ಲಕ್ಷ್ಮೇಶ್ವರ: ಪಟ್ಟಣದ ಆದಯ್ಯ ಸರ್ಕಲ್‌ನಲ್ಲಿ ಈದ್ ಮಿಲಾದ್ ಪ್ರಯುಕ್ತ ಗುರುವಾರ ಸಂಜೆ ಒಂದು ಕೋಮಿನ ಯುವಕರು ಹಸಿರು ಧ್ವಜ ಕಟ್ಟಿದ್ದು, ಇದನ್ನು ಇನ್ನೊಂದು ಕೋಮಿನವರು ವಿರೋಧಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಪೊಲೀಸರ ಸಕಾಲಿಕ ಮಧ್ಯೆ ಪ್ರವೆಶದಿಂದ ಪರಿಸ್ಥಿತಿ ತಿಳಿಯಾಯಿತು.
ಆದರೆ ಶುಕ್ರವಾರ ಈದ್ ಮಿಲಾದ್ ಮೆರವಣಿಗೆ ಆದಯ್ಯ ಸರ್ಕಲ್ ಹತ್ತಿರ ಬರುತ್ತಿರುವಾಗ ಆದಯ್ಯ ಸರ್ಕಲ್‌ನಲ್ಲಿ ಹಸಿರು ಧ್ವಜ ಇದ್ದಿದ್ದನ್ನು ಕಂಡು ಇನ್ನೊಂದು ಕೋಮಿನ ಯುವಕರು ಧ್ವಜ ತೆರವುಗೊಳಿಸುವ ತನಕ ಮೆರವಣಿಗೆ ಮುಂದಕ್ಕೆ ಸಾಗಲು ಬಿಡದೆ ಪಟ್ಟು ಹಿಡಿದರು. ಕೆಲ ಸಮಯ ಎರಡು ಕೋಮಿನ ಮಧ್ಯ ವಾದ ವಿವಾದ ನಡೆದು ಮತ್ತು ಮಾತಿನ ಚಕುಮುಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತ ತಲುಪಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ಪೊಲೀಸ್ ತಂಡ ಆಗಮಿಸಿ, ಇನ್ನೊಂದು ಕೋಮಿನ ಹಿರಿಯರು, ಯುವಕರಿಗೆ ತಿಳಿ ಹೇಳಿ ಧ್ವಜ ತೆರವುಗೊಳಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರು ಖಡಕ್ ಸೂಚನೆ ನೀಡಿ ಈಗಾಗಲೇ ಹಬ್ಬದ ಕಾರ್ಯಕ್ರಮ ಶಾಂತವಾಗಿ ಮುಗಿದಿವೆ. ಎಲ್ಲರೂ ಶಾಂತ ರೀತಿಯಿಂದ ಮರಳಬೇಕು, ಒಂದೊಮ್ಮೆ ಕಾನೂನು ಬಾಹಿರವಾಗಿ ಯಾರಾದರೂ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದರು. ತದನಂತರ ಎರಡು ಕೋಮಿನ ಹಿರಿಯರು ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.ಈ ಘಟನೆಯ ಮಾಹಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರಿಗೆ ತಿಳಿದ ತಕ್ಷಣ ಲಕ್ಷ್ಮೇಶ್ವರಕ್ಕೆ ದೌಡಾಯಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಆಯ ಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್ ಏರ್ಪಡಿಸಿದರು.
ಬಳಿಕ ಸುದ್ದಿಗಾರರಿಗೆ ಜೊತೆಗೆ ಮಾತನಾಡಿ, ಯಾವುದೇ ಧರ್ಮದ ಹಬ್ಬವನ್ನು ಶಾಂತಿ ಮತ್ತು ಸಹಬಾಳ್ವೆಯಿಂದ ಆಚರಣೆ ಮಾಡಬೇಕು. ಯಾರೂ ವಿನಾಕಾರಣ ದ್ವೇಷದ ವಾತಾವರಣ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಕಾನೂನು ಕೈಗೆತ್ತಿ ಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.