ಪುಸ್ತಕಗಳ ಜೊತೆ ತಪಸ್ಸು ಮಾಡಿದರೆ ಶ್ರೇಷ್ಠ ಸಾಧನೆ

KannadaprabhaNewsNetwork |  
Published : Mar 16, 2026, 12:15 AM IST
 | Kannada Prabha

ಸಾರಾಂಶ

ಪುಸ್ತಕಗಳ ಜೊತೆ ತಪಸ್ಸು ಮಾಡುವವರು ಶ್ರೇಷ್ಠ ಸಾಧಕರಾಗುತ್ತಾರೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ತಪಸ್ಸಿನಂತೆ ಅಧ್ಯಯನ ಮಾಡಬೇಕು. ಹೆಚ್ಚು ಓದಿ ತಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಪುಸ್ತಕಗಳ ಜೊತೆ ತಪಸ್ಸು ಮಾಡುವವರು ಶ್ರೇಷ್ಠ ಸಾಧಕರಾಗುತ್ತಾರೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ತಪಸ್ಸಿನಂತೆ ಅಧ್ಯಯನ ಮಾಡಬೇಕು. ಹೆಚ್ಚು ಓದಿ ತಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಕುವೆಂಪು ನಗರದ ಕೃಷಿಕ್ ಸರ್ವೋದಯ ಫೌಂಡೇಷನ್ ಸಭಾಂಗಣದಲ್ಲಿ ಭಾನುವಾರ ನಿವೃತ್ತ ಐಎಎಸ್ ಅಧಿಕಾರಿ, ಫೌಂಡೇಷನ್ ಅಧ್ಯಕ್ಷರಾಗಿದ್ದ ಸಿ. ಚಿಕ್ಕಣ್ಣನವರಿಗೆ ನುಡಿನಮನ ಹಾಗೂ ಕೃಷಿಕ ಕುಟುಂಬದ 75 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೆ.ಎಸ್.ಎಫ್. ಎಂಡೋಮೆಂಟ್ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಹುದ್ದೆಗಳಿಗೆ ಸರ್ಕಾರಿ ಮೀಸಲಾತಿ ನಂಬಿ ಕೂರಬಾರದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಲ್ಲರನ್ನೂ ಮೀರಿ ಸಾಧಿಸುವ ಪ್ರತಿಭೆ, ಗುರಿ, ಛಲ ಹೊಂದಬೇಕು. ಆಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದರು.

ಸಾಮಾನ್ಯ ಪದವಿಗಳಲ್ಲಿ ಪಡೆಯುವ ಅಂಕಗಳು ಹುದ್ದೆ ಪಡೆಯಲು ಉಪಯೋಗಕ್ಕೆ ಬರುವುದಿಲ್ಲ, ಆ ಪದವಿಗಳು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ನೀಡುತ್ತವೆ, ತಾವು ತೆಗೆದುಕೊಳ್ಳುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತರ ಪರೀಕ್ಷಾರ್ಥಿಗಳಿಗಿಂತಾ ಹೆಚ್ಚಿನ ರ‍್ಯಾಂಕ್ ಪಡೆದಾಗ ಮಾತ್ರ ನೀವು ಬಯಸಿದ ಉದ್ಯೋಗ ಪಡೆಯಬಹುದು. ಬ್ಯಾಂಕ್, ರೈಲ್ವೆ, ಮಿಲಿಟರಿಗಳಲ್ಲಿ ವಿಫುಲವಾದ ಉದ್ಯೋಗಾವಕಾಶಗಳಿವೆ. ನಮ್ಮ ಬಹುತೇಕ ವಿದ್ಯಾರ್ಥಿಗಳ ಅಂತಹ ಪರೀಕ್ಷೆ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಹಿಂಜರಿಕೆ ಬಿಟ್ಟು ಆತ್ಮವಿಶ್ವಾಸದಿಂದ ಸಿದ್ಧರಾಗಿ ಪರೀಕ್ಷೆ ತೆಗೆದುಕೊಂಡರೆ ಉದ್ಯೋಗ ಪಡೆಯಬಹುದು ಎಂದು ಸ್ವಾಮೀಜಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಬೆಂಗಳೂರಿನ ಕೃಷಿಕ್ ಸರ್ವೋದಯ ಫೌಂಡೇಷನ್ ಅಧ್ಯಕ್ಷ ಟಿ.ತಿಮ್ಮೇಗೌಡರು ಮಾತನಾಡಿ, ಇಂದು 75 ವಿದ್ಯಾರ್ಥಿಗಳಿಗೆ 11.90 ಲಕ್ಷ ರು.ಗಳ ಕೆ.ಎಸ್.ಎಫ್ ಎಂಡೋಮೆಂಟ್ ವಿದ್ಯಾರ್ಥಿವೇತನ ವಿತರಿಸಲಾಗಿದೆ. ನಮ್ಮ ಮಕ್ಕಳು ವಿದ್ಯಾವಂತರಾಗಿ ಸಮಾಜದ ಸತ್ಪೃಜೆಗಳಾಗಿ ಉನ್ನತ ಸ್ಥಾನಕ್ಕೆ ಹೋಗಬೇಕು ಎಂಬ ಆಶಯದಿಂದ ಅವರಿಗೆ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.

