ಹುಬ್ಬಳ್ಳಿಗರ ಸೇವೆಗೆ ಅಜ್ಜನ ಭಕ್ತರು ಖುಷ್!

KannadaprabhaNewsNetwork |  
Published : Feb 28, 2025, 12:45 AM IST

ಸಾರಾಂಶ

ಹಳೆ ಹುಬ್ಬಳ್ಳಿಯ ವೀರಯ್ಯಸ್ವಾಮಿ ಸಾಲಿಮಠ ಹಾಗೂ ಸ್ನೇಹಿತರ ತಂಡ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಉಪಾಹಾರದೊಂದಿಗೆ ಔಷಧಿ ವಿತರಣೆ, ಕಾಲುಗಳ ಮಸಾಜ್ ಕಾರ್ಯದ ಮೂಲಕ ವಿಭಿನ್ನ ಸೇವೆಯಲ್ಲಿ ನಿರತರಾಗಿದ್ದರು

ಅಜೀಜಅಹ್ಮದ ಬಳಗಾನೂರ ಹುಬ್ಬಳ್ಳಿ

ಸಿದ್ಧಾರೂಢರ ಜಾತ್ರೆಯ ವೈಭವವೇ ಹಾಗೆ, ಎಲ್ಲಿ ನೋಡಿದರಲ್ಲಿ ಭಕ್ತಸಮೂಹ. ನೂರಾರು ಕಡೆ ಅನ್ನಪ್ರಸಾದ, ಬಾಳೆಹಣ್ಣು, ಖರ್ಜೂರ, ತಂಪುಪಾನೀಯ ವ್ಯವಸ್ಥೆ. ಜಾತ್ರೆಗೆ ಬಂದ ಭಕ್ತರಲ್ಲಿ ಅಜ್ಜನ ಮೇಲಿನ ಭಕ್ತಿ ಇಮ್ಮಡಿಗೊಳಿಸಿತು.

ಈ ಜಾತ್ರೆಗೆ ಲಕ್ಷಾಂತರ ಭಕ್ತರು ಸೇರುವುದು ಸಾಮಾನ್ಯ. ಹೀಗೆ ಬರುವ ಭಕ್ತರಿಗೆ ಊಟ, ನೀರಿನ ತೊಂದರೆಯಾಗದಂತೆ ನೂರಾರು ಸಂಘ-ಸಂಸ್ಥೆಗಳು, ಅಜ್ಜನ ಸದ್ಭಕ್ತರು ಸ್ವಯಂಪ್ರೇರಿತವಾಗಿ ಅನ್ನಪ್ರಸಾದ ಕಾರ್ಯ ಕೈಗೊಳ್ಳುತ್ತಾ ಬರುತ್ತಿದ್ದಾರೆ.

ಎಲ್ಲೆಲ್ಲಿ ಸೇವೆ?: ನಗರದ ಚೆನ್ನಮ್ಮ ವೃತ್ತದಿಂದ ಸಿದ್ಧಾರೂಢರ ಮಠಕ್ಕೆ ತೆರಳುವ ಮಾರ್ಗದುದ್ದಕ್ಕೂ, ಮಠದ ಅಕ್ಕಪಕ್ಕದಲ್ಲಿ, ಇಂಡಿಪಂಪ್‌ ವೃತ್ತ, ಗೋಕುಲ ರಸ್ತೆಯಿಂದ ಸಿದ್ಧಾರೂಢರ ಮಠಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ನೂರಾರು ಸಂಘ-ಸಂಸ್ಥೆಗಳು, ಭಕ್ತರು ಸಿದ್ಧಾರೂಢರ ಮಠಕ್ಕೆ ತೆರಳುತ್ತಿದ್ದ ಭಕ್ತರು, ಆಟೋ, ಟ್ರ್ಯಾಕ್ಟರ್‌ ಸೇರಿದಂತೆ ಎಲ್ಲ ವಾಹನಗಳನ್ನು ನಿಲ್ಲಿಸಿ ಪ್ರಸಾದ ನೀಡಿ ಕಳುಹಿಸುತ್ತಿದ್ದರು.

ಏನೇನು ವಿತರಣೆ?: ರೊಟ್ಟಿ ಊಟ, ಫಲಾವ್‌, ಸಿರಾ, ಉಪ್ಪಿಟ್ಟು, ಚುರುಮರಿ ವಗ್ಗರಣೆ, ಮೊಸರ ಅವಲಕ್ಕಿ, ಅವಲಕ್ಕಿ, ಖಾರಾ, ಚಿತ್ರಾನ್ನ, ಲಾಡು, ಬಗೆಬಗೆಯ ಹಣ್ಣುಗಳ ಜ್ಯೂಸ್‌, ಮಜ್ಜಿಗೆ, ಎಳನೀರು, ಕಲ್ಲಂಗಡಿ, ಸೇಬು, ದ್ರಾಕ್ಷಿ, ಬಾಳೆಹಣ್ಣು, ಹಾಲು, ಕಬ್ಬಿನ ಹಾಲು, ಕರ್ಜೂರ, ಚುರುಮರಿ ಪ್ಯಾಕೆಟ್‌, ಜ್ಯೂಸ್‌, ನೀರಿನ ಬಾಟಲ್‌ಗಳನ್ನು ಉಚಿತವಾಗಿ ನೀಡಿದರು.

