ಮಹಾನ್ ಮಾನವತಾವಾದಿ ಅಂಬೇಡ್ಕರ ಜಯಂತ್ಯುತ್ಸವ

KannadaprabhaNewsNetwork | Published : Apr 15, 2024 1:16 AM

ಸಾರಾಂಶ

ಅಂಬೇಡ್ಕರ್ ಬಡ ಕುಟುಂಬದಲ್ಲಿ ಜನ್ಮ ತಾಳಿ, ಸಾಕಷ್ಟು ನೋವು, ಅವಮಾನಗಳನ್ನು ಅನುಭವಿಸಿದ್ದಾರೆ. ಅಸಮಾನತೆಯನ್ನು ಹೋಗಲಾಡಿಸಲು ಅವರಿಗಾದ ಅಪಮಾನಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ. ಅವರು ಕೇವಲ ವ್ಯಕ್ತಿಯಲ್ಲ, ದೊಡ್ಡ ಶಕ್ತಿ

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಮಾನತೆ ದೊರಕಬೇಕು ಎಂದು ಶ್ರಮಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಮಹಾನ್ ಮಾನವತಾವಾದಿ. ಅವರ ತತ್ವ, ಚಿಂತನೆ, ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಉದ್ಯಾನವನದಲ್ಲಿ ನಡೆದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 133 ನೇ ಜನ್ಮ ದಿನಾಚರಣೆಯ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಅಂಬೇಡ್ಕರ್ ಬಡ ಕುಟುಂಬದಲ್ಲಿ ಜನ್ಮ ತಾಳಿ, ಸಾಕಷ್ಟು ನೋವು, ಅವಮಾನಗಳನ್ನು ಅನುಭವಿಸಿದ್ದಾರೆ. ಅಸಮಾನತೆಯನ್ನು ಹೋಗಲಾಡಿಸಲು ಅವರಿಗಾದ ಅಪಮಾನಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ. ಅವರು ಕೇವಲ ವ್ಯಕ್ತಿಯಲ್ಲ, ದೊಡ್ಡ ಶಕ್ತಿ ಎಂದು ತಿಳಿಸಿದರು.

ಭಾರತಕ್ಕೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಅಂಬೇಡ್ಕರ್ ಅವರು ಗುರುವಾಗಿದ್ದವರು. ಸುಮಾರು 60ಕ್ಕೂ ಹೆಚ್ಚು ದೇಶಗಳಲ್ಲಿ ಅಂಬೇಡ್ಕರ್ ರವರ ಪುತ್ಥಳಿ ಸ್ಥಾಪಿಸಿ ಎಲ್ಲರೂ ಸ್ಮರಿಸುತ್ತಿದ್ದು ಅವರು ವಿಶ್ವಕ್ಕೇ ನಾಯಕರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದಲ್ಲಿ ಸಮಾನತೆಯ ತತ್ವವನ್ನು ಸಾರುವ ಮೂಲಕ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಬಾಬಾ ಸಾಹೇಬರು ಪರಿಚಯಿಸಿದರು. ಎಲ್ಲರಿಗೂ ಸಮಾನ ಹಕ್ಕು ಹಾಗೂ ಅವಕಾಶಗಳು ದೊರೆಯಬೇಕು. ಮನುಷ್ಯರನ್ನು ಮನುಷ್ಯರಂತೆ ಕಾಣುವ ಮೂಲಕ ಮಾನವೀಯ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಡಾ. ಅಂಬೇಡ್ಕರ್ ಸಾಮಾಜಿಕ ಸುಧಾರಣೆಗಾಗಿ ಬಹಳಷ್ಟು ಶ್ರಮಿಸಿದ್ದಾರೆ. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಭಾಷೆಯ ರಚನೆ, ರಾಜ್ಯಗಳ ವಿಭಜನೆ, ಮಹಿಳೆಯರು ಸೇರಿ ರಾಜ್ಯ ಮತ್ತು ಅಲ್ಪಸಂಖ್ಯಾತರ ಸಮಸ್ಯೆ, ಅಸ್ಪೃಶ್ಯತೆ, ಜಾತಿ ಪದ್ಧತಿಯನ್ನು ಹೋಗಲಾಡಿಸುವ ಅನೇಕ ಪುಸ್ತಕಗಳನ್ನು ರಚಿಸುವ ಮೂಲಕ ದೇಶದಲ್ಲಿದ್ದ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಒದಗಿಸಲು ವ್ಯಕ್ತಿ ಘನತೆ, ರಾಷ್ಟ್ರದ ಏಕತೆ ಹಾಗೂ ಶಕ್ತಿಶಾಲಿ ರಾಷ್ಟ್ರವನ್ನು ನಿರ್ಮಾಣ ಮಾಡುವಲ್ಲಿ ವಿಶೇಷ ಪಾತ್ರ ವಹಿಸಿದ್ದವರು ಎಂದು ಹೇಳಿದರು.

ಪ್ರತಿಯೊಬ್ಬರೂ ಸಂವಿಧಾನ ರಚನಾಕಾರ ಅಂಬೇಡ್ಕರ್ ಅವರ ಕೊಡುಗೆಯನ್ನು ಸದಾ ಸ್ಮರಿಸಿ ಅನುಷ್ಠಾನಗೊಳಿಸಬೇಕು. ಸಂವಿಧಾನದ ಫಲ ಎಲ್ಲರಿಗೂ ಸಿಗಬೇಕೆಂದರೆ ನಾವು ಜ್ಞಾನದ ಅರಿವು ಮೂಡಿಸಿಕೊಳ್ಳಬೇಕು. ಬಾಬಾ ಸಾಹೇಬರ ಶ್ರೇಷ್ಠ ಕೊಡುಗೆ ಸರ್ವರಿಗೂ ಸಮಾನವಾಗಿ ಸಿಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮೋಹನ್, ಪೌರಾಯುಕ್ತ ಆರ್. ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ರಾಜಮೂರ್ತಿ ಸೇರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ದಸಂಸ ಮುಖಂಡರು, ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

Share this article