ಬಾರದ ಅನುದಾನ: ಗ್ರಾಮಾಭಿವೃದ್ಧಿ ಕುಂಠಿತ

KannadaprabhaNewsNetwork |  
Published : Jul 24, 2026, 01:30 AM IST
1) 22ಎಚ್‌ ಆರ್‌ ಪಿ 1 -  ಹರಪನಹಳ್ಳಿ ತಾಲೂಕಲ್ಲಿ ಚುನಾಯಿತ ಮಂಡಳಿ ಹೊಂದಿ ಅನುದಾನದ ಕೊರತೆ ಎದುರಿಸುತ್ತಿರುವ ಏಕೈಕ ಹಾರಕನಾಳು ಗ್ರಾ.ಪಂ 2)- 22ಎಚ್‌ ಆರ್‌ ಪಿ 2 - ಹರಪನಹಳ್ಳಿ ತಾಲೂಕಿನ ಮಾಚಿಹಳ್ಳಿಯಲ್ಲಿ ಜನತೆಗೆ ಕುಡಿಯುವ ನೀರು ಪೂರೈಸಲು ಖಾಸಗಿ ಕೊಳವೆ ಬಾವಿಯಿಂದ ಬಾಡಿಗೆ ಆಧಾರದಲ್ಲಿ ನೀರು ಪಡೆದಿರುವುದು. | Kannada Prabha

ಸಾರಾಂಶ

ಗ್ರಾಪಂಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಹರಪನಹಳ್ಳಿಯ 37 ಗ್ರಾಪಂಗಳಿಗೂ ಕಳೆದ ಸಾಲಿನಿಂದ ಅಂದರೆ 2025-26ನೇ ಸಾಲಿನಿಂದಲೂ 15ನೇ ಹಣಕಾಸು ಆಯೋಗದ ಅನುದಾನ ಬಂದಿಲ್ಲ.

ಹರಪನಹಳ್ಳಿ: ಹಳ್ಳಿಗಳು ಅಭಿವೃದ್ಧಿಗೊಂಡರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಸಂದೇಶವನ್ನು ಮಹಾತ್ಮಾ ಗಾಂಧೀಜಿ ನೀಡಿದ್ದರು. ಆ ಪ್ರಕಾರ ಆಡಳಿತ ವಿಕೇಂದ್ರೀಕರಣ ಮಾಡಿ ಗ್ರಾಪಂ, ಜಿಪಂ ಹಾಗೂ ತಾಪಂಗಳೆಂಬ ಕೆಳಹಂತದಲ್ಲಿ ಮೂರು ಹಂತದ ಆಡಳಿತವನ್ನು ಜಾರಿಗೆ ತರಲಾಗಿತ್ತು. ಆದರೆ, ಗ್ರಾಪಂಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ.

ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 37 ಗ್ರಾಮ ಪಂಚಾಯಿತಿಗಳಿವೆ. ಅದರಲ್ಲಿ ಹಾರಕನಾಳು ಗ್ರಾಮ ಪಂಚಾಯಿತಿ ಮಾತ್ರ ಚುನಾಯಿತ ಮಂಡಳಿ ಹೊಂದಿದ್ದು, ಉಳಿದ 36 ಗ್ರಾಮ ಪಂಚಾಯಿತಿಗಳು ಆಡಳಿತಾಧಿಕಾರಿಗಳ ಆಡಳಿತವನ್ನು ಹೊಂದಿವೆ.