ಕೆ.ಎಸ್.ಎಫ್ ಟ್ರಸ್ಟಿ, ನಿವೃತ್ತ ಹಿರಿಯ ಬ್ಯಾಂಕ್ ಅಧಿಕಾರಿ ಡಾ. ಎಸ್.ಟಿ. ರಾಮಚಂದ್ರ ಅವರು, ಬಡ, ಕೃಷಿಕ ಕುಟುಂಬದ ಶೇಕಡ 85 ಮೀರಿ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿಯೂಸಿಯಿಂದ ಪದವಿ ಪಡೆಯುವವರೆಗೂ 5 ವರ್ಷಗಳ ಕಾಲ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಇದೂವರೆಗೆ ಸಂಸ್ಥೆಯಿಂದ ಸುಮಾರು ಕೋಟಿ ರು. ವರೆಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದರು.

ತುಮಕೂರು ಕೃಷಿಕ್ ಸರ್ವೋದಯ ಫೌಂಡೇಷನ್ ಪ್ರಭಾರ ಅಧ್ಯಕ್ಷ ಆಡಿಟರ್ ನಾಗರಾಜ್ ಯಲಚವಾಡಿ ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಶ್ರಮದಿಂದ ಕಟ್ಟಿದ ಈ ಸಂಸ್ಥೆಯ ಆಶಯ ಈಡೇರಬೇಕೆಂದರೆ ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಸಂಸ್ಥೆಯನ್ನು ಇನ್ನೂ ದೊಡ್ಡದಾಗಿ ಬೆಳೆಸಿ ಮತ್ತಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲು ಎಲ್ಲರ ಸಹಕಾರ ಅಗತ್ಯ ಎಂದರು. ಸಂಸ್ಥೆಯಲ್ಲಿ ತರಬೇತಿ ಪಡೆಯುವ 130 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಪರಿಣತರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ಕೋರಿದರು.

ಈ ವೇಳೆ 75 ವಿದ್ಯಾರ್ಥಿಗಳಿಗೆ ಕೆ.ಎಸ್.ಎಫ್ ಎಂಡೋಮೆಂಟ್ ವಿದ್ಯಾರ್ಥಿ ವೇತನದ ಚೆಕ್ ವಿತರಿಸಲಾಯಿತು. ದಿ.ಸಿ. ಚಿಕ್ಕಣ್ಣನವರ ಪತ್ನಿ ಕಾಂತಮ್ಮ, ಫೌಂಡೇಷನ್ ಕಾರ್ಯದರ್ಶಿ ಎಚ್.ಎಸ್. ಹನುಮೇಗೌಡ, ಖಜಾಂಚಿ ಕೆ.ಜಿ. ರಾಜಣ್ಣ, ಶೈಕ್ಷಣಿಕ ಸಮಿತಿ ಅಧ್ಯಕ್ಷ ಪ್ರೊ. ಕೆ. ಚಂದ್ರಣ್ಣ, ಆಡಳಿತ ಮಂಡಳು ಸದಸ್ಯರಾದ ಜಿ. ಶಿವಾನಂದ್, ವೆಂಕಟಗಿರಿಯಪ್ಪ, ಡಾ. ಮುದ್ದುಕೃಷ್ಣ, ಎಲ್. ಸಿದ್ಧೇಶ್, ಸಂಯೋಜಕ ಡಾ. ಗುರುರಾಜ್ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ನೀರು ನೇರ ಬಳಕೆಗಲ್ಲ
ಲಾರಿಗೆ ಕಾರು ಡಿಕ್ಕಿ: ಮೂವರು ಆರ್‌ಎಸ್‌ಐಗಳ ಸಾವು