ಸದ್ಯದಲ್ಲೆ ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ - ಪಿ.ಮಾದೇಶ್

KannadaprabhaNewsNetwork |  
Published : Feb 26, 2025, 01:05 AM IST
25ಕೆಎಂಎನ್ ಡಿ12 | Kannada Prabha

ಸಾರಾಂಶ

ಸದ್ಯದಲ್ಲಿಯೇ ಗೃಹಲಕ್ಷ್ಮೀ ಯೋಜನೆ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ. ವದಂತಿಗಳಿಗೆ ಕಿಡಿಕೊಡಬಾರದು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಿ. ಮಾದೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸದ್ಯದಲ್ಲಿಯೇ ಗೃಹಲಕ್ಷ್ಮೀ ಯೋಜನೆ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ. ವದಂತಿಗಳಿಗೆ ಕಿಡಿಕೊಡಬಾರದು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಿ. ಮಾದೇಶ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಬಡವರು ಮತ್ತು ಜನಸಾಮಾನ್ಯರ ಏಳ್ಗೆಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಗ್ಯಾರಂಟಿ ಯೋಜನೆಗಳ ಕಾರ್ಯ ಮತ್ತು ಬಡ ಫಲಾನುಭವಿಗಳಿಗೆ ಯೋಜನೆ ಲಾಭ ತಲುಪುವ ಬಗ್ಗೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು.

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಶೇ.100 ರಷ್ಟು ಅನುಷ್ಠಾನಗೊಳಿಸಬೇಕೆಂಬುದು ನಮ್ಮ ಆಶಯವಾಗಿದೆ, ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಣ್ಣಪುಟ್ಟ ಲೋಪದೋಷಗಳನ್ನು ಸರಿಮಾಡಬೇಕು ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಕೆ.ಕುಮಾರಸ್ವಾಮಿ ಮಾತನಾಡಿ, 174 ಮಂದಿಯ ಅರ್ಜಿಗಳು ಬಾಕಿ ಉಳಿದಿದ್ದು, ಅವುಗಳ ವಿಲೇವಾರಿಗೆ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದರು.

ಸದಸ್ಯ ನಾಗೇಂದ್ರ ಬಸವರಾಜು ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ ಬರುವ ಕೆಲವು ಬಡ ಮಹಿಳಾ ಫಲಾನುಭವಿಗಳ ಪಡಿತರ ಕಾರ್ಡ್ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸೇರಿದೆ. ಅವರೆಲ್ಲಾ ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.

ಆ ರೀತಿಯ ಸಮಸ್ಯೆಗಳನ್ನು ತಕ್ಷಣದಿಂದಲೇ ಬಗೆಹರಿಸಿ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ತಲುಪಿಸಬೇಕು. ತಾಲೂಕಿನ ನಡಕಲಪುರ, ಗ್ರಾಮದೇವತೆಪುರ, ಧನಗೂರು, ದಬ್ಬಹಳ್ಳಿ ಸೇರಿ ಹಲವು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಅಂಗವಿಕಲರು ಹಾಗೂ ವೃದ್ದರಿಗೆ ನಿರ್ವಾಹಕರೇ ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಸಾರಿಗೆ ಡಿಪೋ ವ್ಯವಸ್ಥಾಪಕರಿಗೆ ಹೇಳಿದರು.

ಸದಸ್ಯ ಹರೀಶ್ ಮಾತನಾಡಿ, ಹೂವಿನಕೊಪ್ಪಲು ಜನರು ಪಡಿತರ ಪಡೆಯಲು ಸುಜ್ಜಲೂರಿಗೆ ಹೋಗುವುದರಿಂದ ವೈಯಕ್ತಿಕ ಕೆಲಸಗಳಿಗೆ ಅಡೆತಡೆಯಾಗಿದೆ. ಕೂಡಲೇ ಹೂವಿನಕೊಪ್ಪಲಿನಲ್ಲಿಯೇ ಉಪಕೇಂದ್ರವನ್ನು ತೆರೆಯಬೇಕೆಂದು ಆಗ್ರಹಿಸಿದರು. ಆಹಾರ ನಿರೀಕ್ಷಕ ಬಿ.ಅಶ್ವತ್ಥ್ ಪ್ರತಿಕ್ರಿಯಿಸಿ, ಪಡಿತರ ಕಾರ್ಡ್ ಗಳಲ್ಲಿನ ಸಮಸ್ಯೆ ಬಗೆಹರಿಸಲು ಸ್ಥಳೀಯ ಜನರು ಸಹಕಾರ ನೀಡಬೇಕೆಂದರು.

ಸದಸ್ಯರಾದ ಅರ್ಷದ್ ಪಾಷಾ, ಚೇತನ್ ನಾಯಕ್ ಮಾತನಾಡಿ, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕೆಂದು ತಿಳಿಸಿದರು. ಸಂಚಾರ ನಿಯಂತ್ರಕ ಪ್ರಕಾಶ್ ಮಾತನಾಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೂಚನೆ ಮೇರೆಗೆ 26 ಹೊಸ ಸರ್ಕಲ್ ಗಳನ್ನು ರಚಿಸಿ ಬಸ್ ಸೌಲಭ್ಯ ಕಲ್ಪಿಸಿದೆ. ಜಾತ್ರೆಗಳಲ್ಲಿನ ಸಂದರ್ಭದಲ್ಲಿ ಆಗುವ ವ್ಯತ್ಯಾಸಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ತಾಪಂ ಯೋಜನಾಧಿಕಾರಿ ದೀಪು ಮಾತನಾಡಿ, ಆಯಾಯ ಇಲಾಖೆಯ ಅಧಿಕಾರಿಗಳು ಸದಸ್ಯರು ಹೇಳಿರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಮುಂದಾಗಬೇಕು ಎಂದು ಸೂಚಿಸಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