ಎಲ್ಲ 37 ಗ್ರಾಪಂಗಳಿಗೂ ಕಳೆದ ಸಾಲಿನಿಂದ ಅಂದರೆ 2025-26ನೇ ಸಾಲಿನಿಂದಲೂ 15ನೇ ಹಣಕಾಸು ಆಯೋಗದ ಅನುದಾನ ಬಂದಿಲ್ಲ. ನರೇಗಾ ಬದಲು ರೂಪಿಸಿರುವ ವಿಬಿ ಜಿ ರಾಮ್‌ ಜಿ ಇನ್ನೂ ಅನುಷ್ಠಾನಗೊಂಡಿಲ್ಲ. ಅಂದರೆ, ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕಿಲ್ಲ. ಕೇವಲ ಕಂದಾಯ ವಸೂಲಿಯ ಆದಾಯ ಮಾತ್ರ ಇದ್ದು, ಈ ವರ್ಷ ಬರ ಆವರಿಸಿದ್ದರಿಂದ ಕಂದಾಯ ವಸೂಲಾತಿಯೂ ಆಗುತ್ತಿಲ್ಲ. ಹೀಗಾದರೆ, ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದಾದರೂ ಹೇಗೆ ಎಂಬ ಚಿಂತೆಯಲ್ಲಿ ಅಧಿಕಾರಿಗಳು ಮುಳುಗಿದ್ದಾರೆ.

ಮುಂಗಾರು ವಿಫಲವಾಗಿ ಎಲ್ಲ ಕಡೆ ಬರ ಆವರಿಸಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ತಾಲೂಕಿನಲ್ಲಿ 18 ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಗ್ರಾಮಗಳಲ್ಲಿ 33 ಖಾಸಗಿ ಕೊಳವೆಬಾವಿಗಳಿಂದ ಬಾಡಿಗೆ ಪಡೆದು ಗ್ರಾಮಸ್ಥರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಅನುದಾನದ ಕೊರತೆಯಿಂದ ಹಳ್ಳಿಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಕುಡಿಯುವ ನೀರು ಸರಬರಾಜು ಮಾಡುವ ಮೋಟರ್‌ಗಳು ಸುಟ್ಟರೆ ರಿಪೇರಿ ಮಾಡಿಸಲು ಪಂಚಾಯ್ತಿಗಳಲ್ಲಿ ದುಡ್ಡಿಲ್ಲ. ಯಾವುದೇ ಕೆಲಸ ಕಾರ್ಯಗಳಿಗೆ ಹಣದ ಕೊರತೆ ಇದೆ. ಅನುದಾನದ ಸಮಸ್ಯೆ ಈ ರೀತಿ ಆದರೆ ಪಂಚಾಯಿತಿ ಆಡಳಿತಾಧಿಕಾರಿ (ಪಿಡಿಒ)ಗಳ ಕೊರತೆಯೂ ಇದೆ. 37 ಗ್ರಾಪಂಗಳಿಗೆ ಕೇವಲ 17 ಪಿಡಿಒಗಳು ಇದ್ದು, ಒಬ್ಬೊಬ್ಬರಿಗೆ 2-3 ಗ್ರಾಪಂಗಳ ಜವಾಬ್ದಾರಿಯನ್ನು ಕೊಡಲಾಗಿದೆ. ಇದರಿಂದ ಪಿಡಿಒ ಮೇಲೆ ವಿಪರೀತ ಒತ್ತಡ ಉಂಟಾಗಿದೆ.

ಗ್ರಾಮ ಪಂಚಾಯಿತಿಗಳಿಗೆ ನೇಮಕವಾದ ಆಡಳಿತಾಧಿಕಾರಿಗಳು ತಮ್ಮ ಕೆಲಸ ಕಾರ್ಯದ ಜತೆಗೆ ಆಗಾಗ ಪಂಚಾಯಿತಿಗಳಿಗೆ ಭೇಟಿ ನೀಡಿ ಬರುವುದಷ್ಟೆ ಆಗಿದೆ. ಚುನಾಯಿತ ಮಂಡಳಿ ಇಲ್ಲದ ಪಂಚಾಯಿತಿಗಳು ಬಿಡಿ, ಚುನಾಯಿತ ಮಂಡಳಿ ಇರುವ ಏಕೈಕ ಹಾರಕನಾಳು ಗ್ರಾಪಂಯೂ ಸಾಕಷ್ಟು ಅನುದಾನದ ಕೊರತೆ ಎದುರಿಸುತ್ತಿದೆ.

ತಾಪಂನದ್ದೂ ಇದೇ ಗೋಳು: ಗ್ರಾಮ ಪಂಚಾಯಿತಿಗಳ ಕಥೆ ಈ ರೀತಿ ಆದರೆ ತಾಲೂಕು ಪಂಚಾಯಿತಿಯೂ ಅನುದಾನದ ಕೊರತೆ ಎದುರಿಸುತ್ತಿದೆ. ಇಲ್ಲಿ ಕೇವಲ ಅಧಿಭಾರ ಶುಲ್ಕ ಮಾತ್ರದಿಂದ ಸಣ್ಣ ಪುಟ್ಟ ಕೆಲಸ ಕಾರ್ಯ ಮಾಡಿಕೊಳ್ಳಬಹುದು. ಹೀಗಾಗಿ, ಗ್ರಾಪಂ ಹಾಗೂ ತಾಪಂ ಇದ್ದೂ ಇಲ್ಲದಂತಾಗಿವೆ. ಸರ್ಕಾರ ತ್ವರಿತವಾಗಿ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಮಾಡಬೇಕು. ಹೊಸದಾಗಿ ಜಾರಿಯಾಗಿರುವ ವಿಬಿ ಜಿ ರಾಮ್‌ ಜೀ ಅಡಿ ಕೂಲಿ ಕಾರ್ಮಿಕರಿಗೆ 125 ದಿನ ಕೂಲಿ ಕೆಲಸ ಕೂಡಲೇ ಕೊಡಬೇಕು ಎಂಬುದು ಕೂಲಿಕಾರರ, ಸಾರ್ವಜನಿಕರ ಆಗ್ರಹವಾಗಿದೆ.

ಅನುದಾನ ನೀಡಲಿ: ಅನುದಾನವಿಲ್ಲದೆ ಗ್ರಾಪಂ ನಡೆಸುವುದು ತುಂಬಾ ಕಷ್ಟವಾಗಿದೆ. ಕುಡಿಯುವ ನೀರಿನ ಮೋಟರ್ ಸುಟ್ಟರೆ ದುರಸ್ತಿ ಮಾಡಿಸಲೂ ದುಡ್ಡಿಲ್ಲ. ಕಂದಾಯ ವಸೂಲಾತಿ ಆಗುತ್ತಿಲ್ಲ. ಅಧ್ಯಕ್ಷರಾಗಿ ಏನು ಮಾಡಲೂ ಆಗುತ್ತಿಲ್ಲ. ಸರ್ಕಾರ ಅನುದಾನ ಕೊಟ್ಟು ಹಳ್ಳಿಗಳ ಉದ್ಧಾರ ಮಾಡಬೇಕು ಎಂದು ಹಾರಕನಾಳು ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ ಹೇಳುತ್ತಾರೆ.

ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಅನುದಾನ ಬಂದಿಲ್ಲ. ಬರ ಇರುವುದರಿಂದ ಕಂದಾಯ ವಸೂಲಾತಿ ಕಷ್ಟವಾಗಿದ್ದು, ಶೀಘ್ರ ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಗ್ರಾಪಂನಿಂದ ಕೆಲಸ ಕೊಡಲಾಗುವುದು ಎಂದು ಹರಪನಹಳ್ಳಿ ತಾಪಂ ಇಒ ವೈ.ಎಚ್. ಚಂದ್ರಶೇಖರ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾರಾಯಣಗುರು ನಿಗಮಕ್ಕೆ 500 ಕೋಟಿ ರು. ನೀಡದೆ ಸರ್ಕಾರ ವಂಚಿಸಿದೆ: ವಿಠಲ ಪೂಜಾರಿ
ಮಹಾರಾಷ್ಟ್ರ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರಿ