ಸೋಮರಡ್ಡಿ ಅಳವಂಡಿ
ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತು ಬಜೆಟ್‌ನಲ್ಲಿ ಘೋಷಿಸಿದ್ದ ರಾಜ್ಯ ಸರ್ಕಾರ ಇದೀಗ ಅನುಷ್ಠಾನ ಮಾಡಲು ₹ 100 ಕೋಟಿ ಹಾಗೂ ಆಡಳಿತಾತ್ಮಕ ಮಂಜೂರಾತಿಯನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.
ನಗರದಲ್ಲಿ ಈಗಾಗಲೇ ಕಿಮ್ಸ್ ವೈದ್ಯಕೀಯ ಆಸ್ಪತ್ರೆ ಇದ್ದು, ಇದನ್ನೇ ಈಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ನಿರ್ಮಿಸಲು ಸರ್ಕಾರ ಮುಂದಾಗಿದ್ದು, ಇದರ ಜಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ.10 ಹಂತಸ್ತಿನ ಕಟ್ಟಡ:
ಗುರುವಾರ ಬೆಂಗಳೂರಿನಲ್ಲಿ ನಡೆದ ಕ್ಯಾಬಿನೆಟ್‌ನಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದು ಆಡಳಿತಾತ್ಮಕ ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ. ಪೂರಕವಾಗಿ ಸರ್ಕಾರ ₹ 100 ಕೋಟಿ ಮಂಜೂರಾತಿ ನೀಡಿದೆ.
ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭವಾಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವನ್ನು ಕಳೆದ ಬಾರಿ ಬಜೆಟ್‌ಗೂ ಮುನ್ನ ಪ್ರಾರಂಭಿಸಲಾಗಿತ್ತು. ಈ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿತ್ತು. ಇದಾದ ಮೇಲೆ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸುವುದಕ್ಕೆ ಸರ್ಕಾರದ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದ್ದರು. ಕೊಪ್ಪಳದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಭರವಸೆ ನೀಡಿದ್ದರು. ಇದೀಗ ಆಡಳಿತಾತ್ಮಕ ಮಂಜೂರಾತಿ ದೊರೆತಿರುವುದು ಜಿಲ್ಲೆಯ ಜನರ ಹರ್ಷಕ್ಕೆ ಸಾಕ್ಷಿಯಾಗಿದೆ.
ಕೊಪ್ಪಳದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಗುರುತು ಮಾಡಿ 3700 ಚದುರ ಅಡಿ ಸಿಎ ಜಾಗವನ್ನು ಉಚಿತವಾಗಿ ನೀಡುವಂತೆ ಕೊರಿವುದನ್ನು ಸರ್ಕಾರ ತಿರಸ್ಕರಿಸಿದೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಸಿಎ ಸೈಟ್ ಉಚಿತವಾಗಿ ನೀಡಲು ಅವಕಾಶವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ.