ತವರಿಗೆ ಮರಳಿದ ಯೋಧರಿಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Oct 03, 2026, 01:30 AM IST
ಪೋಟೋ: 02ಎಸ್‌ಎಂಜಿಕೆಪಿ06 | Kannada Prabha

ಸಾರಾಂಶ

ಎರಡು ದಶಕಗಳ ಕಾಲ ದೇಶ ಸೇವೆ ಸಲ್ಲಿಸಿದ ಹವಾಲ್ದಾರ್ ವಿಜಯ್ ಕುಮಾರ್ ಹಾಗೂ ನಾನ್ ಕಮಿಷನ್ಡ್ ಆಫೀಸರ್ ಶಿವಾಜಿ ನಾಯ್ಕ್‌ಗೆ ಶಿವಮೊಗ್ಗ ನಗರದ ರೈಲ್ವೇ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎರಡು ದಶಕಗಳ ಕಾಲ ದೇಶ ಸೇವೆ ಸಲ್ಲಿಸಿದ ಹವಾಲ್ದಾರ್ ವಿಜಯ್ ಕುಮಾರ್ ಹಾಗೂ ನಾನ್ ಕಮಿಷನ್ಡ್ ಆಫೀಸರ್ ಶಿವಾಜಿ ನಾಯ್ಕ್‌ಗೆ ಶಿವಮೊಗ್ಗ ನಗರದ ರೈಲ್ವೇ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ವಿಜಯ್ ಕುಮಾರ್ ಹಾಗೂ ನಾನ್ ಕಮಿಷನ್ಡ್ ಆಫೀಸರ್ ಶಿವಾಜಿ ನಾಯ್ಕ್ ಸೇವಾ ನಿವೃತ್ತಿ ನಂತರ ಹುಟ್ಟೂರಿಗೆ ಬಂದ ಸಂದರ್ಭದಲ್ಲಿ ಶಿವಮೊಗ್ಗದ ಜನತೆ, ಸ್ನೇಹಿತರು ಹಾಗೂ ಕುಟುಂಬಸ್ಥರು ಡೊಳ್ಳು ವಾದ್ಯದೊಂದಿಗೆ ಹೂಮಳೆ ಸುರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಕೂಗಿ ಯೋಧರ ಸೇವೆಯನ್ನು ಕೊಂಡಾಡಿದರು.

ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ಗುರುವಾರ ರಾತ್ರಿ ಶಿವಮೊಗ್ಗಕ್ಕೆ ಆಗಮಿಸಿದ ಹವಾಲ್ದಾರ್ ವಿಜಯ್ ಕುಮಾರ್ ಹಾಗೂ ಶಿವಾಜಿನಾಯ್ಕ್ ರೈಲಿನಿಂದ ಇಳಿಯುತ್ತಿದ್ದಂತೆ ಕುಟುಂಬದವರು ಹಾಗೂ ಸ್ನೇಹಿತರು ಹರ್ಷೋದ್ಗಾರಗಳೊಂದಿಗೆ ಬರಮಾಡಿಕೊಂಡರು.

ಯೋಧರು ನಮ್ಮ ಹೆಮ್ಮೆ: ಸೂಡಾ ಅಧ್ಯಕ್ಷ ಸಿ.ಜಿ.ಮಧುಸೂದನ್ ಮಾತನಾಡಿ, ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ಇಬ್ಬರು ಯೋಧರು ತವರಿಗೆ ಮರಳಿರುವುದು ಸಂತಸದ ಸಂಗತಿ. ದೇಶದ ಗಡಿ ಹಾಗೂ ವಿವಿಧ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿ ದೇಶದ ರಕ್ಷಣೆಗೆ ಕೊಡುಗೆ ನೀಡಿರುವ ಯೋಧರು ನಮ್ಮ ಹೆಮ್ಮೆ. ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಸಂಭ್ರಮಾಚರಣೆ ವೇಳೆ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜೆ. ಮಧುಸೂದನ್, ಜಿ.ಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌, ನಾಗರಾಜ್‌ ನೇರಿಗೆ, ಜೇಸುದಾಸ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಭೂಪಾಲ್‌ನಲ್ಲಿ ತರಬೇತಿ: ಹವಾಲ್ದಾರ್ ವಿಜಯ್ ಕುಮಾರ್ ಅವರು ಸೇನೆಗೆ ಆಯ್ಕೆಯಾದ ಬಳಿಕ ಭೂಪಾಲ್‌ನಲ್ಲಿ ತರಬೇತಿ ಪೂರ್ಣಗೊಳಿಸಿದರು. ಬಳಿಕ ಪಂಜಾಬ್, ಅಸ್ಸಾಂನ ಗುವಾಹಟಿ, ಉತ್ತರ ಪ್ರದೇಶದ ಬಬೀನಾ, ಜಮ್ಮುವಿನ ಮೆಂಧರ್ ಸೆಕ್ಟರ್ ಹಾಗೂ ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸಿದರು. ನಂತರ ಅರುಣಾಚಲ ಪ್ರದೇಶ, ಝಾನ್ಸಿ ಹಾಗೂ ಜಮ್ಮುವಿನ ವಿವಿಧ ಭಾಗಗಳಲ್ಲಿಯೂ ಸೇವೆ ಸಲ್ಲಿಸಿದರು.

