ಹಾವೇರಿಯ ಸುಭಾಷ್ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ 18 ಅಡಿಯ ಭವ್ಯ ಗಣಪತಿಹಾವೇರಿ:
ಬೆನಕನ ಅಮಾವಾಸ್ಯೆ ಮರುದಿನ ಅಂದರೆ ಸೆ.12ರಂದು ಗಣೇಶನ ಅದ್ಧೂರಿ ಆಗಮನೋತ್ಸವ ಅಂಗವಾಗಿ ಹಾವೇರಿ ಕಾ ರಾಜಾ ಗಜಾನನ ಉತ್ಸವ ಸಮಿತಿ ವತಿಯಿಂದ ನಗರದ ಸುಭಾಷ್ ಸರ್ಕಲ್‌ನಲ್ಲಿ ಸುಮಾರು 18ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿ ವರ್ಷ ಗಣೇಶ ಚತುರ್ಥಿ ದಿನದಂದು ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದು, ಈ ಬಾರಿ ಅದ್ಧೂರಿ ಆಗಮನೋತ್ಸವ ಹಿನ್ನೆಲೆಯಲ್ಲಿ ಎರಡು ದಿನ ಮೊದಲೆ ವಿಘ್ನ ನಿವಾರಕ ಗಣಪನನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಳಿಕ ಅಸಂಖ್ಯಾತ ಭಕ್ತರು ಪ್ರತಿದಿನ ಸುಭಾಷ ಸರ್ಕಲ್‌ಗೆ ಭೇಟಿ ನೀಡಿ ಗಣೇಶ ಮೂರ್ತಿಯನ್ನು ವೀಕ್ಷಣೆ ಮಾಡುತ್ತಿದ್ದರು. ಕಳೆದ ಇಪ್ಪತ್ತು ದಿನಗಳಿಂದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಾವೇರಿ ಕಾ ರಾಜಾ ಗಣೇಶನಿಗೆ ದಿನಂಪ್ರತಿ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವು. ಇತ್ತೀಚೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಕೂಡ ಅದ್ದೂರಿಯಾಗಿ ನಡೆಸಲಾಯಿತು. ಮಂಗಳವಾರ ರಾತ್ರಿ ಹಾವೇರಿ ಕಾ ರಾಜಾ ಗಣೇಶನ ಮೇಲಿದ್ದ ವಿವಿಧ ಬಗೆಯ ಆಭರಣಗಳನ್ನು ಹರಾಜು ಮಾಡಲಾಯಿತು.ಶೋಭಾಯಾತ್ರೆ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಶೃಂಗರಿಸಿದ ವಾಹನದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪಿಸಿ ನಗರದ ತುಂಬೆಲ್ಲಾ ಬೃಹತ್ ಶೋಭಾಯಾತ್ರೆ ನಡೆಸಲಾಯಿತು. ಮೆರವಣಿಗೆಯಲ್ಲಿ ಗಣೇಶ ಮೂರ್ತಿಗೆ ನಾನಾ ಬಗೆಯ ಹಣ್ಣುಗಳು ಹಾಗೂ ಸುಮಾರು 200ಕೆಜಿಗೂ ಅಧಿಕ ಮೋತಿಚೂರು ಹಾಗೂ ಹಣ್ಣಿನ ಬೃಹತ್ ಗಾತ್ರದ ಹಾರವನ್ನು ಹಾಕಲಾಗಿತ್ತು. ಇದಕ್ಕೂ ಮೊದಲು ಹೊಸಮಠದಿಂದ ಸುಭಾಷ್ ವೃತ್ತದವರೆಗೆ ಬೃಹತ್ ಹಾರದ ಮೆರವಣಿಗೆ ನಡೆಸಲಾಯಿತು. ಶೋಭಾಯಾತ್ರೆ ಪ್ರಾರಂಭವಾದ ಬಳಿಕ ಡಿಜೆ ಹಾಡುಗಳಿಗೆ ಯುವಕ, ಯುವತಿಯರು, ಮಕ್ಕಳು ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ್, ಜೈ ಶಿವಾಜಿ ಮಹಾರಾಜ, ಜೈ ಭಜರಂಗ್ ಬಲಿ, ಹಾವೇರಿ ಕಾ ರಾಜಾ ಕೀ ಜೈ ಎಂಬ ಘೋಷಣೆಗಳು ಮೊಳಗಿದವು.
ಈ ವೇಳೆ ಶಿವರಾಜ ನವಲೆ, ನಿಖಿಲ್ ಡೊಗ್ಗಳ್ಳಿ, ಕಿರಣಕುಮಾರ ಕೋಣನವರ, ಮಂಜುನಾಥ ಹರಿಹರ, ಬಸವರಾಜ ಹರಪನಹಳ್ಳಿ, ರಾಘವೇಂದ್ರ ಕಾಂಬಳೆ, ಆಕಾಶ ಕುಳೇನೂರ, ಸಚಿನ ನವಲೆ, ಹರೀಶ ಸುಂಕದ, ಶರಣು ಮರೋಳ, ಗಿರೀಶ ಸುಂಕದ, ಧರ್ಮರಾಜ ಖಜೂರಕರ, ಗುಡ್ಡಪ್ಪ ಭರಡಿ, ಮಂಜುನಾಥ ಲಿಂಗನಗೌಡ್ರ ಸೇರಿದಂತೆ ಹಾವೇರಿ ಕಾ ರಾಜಾ ಗಜಾನನ ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.