ಗೌರಿ ಗಣೇಶ ಹಬ್ಬಕ್ಕೆ ವಿಜಯನಗರ ಜಿಲ್ಲೆಯಲ್ಲಿ ಭರದ ಸಿದ್ಧತೆ

KannadaprabhaNewsNetwork |  
Published : Sep 07, 2024, 01:41 AM IST
6ಎಚ್‌ಪಿಟಿ3- ಹೊಸಪೇಟೆಯಲ್ಲಿ ವಿವಿಧ ಭಂಗಿಯ ಗಣೇಶಮೂರ್ತಿಗಳನ್ನು ಕಲಾವಿದರು ತಯಾರಿಸಿದ್ದಾರೆ. | Kannada Prabha

ಸಾರಾಂಶ

ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಮಾರುಕಟ್ಟೆಗಳಲ್ಲಿ ಜನರು ಭಾರೀ ಸಂಖ್ಯೆಯಲ್ಲಿ ಕಂಡುಬಂದರು.

ಹೊಸಪೇಟೆ: ಗೌರಿ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ಜಿಲ್ಲೆಯಾದ್ಯಂತ ಭರದ ಸಿದ್ಧತೆ ನಡೆದಿದೆ.

ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಮಾರುಕಟ್ಟೆಗಳಲ್ಲಿ ಜನರು ಭಾರೀ ಸಂಖ್ಯೆಯಲ್ಲಿ ಕಂಡುಬಂದರು. ಜಿಲ್ಲೆಯಲ್ಲಿ ವಿವಿಧ ವಿನಾಯಕ ಸಮಿತಿಗಳು 1818 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಿದ್ದು, ಪೊಲೀಸರು ಕೂಡ ಸೂಕ್ತ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಹಬಕ್ಕೆ ಹೂ, ಹಣ್ಣು ಹಂಪಲುಗಳನ್ನು ಖರೀದಿಯೂ ಜೋರಾಗಿ ನಡೆಯಿತು. ಹೂ, ಹಣ್ಣಿನ ದರದಲ್ಲಿ ಏರಿಕೆಯಾಗಿದ್ದರೂ ಇದನ್ನು ಲೆಕ್ಕಿಸದೇ ವಿನಾಯಕ ಸಮಿತಿ ಸದಸ್ಯರು ಹಾಗೂ ಜನರು ಖರೀದಿ ಮಾಡಿದರು.

ಗಣೇಶ ಮೂರ್ತಿಗಳ ಖರೀದಿ:

ನಗರದ ಮೇನ್‌ ಬಜಾರ್‌ ಸೇರಿದಂತೆ ವಿವಿಧ ಕಡೆ ಕಲಾವಿದರು ಮಣ್ಣಿನ ಗಣಪತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಕಂಡು ಬಂದಿತು. ಅದರಲ್ಲೂ ಭಾರೀ ಗಾತ್ರದ ಗಣಪತಿಗಳನ್ನು ಮೊದಲೇ ಆರ್ಡರ್‌ ಮಾಡಿದ್ದರಿಂದ ಕಲಾವಿದರು ತಿಂಗಳಿನಿಂದ ಶ್ರಮಪಟ್ಟು ತಯಾರಿಸಿದ್ದಾರೆ. ಈ ಮೂರ್ತಿಗಳನ್ನು ವಾಹನಗಳಲ್ಲಿ ಕೊಂಡೊಯ್ಯಲಾಯಿತು.

ನಗರದಲ್ಲಿ ಶ್ರೀ ರಾಮ, ಹನುಮಂತ, ಶ್ರೀ ಕೃಷ್ಣ, ಅರ್ಧನಾರೇಶ್ವರ, ಶಿವ, ವಿಷ್ಣು, ಶಿವಾಜಿ ರೂಪದಲ್ಲಿ ಗಣೇಶ ಮೂರ್ತಿಗಳನ್ನು ಭಕ್ತರ ಅಪಕ್ಷೇಯಂತೆ ಕಲಾವಿದರು ಸೃಜಿಸಿದ್ದಾರೆ. ಐದು ಅಡಿಯಿಂದ 16 ಅಡಿ ಎತ್ತರದ ವರಗೆ ಗಣಪನನ್ನು ತಯಾರಿಸಿದ್ದಾರೆ. ₹15000 ಗಳಿಂದ ಒಂದು ಲಕ್ಷ ರು. ಬೆಲೆಬಾಳುವ ಗಣಪತಿ ಮೂರ್ತಿಯನ್ನು ಕಲಾವಿದರು ತಯಾರಿಸಿದ್ದು, ಬಳ್ಳಾರಿ, ಗದಗ, ಕೊಪ್ಪಳ ಜಿಲ್ಲೆ ಸೇರಿದಂತೆ ನೆರೆ ಆಂಧ್ರಪ್ರದೇಶದ ಅನಂತಪುರ, ರಾಯದುರ್ಗದ ಗಣೇಶ ಉತ್ಸವ ಸಮಿತಿಗಳು ಹೊಸಪೇಟೆಯಲ್ಲಿ ತಯಾರದ ಗಣೇಶ ಮೂರ್ತಿಯನ್ನು ಖರೀದಿಸಿ ಕೊಂಡ್ಯೊಯ್ದರು.

