ಯಲ್ಲಾಪುರ: ಗ್ರಾಮ ಪಂಚಾಯಿತಿಗಳಿಗೆ ಒಂದೂವರೆ, ಎರಡು ವರ್ಷಗಳಿಂದ ಯಾವುದೇ ಅನುದಾನ ಬಾರದೇ, ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸರ್ಕಾರದ ಈ ಧೋರಣೆ ಖಂಡಿಸಿ, ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟವು ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ. ಭಟ್ಟ ಯಡಳ್ಳಿ ಹೇಳಿದರು.
ಇತ್ತೀಚೆಗೆ ಗ್ರಾಪಂ ಕೈಗೊಳ್ಳುವ ಯಾವುದೇ ಸ್ವತಂತ್ರ ನಿರ್ಣಯಗಳಿಗೆ ಕವಡೆ ಕಾಸಿನ ಬೆಲೆಯೂ ಸಿಗದಂತಾಗಿದೆ. ಇದರಿಂದ ಚುನಾಯಿತ ಗ್ರಾಪಂ ಪ್ರತಿನಿಧಿಗಳಿಗೆ ಅಸ್ತಿತ್ವವೇ ಇಲ್ಲದಂತಾಗಿದೆ. ಈ ಕಾರಣವನ್ನು ವಿರೋಧಿಸಿಯೇ ಸೆ. ೨೬ರಂದು ಬೆಳಗ್ಗೆ ೧೧ ಗಂಟೆಗೆ ಪಟ್ಟಣದ ತಾಪಂ ಆವಾರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಪಂ ಕಾರ್ಯನಿರ್ವಹಣಾಧಿಕಾರಿಗಳು ಆಗಮಿಸಿ, ನಮಗೆ ಸಮರ್ಪಕ ಮಾಹಿತಿ ನೀಡುವ ವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು.
ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಸುಬ್ಬಣ್ಣ ಕುಂಟೇಗಾಳಿ ಮಾತನಾಡಿ, ಗ್ರಾಪಂ ಆಡಳಿತಕ್ಕೆ ಗ್ರಾಮ ಸರ್ಕಾರವೆಂಬ ಹೆಸರಿದ್ದರೂ ವಾಸ್ತವಿಕ ಪರಿಸ್ಥಿತಿಯೇ ಬೇರಿದೆ. ಅಲ್ಪಸ್ವಲ್ಪ ಬರಬಹುದಾದ ಅನುದಾನದ ಬಳಕೆಗೂ ಸರ್ಕಾರದ ಸೂಚನೆಯನ್ನೇ ಅನುಸರಿಸಬೇಕಾದ ದುಃಸ್ಥಿತಿ ಎದುರಾಗಿದೆ. ಸರ್ಕಾರ ಗ್ರಾಪಂ ವ್ಯಾಪ್ತಿಯ ಜನಸಂಖ್ಯೆಯನ್ನು ಆಧರಿಸಿ, ಅನುದಾನ ನೀಡುವಂತಾಗಬೇಕು ಅಥವಾ ರಾಜ್ಯಾದ್ಯಂತ ಎಲ್ಲ ಗ್ರಾಪಂಗಳಿಗೂ ತಾರತಮ್ಯವಿರದ ರೀತಿಯಲ್ಲಿ ಸಮಾನ ಮೊತ್ತದ ಅನುದಾನ ಒದಗಿಸುವಂತಾಗಬೇಕು ಎಂಬುದು ನಮ್ಮ ಒಕ್ಕೂಟದ ಆಗ್ರಹವಾಗಿದೆ ಎಂದರು.ಒಕ್ಕೂಟದ ಜಿಲ್ಲಾ ಸಮಿತಿ ಸದಸ್ಯ ಗಣೇಶ ಹೆಗಡೆ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಗತ್ಯವಾಗಿ ನಡೆಯಬೇಕಾಗಿದ್ದ ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳು ಸರ್ಕಾರದ ಅನುದಾನವಿರದ ಕಾರಣ ನಡೆಯುತ್ತಿಲ್ಲ. ಗ್ರಾಪಂ ಸದಸ್ಯರ ಅಧಿಕಾರ ಮೊಟಕುಗೊಳಿಸಲಾಗಿದೆ. ಇವುಗಳನ್ನು ಪ್ರತಿಭಟಿಸುವ ಹಿನ್ನೆಲೆಯಲ್ಲಿ ನಮ್ಮ ಧ್ವನಿಯನ್ನು ರಾಜ್ಯಕ್ಕೆ ತಲುಪಿಸುವ ಹಿನ್ನೆಲೆಯಲ್ಲಿ ನಾವು ಸೆ. ೨೬ರಂದು ಪ್ರಥಮ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು. ಕಾರ್ಯದರ್ಶಿ ಸದಾಶಿವ ಚಿಕ್ಕೊತ್ತಿ, ಪ್ರಮುಖರಾದ ಕೆ.ಟಿ. ಹೆಗಡೆ, ಮೀನಾಕ್ಷಿ ಭಟ್ಟ ಸುದ್ದಿಗೋಷ್ಠಿಯಲ್ಲಿದ್ದರು.