ಕಳೆ ನೀಡಿದ ಪೂರ್ಣ ಕುಂಭ ಹೊತ್ತ ಮಹಿಳೆಯರು
ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಅದ್ಧೂರಿ ಮರವಣಿಗೆಯೊಂದಿಗೆ ಬುಧವಾರ ಅತಿ ವಿಜೃಂಭಣೆಯಿಂದ ನಡೆಯಿತು.
ಬೆಳ್ಳಿಗ್ಗೆ 7.30ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಗ್ರಾ.ಪಂ ಅಧ್ಯಕ್ಷೆ ರೇಣುಕಾ ಮೂರ್ತ್ಯಪ್ಪ ನೆರವೇರಿಸಿದ ನಂತರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಪುಷ್ಕರಣಿಯಿಂದ ಸಮ್ಮೇಳನಾಧ್ಯಕ್ಷ ಕೆ.ಸಿದ್ದಲಿಂಗಪ್ಪ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ಬಿ.ವಾಮದೇವಪ್ಪ, ತಾಲೂಕು ಅಧ್ಯಕ್ಷ ಎಲ್.ಜಿ.ಮಧುಕುಮಾರ್, ಗ್ರಾ.ಪಂ ಅಧ್ಯಕ್ಷೆ ರೇಣುಕಾಮೂರ್ತ್ಯಪ್ಪ ಇವರನ್ನು ಅಲಂಕೃತಗೊಂಡ ಸಾರೊಟಿನಲ್ಲಿ ಕುಳ್ಳಿರಿಸಿಕೊಂಡು ವಿವಿಧ ಪ್ರಕಾರಗಳ ಜಾನಪದ ಕಲಾಮೇಳಗಳೊಂದಿಗೆ ಗ್ರಾಮದ ಕೋಟೆ ರಸ್ತೆ, ಆಗಳೇರಿಬಿದಿ, ಬಾಡರಸ್ತೆ, ಪುನೀತ್ ರಾಜ್ ಕುಮಾರ್ ವೃತ್ತದಿಂದ ಸಮ್ಮೇಳನ ನಡೆಯುವ ವೇದಿಕೆಯ ವರೆಗೂ ಭವ್ಯವಾದ ಮೆರವಣಿಗೆಯನ್ನು ನಡೆಸಲಾಯಿತು.ಸಾಹಿತ್ಯ ಸಮ್ಮೇಳನದ ನಿಮಿತ್ತವಾಗಿ ಗ್ರಾಮದ ಎಲ್ಲಾ ಪ್ರಮುಖ ಬೀದಿಗಳಲ್ಲಿ ಹಳದಿ-ಕೆಂಪು ಬಣ್ಣದ ಬಂಟಿಕ್ಸ್ ಗಳು ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಇಡೀ ಗ್ರಾಮವೇ ಹಬ್ಬದ ವಾತಾವರಣದಂತಿತ್ತು.
ಸಮ್ಮೇಳನ ನಡೆಯುವ ಆವರಣದಲ್ಲಿ ಸಾಹಿತ್ಯ ಪುಸ್ತಕಗಳ ಮಾರಾಟದ ಅಂಗಡಿಗಳು, ಧಾರ್ಮಿಕ ವಿಚಾರಗಳ ಬೋಧನೆ, ಸಿರಿಧಾನ್ಯ ತಿನಿಸುಗಳ ಮೇಳ, ಅಧುನಿಕ ವಿದ್ಯುತ್ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ, ಉಚಿತ ಆರೋಗ್ಯ ಸೇವೆ ಇವುಗಳು ಸಾಹಿತ್ಯಾಸಕ್ತರ ಗಮನವನ್ನು ಸೆಳೆದವು.ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು, ವಿವಿಧ ಪ್ರಕಾರಗಳ ಜಾನಪದ ಕುಣಿತ ಇವುಗಳು ಮೆರವಣಿಗೆಗೆ ಕಳೆ ನೀಡಿದವು.