭಾರತೀಯ ಸಂಸ್ಕೃತಿ ಆರಾಧಕರಾಗಿದ್ದರು. ಇವರು ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಸೇರದೆ ಬೌದ್ಧ ಧರ್ಮ ಸೇರಿದರು. ಜಗತ್ತಿನ ಶಾಂತಿಗೆ ಬುದ್ಧನ ಚಿಂತನೆಗಳಲ್ಲಿ ಮುದ್ದಿದೆ ಎನ್ನುವುದನ್ನು ಅರಿತಿದ್ದರು ಎಂದರು.ಜಾತಿ ರಹಿತ ಸಮ ಸಮಾಜದ ನಿರ್ಮಾಣ ಅಂಬೇಡ್ಕರ್ ಅವರ ಆಶಯ. ಅದಕ್ಕಾಗಿಯೇ ಅವರು ಸಂವಿಧಾನದಲ್ಲಿ ಸರ್ವ ಜನರಿಗೂ ಸಮಾನ ಹಕ್ಕು ನೀಡಿದ್ದಾರೆ. ಅಂಬೇಡ್ಕರ್ ಅನುಯಾಯಿಗಳು ಸೇರಿದಂತೆ ಸಮಸ್ತ ಭಾರತೀಯರು ಬೌದ್ಧ ಧರ್ಮದ ಚಿಂತನೆಗಳತ್ತ ಗಮನ ಹರಿಸಬೇಕು ಎಂದರು.
ಭಾರತ ಜಾತಿ ರಹಿತ ಸಮಾಜವಾಗಿ ಎಲ್ಲರು ಒಗ್ಗಟ್ಟು ಪ್ರದರ್ಶಿಸಿದರೆ ದೇಶ ಬಲಿಷ್ಠವಾಗಲು ಸಾಧ್ಯ. ಸಮ ಸಮಾಜ ನಿರ್ಮಾಣಕ್ಕೆ ಯುವ ಜನತೆ ಒಗ್ಗೂಡಬೇಕು. ಬುದ್ಧ, ಬಸವಣ್ಣ ಬಾಬಾ ಸಾಹೇಬರು ಕಟ್ಟಿದ ಸಮಾನತೆ ನಮ್ಮದಾಗಬೇಕು ಎಂದರು.ತಾಲೂಕು ಎಸ್ಸಿ, ಎಸ್ಟಿ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಳಿಯೂರು ಯೋಗೇಶ್ ಮಾತನಾಡಿ, ಧರ್ಮಕ್ಕಿಂತಲೂ ದೇಶವೇ ನಮ್ಮ ಮೊದಲ ಆದ್ಯತೆಯಾಗಬೇಕು. ದೇಶ ಉಳಿದರೆ ಮಾತ್ರ ಧರ್ಮ ಉಳಿಯಲು ಸಾಧ್ಯ ಎಂದರು.
ಈ ವೇಳೆ ಯೋಗಗುರು ಅಲ್ಲಮಪ್ರಭು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ತೆಂಡೇಕೆರೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಮುತ್ತುರಾಜ್ ಮಾತನಾಡಿದರು. ತಾಲೂಕು ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ, ಶಿಕ್ಷಕರಾದ ಪುಟ್ಟರಾಜು, ಜಿ.ಎಸ್.ಮಂಜು, ಜಯರಾಂ, ನಾಗಯ್ಯ, ಮಂಜುನಾಥ, ಕಟ್ಟೆ ಮಹೇಶ್, ರವಿಕುಮಾರ, ಲಕ್ಷ್ಮಣ್, ಸಮಾಜ ಕಲ್ಯಾಣ ಇಲಾಖೆ ಪ್ರಸನ್ನಕುಮಾರ್, ಪ್ರಬುದ್ಧ ಕರ್ನಾಟಕ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಚ್.ಜೆ.ಕಾಂತರಾಜ, ಕೃಷ್ಣಯ್ಯ ಉಪಸ್ಥಿತರಿದ್ದರು.