ಹುಲಿಗೆಮ್ಮದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರಕ್ಕೆ ಗ್ರೀನ್‌ ಸಿಗ್ನಲ್‌?

KannadaprabhaNewsNetwork |  
Published : Feb 16, 2024, 01:45 AM IST
ಸ್ಟೀಲ್ ಸಿಟಿ | Kannada Prabha

ಸಾರಾಂಶ

ಲಕ್ಷಾಂತರ ಭಕ್ತರು ಆಗಮಿಸುವ ಹುಲಿಗೆಮ್ಮ ದೇವಸ್ಥಾನದಲ್ಲಿ ಭಕ್ತರ ಕಾಣಿಕೆಯೂ ಹರಿದು ಬರುತ್ತದೆ. ಭಕ್ತರ ಕಾಣಿಕೆಯೇ ಈಗ ನೂರು ಕೋಟಿ ಸಮೀಪಿಸುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಉತ್ತರ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸಕ್ತ ಬಜೆಟ್ ನಲ್ಲಿ ಅನುದಾನ ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ. ಇದು ಬಹುವರ್ಷಗಳ ಬೇಡಿಕೆಯಾಗಿದೆ.ಲಕ್ಷಾಂತರ ಭಕ್ತರು ಆಗಮಿಸುವ ಹುಲಿಗೆಮ್ಮ ದೇವಸ್ಥಾನದಲ್ಲಿ ಭಕ್ತರ ಕಾಣಿಕೆಯೂ ಹರಿದು ಬರುತ್ತದೆ. ಭಕ್ತರ ಕಾಣಿಕೆಯೇ ಈಗ ನೂರು ಕೋಟಿ ಸಮೀಪಿಸುತ್ತಿದೆ.ಇಷ್ಟಾದರೂ ದೇವಸ್ಥಾನವನ್ನು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಹೀಗಾಗಿ ಪ್ರತ್ಯೇಕ ಪ್ರಾಧಿಕಾರ ಮಾಡಬೇಕು ಎನ್ನುವ ಬೇಡಿಕೆ ಈಡೇರುವ ಸಾಧ್ಯತೆ ನಿಚ್ಚಳವಾಗಿದೆ. ಇದಕ್ಕಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರ್ಕಾರವೂ ಅಸ್ತು ಎನ್ನುವ ಲಕ್ಷಣಗಳು ಇವೆ. ಇದರಿಂದ ಹುಲಿಗೆಮ್ಮದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರವಂತೂ ರಚನೆಯಾಗಿ, ಅಭಿವೃದ್ಧಿಗೆ ಸಹಕಾರಿಯಾಗಲಿದೆ.ರೈಸ್ ಪಾರ್ಕ್:ಕಾರಟಗಿ ತಾಲೂಕಿನ ನವಲಿ ಬಳಿ ನಿರ್ಮಾಣವಾಗುತ್ತಿರುವ ರೈಸ್ ಪಾರ್ಕ್ ಏಷ್ಯಾ ಖಂಡದಲ್ಲಿಯೇ ವಿಶೇಷ ಎನ್ನುವ ರೈಸ್ ಪಾರ್ಕ್ ಆಗಿದೆ. ಆದರೆ, ಇದು ಪ್ರಾರಂಭಿಸುವ ವೇಳೆಯಲ್ಲಿ ಇದ್ದ ಇಚ್ಛಾಶಕ್ತಿ ನಂತರ ದಿನಗಳಲ್ಲಿ ಇಲ್ಲವಾದ್ದರಿಂದ ಕುಂಟುತ್ತಾ, ತೇವಳುತ್ತಾ ಸಾಗಿದೆ. ಹೀಗಾಗಿ, ಇದಕ್ಕೆ ಅಗತ್ಯ ಅನುದಾನ ಬಜೆಟ್ ನಲ್ಲಿ ದೊರೆಯಬೇಕು ಎನ್ನುವ ಹಕ್ಕೊತ್ತಾಯಿ ಕೇಳಿ ಬಂದಿದೆ.

ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ತೋಟಗಾರಿಕಾ ಪಾರ್ಕ್ ಸ್ಥಾಪಿಸುವುದಕ್ಕೆ ಕಳೆದ ಸರ್ಕಾರ ಮಂಜೂರಾತಿ ನೀಡಿತ್ತು. ಆದರೆ ಅಭಿವೃದ್ಧಿಯೂ ಆಗಲಿಲ್ಲ, ನಿರೀಕ್ಷಿತ ಅನುದಾನವೂ ದೊರೆಯುತ್ತಿಲ್ಲ. ಇದು ರಾಜಕೀಯ ಜಿದ್ದಾಜಿದ್ದಿಯಲ್ಲಿ ಕೊಳೆಯುವ ಬದಲು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅಗತ್ಯ ಅನುದಾನ ದೊರೆಯುತ್ತದೆ ಎನ್ನುವುದು ಸದ್ಯದ ಕುತೂಹಲ.

ಜಾನಪದ ಲೋಕ:ಕಳೆದ ಬಜೆಟ್ ನಲ್ಲಿ ಕೊಪ್ಪಳಕ್ಕೆ ಜಾನಪದ ಲೋಕ ಘೋಷಣೆಯಾಗಿದೆ. ಆದರೆ, ಇದಕ್ಕೆ ಅಗತ್ಯ ಅನುದಾನ ಇದುವರೆಗೂ ದೊರೆತಿಲ್ಲ. ಕೊಪ್ಪಳ ಜಿಲ್ಲೆಯವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಇರುವುದರಿಂದಲೇ ಕೊಪ್ಪಳಕ್ಕೆ ಜಾನಪದ ಲೋಕ ಘೋಷಣೆಯಾಗಿದೆ. ಆದರೆ, ನಂತರ ಅದು ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಆದ್ಯತೆ ಸಿಕ್ಕಿಲ್ಲ. ಹೀಗಾಗಿ, ಈ ಬಾರಿಯಾದರೂ ಆದ್ಯತೆ ಸಿಕ್ಕು, ಅಗತ್ಯ ಅನುದಾನ ನೀಡುವರೇ ಎನ್ನುವುದು ಸದ್ಯದ ಕುತೂಹಲ.ಜಿಲ್ಲೆ ಬಿಸಿಲು ನಾಡು ಆಗಿದ್ದರೂ ತೋಟಗಾರಿಕಾ ಬೆಳೆಗಳಲ್ಲಿ ಕ್ರಾಂತಿ ಮಾಡುತ್ತಿದೆ. ಮಾವು, ದಾಳಿಂಬೆ, ಪಪ್ಪಾಯಿ ಸೇರಿದಂತೆ ಹತ್ತಾರು ತೋಟಗಾರಿಕೆ ಬೆಳೆಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹೀಗಾಗಿ, ಇಲ್ಲಿ ತೋಟಗಾರಿಕಾ ಪಾರ್ಕ್ ನಿರ್ಮಾಣ ಮಾಡುವುದಕ್ಕೆ ಮಂಜೂರಾತಿಯಾಗಿದ್ದರೂ ಅದಕ್ಕೂ ಅನುದಾನದ ಅಗತ್ಯವಿದೆ.

ವಿಮಾನ ನಿಲ್ದಾಣ:ಜಿಲ್ಲೆಗೆ ಉಡಾನ್ ಘೋಷಣೆಯಾಗಿದ್ದರೂ ಅದು ಜಾರಿಯಾಗಲೇ ಇಲ್ಲ. ಕಾರಣ ವಿಮಾನ ನಿಲ್ದಾಣ ಇಲ್ಲದೇ ಇರುವುದು. ಖಾಸಗಿಯಾಗಿ ಇರುವ ವಿಮಾನ ತಂಗುದಾಣವನ್ನೇ ಬಳಕೆ ಮಾಡಿಕೊಂಡು ಉಡಾನ್ ಜಾರಿಗೆ ಪ್ರಯತ್ನಿಸಲಾಯಿತು. ಆದರೆ, ಖಾಸಗಿ ವಿಮಾನ ತಂಗುದಾಣ ಕಂಪನಿಯವರಿಗೆ ಅಗತ್ಯ ಸಹಕಾರ ದೊರೆಯದೇ ಅದು ನನೆಗುದಿಗೆ ಬಿದ್ದಿತು.

