ಬಳ್ಳಾರಿ: ನಗರದ 21 ಮಸೀದಿಗಳಿಗೆ ₹2.20 ಕೋಟಿ ಅನುದಾನ, ಎರಡು ಶಾದಿ ಮಹಲ್‌ಗಳಿಗೆ ₹3 ಕೋಟಿ ಅನುದಾನ ತಂದಿರುವೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಭಾನುವಾರ ನಗರದಲ್ಲಿ ಮುಸ್ಲಿಂ ಸಮುದಾಯ ಏರ್ಪಡಿಸಿದ್ದ ಶಾಸಕರ, ಸಂಸದರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಭಾರತದ ಮುಸ್ಲಿಂ ಸಮುದಾಯ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಇಲ್ಲಿಯವರೆಗೆ ಮುಸ್ಲಿಮರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ದೇಶಕ್ಕಾಗಿ ಬಲಿದಾನಗೈದವರ ಹೆಸರನ್ನು ಇತಿಹಾಸದಿಂದ ತೆಗೆದು ಹಾಕುವ ಹುನ್ನಾರವನ್ನು ಯಾರಾದರೂ ಮಾಡಬಹುದು. ಆದರೆ ಹುತಾತ್ಮರ ಹೆಸರನ್ನು ಅಳಿಸಲಾಗದು ಎಂದು ಹೇಳಿದರು.
ನಿಮ್ಮ ಆಶೀರ್ವಾದದಿಂದ ನಾನು ಒಂದೇ ದಿನ ಅಲ್ಪಸಂಖ್ಯಾತ ಸಮುದಾಯಗಳ ಕಾಲನಿಗಳ ಅಭಿವೃದ್ಧಿಗಾಗಿ ₹5 ಕೋಟಿ ಕಾಮಗಾರಿಗೆ ಚಾಲನೆ ನೀಡಿದೆ. ಹಿಂದೂ-ಮುಸ್ಲಿಮರ ಏಕತೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕೋಮು ಸೌಹಾರ್ದ ಕಾಪಾಡುವ ಜವಾಬ್ದಾರಿ ನಮ್ಮದು. ವಿಧಾನಸಭೆಯ ಚುನಾವಣೆಯ ವೇಳೆಯೇ ನಮ್ಮನ್ನು ಗೆಲ್ಲಿಸಿದ್ದೀರಿ. ನನ್ನ ತಂದೆ ತಾಯಿಯ ಪುಣ್ಯ ಹಾಗೂ ಅಲ್ಲಾಹನ ಕೃಪೆಯಿಂದಾಗಿ ನಾನು ಶಾಸಕನಾದೆ ಎಂದರು.
ಬಳಿಕ ಮಾತನಾಡಿದ ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸಿರ್ ಹುಸೇನ್, ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ವಿಶೇಷವಾಗಿ ನಗರದ ಎರಡು ಶಾದಿಮಹಲ್‌ಗಳಿಗೆ ಅನುದಾನ ಮಂಜೂರು ಮಾಡಿಸಿದ್ದೇವೆ ಎಂದರು.ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳು ಸೇರಿಸಿ ಮುಸ್ಲಿಮರ ಸಂಖ್ಯೆ ದೊಡ್ಡದಿದೆ. ಹೀಗಾಗಿ ಎರಡು ಶಾದಿ ಮಹಲ್‌ಗಳ ಅಗತ್ಯ ಇದೆ ಎಂದು ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸಿರ್ ಹುಸೇನ್ ಹೇಳಿದರು.
ಮುಸ್ಲಿಂ ಮುಖಂಡರು ಶಾಸಕ ನಾರಾ ಭರತ್ ರೆಡ್ಡಿ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರನ್ನು ಸನ್ಮಾನಿಸಿದರು.ಮೇಯರ್ ಮುಲ್ಲಂಗಿ ನಂದೀಶ್, ಹುಮಾಯೂನ್ ಖಾನ್, ಮೆಹದಿ ಮಿಯಾಸಾಹೇಬ್, ಖಾಜಿ ಗುಲಾಮ್ ಸಿದ್ದಿಕಿ, ಪೀರಬಾಷಾಸಾಹೇಬ್, ಕಣೇಕಲಸಾಹೇಬ್, ಕರಿಮುದ್ದೀನಸಾಹೇಬ, ಖಾಜುನಸಾಹೇಬ್, ಹಾಜಿ ಇಲ್ಯಾಸ್ ಸಾಹೇಬ್, ಹುಸೇನ್ ಪೀರಾ, ಅಯಾಜ್ ಅಹ್ಮದ್ ಉಪಸ್ಥಿತರಿದ್ದರು.