ಹಾವೇರಿ: ಗಣೇಶ ಚತುರ್ಥಿ ಹಬ್ಬವನ್ನು ಶನಿವಾರ ಎಲ್ಲೆಡೆ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆದಿದ್ದು, ವಿಘ್ನನಿವಾರಕ ಗಣೇಶನನ್ನು ಶ್ರದ್ಧಾಭಕ್ತಿಯಿಂದ ಸ್ವಾಗತಿಸಲು ಭಕ್ತರು ಅಣಿಯಾಗಿದ್ದಾರೆ. ಈಗಾಗಲೇ ವಿವಿಧ ಆಕಾರ, ವರ್ಣಗಳಿಂದ ಗಣೇಶನ ಮೂರ್ತಿಗಳು ತಯಾರಾಗಿದ್ದು, ಶುಕ್ರವಾರ ಮಾರುಕಟ್ಟೆಯಲ್ಲಿ ಹಬ್ಬದ ಸಿದ್ಧತೆ ಜೋರಾಗಿ ನಡೆಯಿತು.
ಶನಿವಾರ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ಹೂವು ಹಣ್ಣು, ಬಾಳೆಕಂಬ, ಮಾವಿನತೋರಣ, ಕಬ್ಬು, ಫಲಾವಳಿಗೆ ಕಟ್ಟಲು ನಾನಾ ರೀತಿಯ ಫಲ, ತರಕಾರಿ ಖರೀದಿ ಭರಾಟೆ ಜೋರಾಗಿ ನಡೆಯಿತು. ಪಟಾಕಿ, ಗಣೇಶನ ಮಂಟಪ ತಯಾರಿಗಾಗಿ ಬಣ್ಣಬಣ್ಣದ ಹೂಹಾರ, ವಿದ್ಯುತ್ ದೀಪಾಲಂಕಾರ ಸಾಮಗ್ರಿಗಳ ಖರೀದಿಯೂ ಜೋರಾಗಿತ್ತು. ಗಣೇಶನ ಮೂರ್ತಿ ಪ್ರತಿಷ್ಠಾಪನೆಗಾಗಿ ಈಗಾಗಲೇ ವಿವಿಧ ಅಳತೆಯ ಮನಮೋಹಕ ಗಣೇಶ ವಿಗ್ರಹ ತಯಾರಾಗಿವೆ. ವಿವಿಧ ಭಾಗದಲ್ಲಿ ಕಲಾವಿದರು ಕಳೆದ ಒಂದು ತಿಂಗಳಿಂದ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಈಗ ಅಂತಿಮ ರೂಪ ನೀಡುತ್ತಿದ್ದಾರೆ. ಜೇಡಿಮಣ್ಣಿನಿಂದ ತಯಾರಿಸಿದ ಶಿವರೂಪಿ ಗಣೇಶ, ಸಾಯಿರೂಪಿ ಗಜಾನನ, ನಂದಿರೂಢ ಏಕದಂತ, ದೊಡ್ಡ ಗಣೇಶ, ಸಣ್ಣ ಗಣೇಶ, ಮರಿ ಗಣೇಶ, ಕಿರು ಗಣೇಶ, ಹಸುವಿನ ಮೇಲೆ ಕುಳಿತ ಗಣೇಶ, ನವಿಲಿನ ಮೇಲೆ ಕುಣಿವ ಗಣೇಶ, ರಥದ ಮೇಲಿರುವ ಗಣೇಶ, ಕಮಲದ ಮೇಲಿರುವ ಗಣೇಶ, ಪಂಚಮುಖಿ ಗಣೇಶ, ವಿಷ್ಣುರೂಪಿ ವಕ್ರತುಂಡ, ವೆಂಕಟೇಶ ರೂಪಿ ವಿಘ್ನೇಶ್ವರ ಮೂರ್ತಿಗಳು ಸೇರಿದಂತೆ ವಿವಿಧ ಭಂಗಿಯ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ.ನಗರದ ಮಾರುಕಟ್ಟೆಯಲ್ಲಿ ಆಕರ್ಷಕ ಗಣಪತಿ ಮೂರ್ತಿಗಳನ್ನು ಗುರುತಿಸಿ ಮುಂಗಡ ಹಣ ಪಾವತಿ ಮಾಡುವಲ್ಲಿ ನೂರಾರು ಜನರು ತಲ್ಲೀನರಾಗಿದ್ದರು. ಬುಕಿಂಗ್ ಮಾಡಿದ ಗಣಪನನ್ನು ಸೋಮವಾರ ಬೆಳಗ್ಗೆ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗುತ್ತದೆ.ಸರ್ಕಾರ ಪಿಒಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿದ್ದರಿಂದ ಸಾರ್ವಜನಿಕರು ನೈಸರ್ಗಿಕ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಗಣೇಶ ಮೂರ್ತಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಗಣೇಶ ಮೂರ್ತಿಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೀಡಲಾಗಿದ್ದು, ಗಣೇಶನ ಮೂರ್ತಿಗಳ ಆಕಾರ, ಗಾತ್ರಗಳಿಗೆ ಅನುಗುಣವಾಗಿ ಬೆಲೆ ನಿಗದಿಗೊಳಿಸಲಾಗಿದೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ₹ ೫೦೦ ಗಳಿಂದ ಪ್ರಾರಂಭಗೊಂಡು ೫ ಸಾವಿರಗಳವರೆಗೆ ಮಾರಾಟವಾಗುತ್ತಿವೆ. ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ೫ ರಿಂದ ೧೦ ಅಡಿ ಗಣೇಶ ಮೂರ್ತಿಗಳು ೧೦ ರಿಂದ ೨೦ ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟಗಾಗುತ್ತಿವೆ.ಜಿಲ್ಲಾಡಳಿತದ ವತಿಯಿಂದ ಪಟಾಕಿ ವ್ಯಾಪಾರಕ್ಕೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ಈಗಾಗಲೇ ವಿಭಿನ್ನ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಕಳೆದ ಬಾರಿಗಿಂತ ಈ ಬಾರಿ ಪಟಾಕಿ ಬೆಲೆಯೂ ಏರಿಕೆಯಾಗಿ ಗ್ರಾಹಕರ ಕಿಸೆ ಸುಡುತ್ತಿವೆ. ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಜನತೆಗೆ ಬೆಲೆ ಏರಿಕೆ ಬಿಸಿ: ಗಣೇಶ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿದ್ದು, ಪ್ರತಿಯೊಂದು ಅಂಗಡಿಗಳು ಜನದಟ್ಟಣೆಯಿಂದ ಆವರಿಸಿದ್ದವು. ಇತ್ತ ಹೂ, ಹಣ್ಣು, ಬಾಳೆಕಂಬ, ತಳಿರು ತೋರಣ ಖರೀದಿಯಲ್ಲಿ ಸಾರ್ವಜನಿಕರು ತೊಡಗಿದ್ದು, ಬಾಳೆ ಹಣ್ಣು ಡಜನ್‌ಗೆ ₹ ೬೦-೭೦, ಸೇಬು ಕೆಜಿಗೆ ₹ 150-200, ಮೊಸಂಬಿ ಕೆಜಿಗೆ ₹ ೮೦-೧೦೦, ದಾಳಿಂಬೆ ಗಾತ್ರದ ಮೇಲೆ ಕೆಜಿಗೆ ₹ ೧೦೦-200 ವರೆಗೂ ಮಾರಾಟವಾಗುತ್ತಿದೆ. ಚಿಕ್ಕು ಕೆಜಿಗೆ ₹ ೮೦, ಕರಿದ್ರಾಕ್ಷಿ ₹ ೧೮೦-೨೦೦, ಸೀತಾಫಲ ಕೆಜಿಗೆ ₹ ೧೦೦, ಚೆಂಡು ಹೂ ಮಾರಿಗೆ ₹ ೪೦-೫೦ ಬಾಳೆ ಕಂಬ ಒಂದು ಜೊತೆಗೆ ₹ ೪೦-೫೦ ಗಳಿಗೆ ಮಾರಾಟವಾಗುತ್ತಿವೆ. ಬೆಲೆ ಏರಿಕೆಯಾಗಿದ್ದರಿಂದ ಸಾರ್ವಜನಿಕರು ವ್ಯಾಪಾರಿಗಳೊಂದಿಗೆ ಚೌಕಾಸಿ ನಡೆಸಿ ಖರೀದಿಸುವ ದೃಶ್ಯ ಕಂಡು ಬಂತು.ಮತ್ತೆ ಜೋರಾದ ಪಟಾಕಿ ವ್ಯಾಪಾರ: ಕಳೆದ ವರ್ಷ ಇದೇ ಗಣೇಶ ಚತುರ್ಥಿ ಸಂದರ್ಭದಲ್ಲಿ ಹಾವೇರಿಯ ಪಟಾಕಿ ಗೋದಾಮೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ನಾಲ್ವರು ಕಾರ್ಮಿಕರು ಸಜೀವ ದಹನಗೊಂಡ ಘಟನೆ ನಡೆದಿತ್ತು. ಆ ಬಳಿಕ ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಪಟಾಕಿ ಮಾರಾಟ ಬಹುತೇಕ ಸ್ಥಗಿತಗೊಂಡಿತ್ತು. ಆದರೆ, ಈ ಸಲ ಮತ್ತೆ ಮಾರುಕಟ್ಟೆಯ ಬೀದಿಗಳಲ್ಲಿ ಪಟಾಕಿ ಮಾರಾಟ ನಡೆದಿದೆ. ಕಳೆದ ವರ್ಷದ ದುರಂತ ನೆನೆಯುತ್ತಲೇ ಜನತೆ ಮತ್ತೆ ಪಟಾಕಿ ಖರೀದಿಸುತ್ತಿದ್ದಾರೆ.