ಔಷಧ, ಮಸಾಜ್‌ ಸೇವೆ: ಹಳೆ ಹುಬ್ಬಳ್ಳಿಯ ವೀರಯ್ಯಸ್ವಾಮಿ ಸಾಲಿಮಠ ಹಾಗೂ ಸ್ನೇಹಿತರ ತಂಡ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಉಪಾಹಾರದೊಂದಿಗೆ ಔಷಧಿ ವಿತರಣೆ, ಕಾಲುಗಳ ಮಸಾಜ್ ಕಾರ್ಯದ ಮೂಲಕ ವಿಭಿನ್ನ ಸೇವೆಯಲ್ಲಿ ನಿರತರಾಗಿದ್ದರು. ಸಾವಿರಾರು ಜನರಿಗೆ ಔಷಧ ವಿತರಣೆ ಜತೆ ಬಳಲಿ ಬಂದ ಭಕ್ತರಿಗೆ ಮಸಾಜ್ ಮಾಡುತ್ತಿದ್ದಾರೆ.

ದೂರದ ಊರುಗಳಿಂದ ಪಾದಯಾತ್ರೆ ಕೈಗೊಂಡು ಬಸವಳಿದು ಬರುವ ಭಕ್ತರಿಗೆ ಕಳೆದ 8-10 ವರ್ಷಗಳಿಂದ ಉಪಾಹಾರದೊಂದಿಗೆ ಔಷಧ ಹಾಗೂ ಕಾಲುಗಳಿಗೆ ಮಸಾಜ್‌ ಸೇವೆ ಮಾಡುತ್ತಿದ್ದಾರೆ. ಫೆ. 25ರಂದು ಬೆಳಗ್ಗೆ 8 ಗಂಟೆಗೆ ಆರಂಭವಾದ ಅವರ ಸೇವಾ ಕಾರ್ಯ ಫೆ. 28ರ ಬೆಳಗ್ಗೆ 8 ಗಂಟೆ ವರೆಗೆ 72 ಗಂಟೆಗಳ ಕಾಲ ನಡೆಯಲಿದೆ.

ಸ್ನೇಹಿತರ ಸಾಥ್‌: ವೀರಯ್ಯಸ್ವಾಮಿ ಅವರೊಂದಿಗೆ ಸ್ನೇಹಿತರಾದ ಲೋಕೇಶ ಗುಂಜಾಳ, ಪ್ರಕಾಶ ಗದಿಗೆಪ್ಪನವರ, ಚನ್ನಬಸಯ್ಯ ಹಿರೇಮಠ, ಪ್ರಕಾಶ ಕುಲಕರ್ಣಿ, ಕಲ್ಲಯ್ಯ ಕುರಡಿಕೇರಿ, ತಮ್ಮಣ್ಣ, ಮುತ್ತು ಕುರಡಿಕೇರಿ, ಗಣೇಶ, ಸಚಿನ್, ವಿಜಯಕುಮಾರ ಕೆ., ರಮೇಶ ತೆವರಿ ಸೇರಿದಂತೆ ಹಲವು ಸ್ನೇಹಿತರು ಕೈಜೋಡಿಸಿದ್ದಾರೆ.

ಎಲ್ಲವೂ ಅಜ್ಜನ ಸೇವೆಗಾಗಿ: ಕಳೆದ 8-10 ವರ್ಷಗಳಿಂದ ಪ್ರತಿವರ್ಷವೂ ಅಜ್ಜನ ಜಾತ್ರೆಯಲ್ಲಿ ಈ ಸೇವಾಕಾರ್ಯವನ್ನು ಎಲ್ಲ ಸ್ನೇಹಿತರ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದೇವೆ. ಕಳೆದ ಮೂರು ದಿನಗಳಲ್ಲಿ 4 ಸಾವಿರಕ್ಕೂ ಅಧಿಕ ಜನರಿಗೆ ಔಷಧ ವಿತರಣೆ ಮಾಡಲಾಗಿದೆ. 1500ಕ್ಕೂ ಅಧಿಕ ಜನರಿಗೆ ಮಸಾಜ್ ಮಾಡಲಾಗಿದೆ. ಪ್ರತಿವರ್ಷವೂ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತಸ ತಂದಿದೆ. ಇದೆಲ್ಲ ಅಜ್ಜನ ಸೇವೆಗಾಗಿ ನಾನು ಮತ್ತು ನನ್ನ ಸ್ನೇಹಿತರು ಮಾಡುತ್ತಿರುವ ಸೇವಾಕಾರ್ಯ ಎಂದು ವೀರಯ್ಯಸ್ವಾಮಿ ಸಾಲಿಮಠ ''''ಕನ್ನಡಪ್ರಭ''''ಕ್ಕೆ ತಿಳಿಸಿದರು.

ಕಳೆದ 5-6 ವರ್ಷಗಳಿಂದ ನಾವು ಸಿದ್ಧಾರೂಢರ ಜಾತ್ರೆಗೆ ಆಗಮಿಸುತ್ತಿದ್ದೇವೆ. ಬರುವ ಲಕ್ಷಾಂತರ ಭಕ್ತರಿಗೆ ಔಷಧ, ಮಸಾಜ್‌, ಉಪಾಹಾರದ ವ್ಯವಸ್ಥೆ ಕೈಗೊಳ್ಳುತ್ತಿರುವ ಇಲ್ಲಿನ ಭಕ್ತರ ಸೇವೆ ಕಂಡರೆ ಹರ್ಷವೆನಿಸುತ್ತದೆ ಎಂದು ಭಕ್ತೆಯರಾದ ಮಂಗಳಾ ಮೂರೂರ, ದೀಪಾ ಚಂದೂರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