ಶಾಲಾ ಪ್ರಾರಂಭೋತ್ಸವಕ್ಕೆ ಭರ್ಜರಿ ಸಿದ್ಧತೆ

KannadaprabhaNewsNetwork |  
Published : May 30, 2024, 12:51 AM IST
ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿರುವ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಶಾಲಾ ಮಕ್ಕಳ ಸಮವಸ್ತ್ರಗಳ ಸಂಗ್ರಹ ಕಾರ್ಯ ಕೈಗೊಳ್ಳಲಾಯಿತು.  | Kannada Prabha

ಸಾರಾಂಶ

ಶಾಲೆ ಪ್ರಾರಂಭೋತ್ಸವದ ದಿನವಾದ ಮೇ 31ರಂದೇ ಹೆಚ್ಚು ಮಕ್ಕಳು ತರಗತಿಗೆ ಹಾಜರಾಗುವಂತೆ ಮುಖ್ಯ ಶಿಕ್ಷಕರು ಹಾಗೂ ಸಿಆರ್‌ಪಿ, ಬಿಆರ್‌ಪಿಗಳಿಗೆ ಆಯಾ ಬಿಇಒಗಳು ಸಭೆ ಮೂಲಕ ಮಾರ್ಗದರ್ಶನ ನೀಡಿದ್ದಾರೆ.

ಹುಬ್ಬಳ್ಳಿ:

ರಾಜ್ಯಾದ್ಯಂತ ಮೇ 31ರಂದು ಶಾಲೆಗಳು ಆರಂಭವಾಗುತ್ತಿದ್ದು, ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಶಿಕ್ಷಕರು ವಿಶೇಷ, ವೈಶಿಷ್ಟ್ಯಪೂರ್ಣವಾಗಿ ಅಗತ್ಯ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆ ಆದೇಶದಂತೆ ಮೇ 29ರಿಂದಲೇ ಶಿಕ್ಷಕರು ಮತ್ತು ಸಿಬ್ಬಂದಿ ಸೇವೆಗೆ ಹಾಜರಾಗಿ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ.ಕಳೆದ ಸೋಮವಾರ ಪ್ರಾಥಮಿಕ ಹಾಗೂ ಮಂಗಳವಾರ ಪ್ರೌಢಶಾಲೆಗಳ ಶಿಕ್ಷಕರ ಸಭೆ ಕರೆದು ಶಾಲಾ ಪ್ರಾರಂಭೋತ್ಸವಕ್ಕೆ ಕೈಗೊಳ್ಳಬೇಕಾಗಿರುವ ಸಿದ್ಧತೆ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿತ್ತು. ಅದರಂತೆ ಬುಧವಾರ ಬೆಳಗ್ಗೆಯೇ ಶಾಲೆಗೆ ಆಗಮಿಸಿದ ಶಿಕ್ಷಕರು, ಕೊಠಡಿ, ಆವರಣದ ಸ್ವಚ್ಛತಾ ಕಾರ್ಯಕೈಗೊಂಡರು. ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕಪ್ಪು (ಬೋರ್ಡ್) ಹಲಗೆಗೆ ಬಣ್ಣ ಬಳಿಯುವುದು, ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸಂಗ್ರಹ ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ನಿರತರಾಗಿದ್ದರು.

ಮಕ್ಕಳಿಗೆ ಸಿಹಿ ವಿತರಣೆ:

ಶಾಲೆ ಪ್ರಾರಂಭೋತ್ಸವದ ದಿನವಾದ ಮೇ 31ರಂದೇ ಹೆಚ್ಚು ಮಕ್ಕಳು ತರಗತಿಗೆ ಹಾಜರಾಗುವಂತೆ ಮುಖ್ಯ ಶಿಕ್ಷಕರು ಹಾಗೂ ಸಿಆರ್‌ಪಿ, ಬಿಆರ್‌ಪಿಗಳಿಗೆ ಆಯಾ ಬಿಇಒಗಳು ಸಭೆ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಅದರಂತೆ ಶಾಲೆ ಪ್ರಾರಂಭದ ಮೊದಲ ದಿನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಬಹುತೇಕ ಎಲ್ಲ ಶಾಲೆಗಳನ್ನು ತಳಿರು-ತೋರಣಗಳಿಂದ ಶೃಂಗರಿಸಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಸಿಹಿ ವಿತರಿಸುವ ವ್ಯವಸ್ಥೆಯನ್ನು ಶಾಲೆ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಮಾಡಿಕೊಂಡಿದೆ.

ಜಾಗೃತಿ ಕಾರ್ಯ

ಹುಬ್ಬಳ್ಳಿ ಶಹರ ಪ್ರದೇಶದಲ್ಲಿ ಅನುದಾನಿತ ಹಾಗೂ ಅನುದಾನ ರಹಿತ ಒಟ್ಟು 344 ಶಾಲೆಗಳಿದ್ದು, ಅದರಲ್ಲಿ ಒಟ್ಟು 21,405 ಮಕ್ಕಳು, ಗ್ರಾಮೀಣ ಭಾಗದಲ್ಲಿ 243 ಶಾಲೆಗಳಿದ್ದು, ಒಟ್ಟು 41,225 ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಈಗಾಗಲೇ ತರಗತಿಗೆ ಪ್ರವೇಶ ಪಡೆದಿರುವ ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಹಾಜರಾಗುವಂತೆ ನೋಡಿಕೊಳ್ಳುವುದು. ಹೊಸದಾಗಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಶಾಲಾ ಪ್ರಾರಂಭೋತ್ಸವದ ದಿನವೇ ಶಾಲಾ ಶಿಕ್ಷಕರ ಸಭೆ ಕರೆದು ಪಠ್ಯ ವಿಷಯದ ಹಂಚಿಕೆ ಹಾಗೂ ಎಸ್‌ಡಿಎಂಸಿ ಸದಸ್ಯರ ಸಭೆ ನಡೆಸಿ, ವಾರ್ಷಿಕ ಯೋಜನೆ ರೂಪಿಸುವ ಕೆಲಸ ನಡೆಯಲಿದೆ. ಶೇ. 85ರಷ್ಟು ಶಾಲಾ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ಸಂಗ್ರಹ ಕಾರ್ಯವೂ ಪೂರ್ಣಗೊಂಡಿದೆ.ಅದ್ಧೂರಿ ಶಾಲಾ ಪ್ರಾರಂಭೋತ್ಸವಕ್ಕೆ ಈಗಾಗಲೇ ಎಲ್ಲ ಶಾಲೆಗಳಲ್ಲೂ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಶಾಲಾ ಆರಂಭದ ಮೊದಲ ದಿನವೇ ಎಲ್ಲ ಮಕ್ಕಳು ಶಾಲೆಗೆ ಬರಬೇಕು ಎಂಬುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ಹುಬ್ಬಳ್ಳಿ ಶಹರ ಬಿಇಒ ಚನ್ನಪ್ಪಗೌಡರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!