ಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣದ ನಿವಾಸಿಗಳಾದ ಮಕ್ತುಮ್ಬಿ ಕೊಪ್ಪದ, ಸಾಜನಬಿ ದಾದಿಬಾಯಿ, ಹುಸೇನಬಿ ಕಮ್ಮಾರ ಎಂಬ ಮೂವರು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಿಂದ ಲಭಿಸಿದ ಆರ್ಥಿಕ ನೆರವನ್ನು ಉಳಿತಾಯ ಮಾಡುವ ಮೂಲಕ ಹುಬ್ಬಳ್ಳಿಯಲ್ಲಿ ರೊಟ್ಟಿ ಮಿಷನ್ ಖರೀದಿಸಿ, ಸ್ವಯಂ ಉದ್ಯೋಗ ಆರಂಭಿಸುವಲ್ಲಿ ಮುಂದಾಗಿದ್ದಾರೆ.
ಗೃಹಲಕ್ಷ್ಮೀಯಿಂದ ಬಂದ ಹಣ, ತಲಾ ₹58 ಸಾವಿರದಂತೆ ಮೂವರು ₹1,74,000 ಕೂಡಿಟ್ಟಿದ್ದು, ಉಳಿದ ಹಣವನ್ನು ಸ್ವಂತ ಶ್ರಮದಿಂದ ಹೊಂದಿಸಿಕೊಂಡಿದ್ದಾರೆ. ₹2 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ರೊಟ್ಟಿ ತಯಾರಿಕಾ ಮಿಷನ್ ಅಳವಡಿಸಿಕೊಂಡು ಉದ್ಯಮ ಆರಂಭಿಸುವ ಮೂಲಕ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದಾರೆ.ಈ ರೊಟ್ಟಿ ಮಿಷನ್‌ನಿಂದ ಪ್ರತಿನಿತ್ಯ ತಯಾರಾಗುವ ರೊಟ್ಟಿಯನ್ನು ಪಟ್ಟಣದಲ್ಲಿರುವ ಹೋಟೆಲ್, ಡಾಬಾ, ಖಾನಾವಳಿ, ಸಭೆ-ಸಮಾರಂಭಕ್ಕೆ ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ. ಇದು ಈ ಮಹಿಳೆಯರಿಗೆ ಸ್ಥಿರ ಆದಾಯದೊಂದಿಗೆ ಸ್ವಾವಲಂಬಿ ಬದುಕಿನ ಹೆಜ್ಜೆಯಾಗಿದೆ. ಈ ಗೃಹಲಕ್ಷ್ಮೀ ರೊಟ್ಟಿ ಕೇಂದ್ರವನ್ನು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಇತರ ಗಣ್ಯರು ಉದ್ಘಾಟಿಸಿದರು.