ನಗರದ ಮೇನ್‌ ಬಜಾರ್‌ನಲ್ಲಿ ಗಣೇಶನ ಸಣ್ಣ ಮೂರ್ತಿಗಳನ್ನು ₹500ನಿಂದ ₹3000ವರೆಗೆ ಕಲಾವಿದರು ಮಾರಾಟ ಮಾಡಿದರು. ಮೂರ್ತಿಗಳ ಮಾರಾಟವೂ ಭರದಿಂದ ನಡೆಯಿತು.

ಜಿಲ್ಲೆಯಲ್ಲಿ ವಿವಿಧ ವಿನಾಯಕ ಸಮಿತಿಗಳು 1818 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಮೊದಲನೆ ದಿನ 63 ಗಣೇಶ ಮೂರ್ತಿಗಳು ವಿಸರ್ಜನೆಯಾದರೆ, ಮೂರನೇ ದಿನ 1287, ಐದನೇ ದಿನ 429, 7ನೇ ದಿನ 12, 9ನೇ ದಿನ 16, 11ನೇ ದಿನ 10 ಮತ್ತು 13ನೇ ದಿನ ಒಂದು ಗಣಪತಿ ವಿಸರ್ಜನೆ ಮಾಡಲಾಗುತ್ತದೆ.

ಹಬ್ಬದ ಸಂಭ್ರಮ:

ನಗರದ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಮದಕರಿ ನಾಯಕ ವೃತ್ತ, ಡ್ಯಾಂ ರಸ್ತೆ ಸೇರಿದಂತೆ ಹಲವು ಬಡಾವಣೆ, ರಸ್ತೆ ಬೀದಿಗಳಲ್ಲಿ ಗೌರಿ- ಗಣೇಶನ ಮೂರ್ತಿಗಳು, ಹಬ್ಬಕ್ಕೆ ಬೇಕಾದ ಹೂವು-ಹಣ್ಣು, ಬಾಳೆಕಂದು, ಗರಿಕೆ ಮಾರಾಟ ಜೋರಾಗಿಯೇ ನಡೆಯಿತು. ಗೌರಿಗೆ ಬೇಕಾದ ಬಾಗಿನ, ವಿಘ್ನೇಶ್ವರನಿಗೆ ಪ್ರಿಯವಾದ ಗರಿಕೆ, ಬೆಲ್ಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಇದರೊಂದಿಗೆ ಬಾಳೆಕಂಬ, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಜನರು ವಿಶೇಷವಾಗಿ ಖರೀದಿಸುತ್ತಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದ್ದು, ನಗರ ಸೇರಿದಂತೆ ಜಿಲ್ಲೆಯ ಪಟ್ಟಣ ಹಾಗೂ ಹೋಬಳಿಗಳ ಪ್ರಮುಖ ರಸ್ತೆಗಳ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ನಗರದ ಪ್ರಮುಖ ವೃತ್ತಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆಯಿತು.

ಪೊಲೀಸ್‌ ಪರೇಡ್‌:

ನಗರದಲ್ಲಿ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಮತ್ತು ಎಎಸ್ಪಿ ಸಲೀಂ ಪಾಷಾ ಅವರ ನೇತೃತ್ವದಲ್ಲಿ ಪೊಲೀಸರು ಗೌರಿ-ಗಣೇಶ ಹಬ್ಬದ ನಿಮಿತ್ತ ಪರೇಡ್‌ ನಡೆಸಿದರು. ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಪರೇಡ್‌ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!