ಇದಾದ ಮೇಲೆ ಕೊಪ್ಪಳ ಬಳಿಯೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಮುಂದಾದ ಸರ್ಕಾರ ಮೊದಲ ಹಂತದಲ್ಲಿ ಭೂಸ್ವಾಧೀನಕ್ಕೆ ಕೆಕೆಆರ್ಡಿಬಿಯಲ್ಲಿ ₹44 ಕೋಟಿ ನೀಡಲಾಯಿತಾದರೂ ಅದು ಜಾರಿಯಾಗಲೇ ಇಲ್ಲ. ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡುವುದೇ ಎನ್ನುವುದನ್ನು ಕಾದು ನೋಡಬೇಕು.ಸ್ಟೀಲ್ ಸಿಟಿ:ಜಿಲ್ಲೆಯಲ್ಲಿ ಅತ್ಯಧಿಕ ಬೃಹತ್ ಕೈಗಾರಿಕೆಗಳು ಇರುವುದರಿಂದ ಇಲ್ಲೊಂದು ಸ್ಟೀಲ್ ಸಿಟಿ ಮಾಡಬೇಕು ಎನ್ನುವ ಬೇಡಿಕೆ ಇದೆ ಮತ್ತು ಸರ್ಕಾರವೂ ಇದನ್ನು ಕಳೆದ ಕೆಲ ವರ್ಷಗಳ ಹಿಂದೆ ಬಜೆಟ್‌ನಲ್ಲಿಯೇ ಘೋಷಣೆ ಮಾಡಿತ್ತು. ಆದರೆ, ಅದು ಜಾರಿಯಾಗಲೇ ಇಲ್ಲ. ಅದಾದ ಮೇಲೆ ಸ್ಟೀಲ್ ಕಾರಿಡಾರ್ ಘೋಷಣೆ ಮಾಡಲಾಯಿತು. ಅದು ಸಹ ಜಾರಿಯಾಗಲೇ ಇಲ್ಲ. ಈ ದಿಸೆಯಲ್ಲಿ ಪ್ರಸಕ್ತ ಬಜೆಟ್ ನಲ್ಲಿ ಸಂತೋಷದ ಸುದ್ದಿ ಬರುವುದೇ ಎನ್ನುವ ನಿರೀಕ್ಷೆಯಂತೂ ಇದ್ದೇ ಇದೆ.ಜಿಂಕೆ ಧಾಮ, ಕರಡಿ ಧಾಮವನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವನೆ ಇದೆಯಾದರೂ ಅದು ಜಾರಿಯಾಗಬೇಕಾಗಿದೆ. ನೀರು ನಾಯಿಗಳ ಸಂರಕ್ಷಿತ ನದಿ ಪ್ರದೇಶ ಘೋಷಣೆಯಾಗಿದ್ದರೂ ಅಲ್ಲಿ ಅದನ್ನು ಸಂರಕ್ಷಣೆ ಮಾಡುವ ಯಾವ ಪ್ರಯತ್ನಗಳು ಮತ್ತು ಸರ್ಕಾರದಿಂದ ಅನುದಾನವೂ ಇದುವರೆಗೂ ಬಂದಿಲ್ಲ.ಹೀಗೆ, ಜಿಲ್ಲೆಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇದ್ದು, ದೂರದೃಷ್ಟಿ, ಇಚ್ಛಾಶಕ್ತಿ ಅಗತ್ಯವಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ
80 ಶಾಸಕರ ಬೆಂಬಲ ಇದೆ ಎಂಬುದು ಪ್ರಶ್ನೆಯಲ್ಲ: ಸತೀಶ್‌