ಒಟ್ಟು 24 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತರಾಗಿದ್ದೇನೆ. ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಜಮ್ಮುವಿನ ಕಥುವಾ ಪ್ರದೇಶದಲ್ಲಿ ನಿಯೋಜಿತರಾಗಿದ್ದೆ. ಅಲ್ಲಿ ಡ್ರೋನ್ ಕಾರ್ಯಾಚರಣೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದೆ. ವಿವಿಧ ಸವಾಲಿನ ಪರಿಸ್ಥಿತಿಗಳಲ್ಲಿ ಕರ್ತವ್ಯ ನಿರ್ವಹಿಸಿರುವುದು ಹೆಮ್ಮೆಯ ಸಂಗತಿ ಎಂದು ವಿಜಯ್ ಕುಮಾರ್ ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.

ರಾಷ್ಟ್ರೀಯ ರೈಫಲ್ಸ್‌ನಲ್ಲಿ ಸೇವೆ: ಶಿವಾಜಿನಾಯ್ಕ್ ಅವರು ಮೂಲತಃ ನ್ಯಾಮತಿ ತಾಲೂಕಿನವರು. ಶಿವಮೊಗ್ಗದಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ್ದಾರೆ. ೨೦೦೨ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ, ಮಂಗಳೂರಿನಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಸಿಕಂದರಾಬಾದ್‌ನಲ್ಲಿ ಎರಡು ವರ್ಷ ತರಬೇತಿ ಪಡೆದರು.

ತರಬೇತಿ ಬಳಿಕ ಪಂಜಾಬ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್ (ಆರ್‌ಆರ್) ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡರು. ಬಳಿಕ ಬಾಂಬೆ, ರಾಜಸ್ಥಾನ, ಉತ್ತರ ಪ್ರದೇಶ, ಪಠಾಣ್‌ಕೋಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದರು. ರಾಜಸ್ಥಾನದಲ್ಲಿ ನಡೆದ ರಷ್ಯನ್ ಸಮರಾಭ್ಯಾಸದಲ್ಲಿಯೂ ಭಾಗವಹಿಸಿದ್ದರು. ವಿವಿಧ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ಕೊನೆಯದಾಗಿ ಅಸ್ಸಾಂ ಹಾಗೂ ಗುವಾಹಟಿ ಭಾಗದಲ್ಲಿ ಕರ್ತವ್ಯ ನಿರ್ವಹಿಸಿದರು.

24 ವರ್ಷಗಳ ಸೇವೆ ಪೂರ್ಣಗೊಳಿಸಿ ನಾನ್-ಕಮಿಷನ್ಡ್ ಆಫೀಸರ್ ಆಗಿ ನಿವೃತ್ತಿಯಾಗಿದ್ದೇನೆ. ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಸದಾ ನೆನಪಿನಲ್ಲಿ ಉಳಿಯಲಿದೆ ಎಂದು ಶಿವಾಜಿನಾಯ್ಕ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮಾಭಿವೃದ್ಧಿಯೇ ಗ್ರಾಮ ಸ್ವರಾಜ್ಯದ ಆಶಯ: ಸಚಿವ ಸಿ.ಪುಟ್ಟರಂಗಶೆಟ್ಟಿ
ಪುರಸಭೆಯಲ್ಲಿ ಎಸ್.ಶರವಣ ಸ್ವಚ್ಛತಾ ಪ್ರತಿಜ್ಞಾ ವಿಧಿ