ಹಾವೇರಿ:ನಗರದ ಕಾಗಿನೆಲೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭಾನುವಾರ ಭೂಮಿ ಪೂಜೆ ನೆರವೇರಿಸಿದರು.ನಂತರ ಎಂ.ಎಂ. ವೃತ್ತದಲ್ಲಿ ನಡೆಯುತ್ತಿದ್ದ ಮನರೇಗಾ ಬಚಾವೋ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಕಾಂಗ್ರೆಸ್ ಪಕ್ಷದ ನೂತನ ಕಚೇರಿ ಕಟ್ಟಡವು ಕಾಗಿನೆಲೆ ರಸ್ತೆ ಬದಿಯಲ್ಲಿ ಸುಮಾರು 7ಗುಂಟೆ 14 ಆಣೆ ಜಾಗದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಳ್ಳಲಿದೆ. ಸುಮಾರು 5.35 ಕೋಟಿ ರು. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕಟ್ಟಡದಲ್ಲಿ ಪಕ್ಷದ ಸಭೆ ಸಮಾರಂಭ ನಡೆಸಲು ಪ್ರತ್ಯೇಕ ಸಭಾಭವನ, ಊಟದ ಹಾಲ್, ಸಣ್ಣ ಮೀಟಿಂಗ್ ಹಾಲ್, ಅಧ್ಯಕ್ಷರ ಕೊಠಡಿ, ಮುಂಚೂಣಿ ಘಟಕಗಳ ಅಧ್ಯಕ್ಷರಿಗೆ ಚೇಂಬರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿರಲಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಆಸೆ ಮತ್ತು ಕನಸು ಬರುವ ದಿನಗಳಲ್ಲಿ ನನಸಾಗಲಿದೆ. ಕಟ್ಟಡದ ನಿರ್ಮಾಣಕ್ಕೆ ಪಕ್ಷದ ಎಲ್ಲ ಶಾಸಕರು ತಲಾ 25 ಲಕ್ಷ ರು. ಅನುದಾನ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಗ್ಯಾರಂಟಿ ಯೋಜನೆಯ ಅಧ್ಯಕ್ಷರು, ಸದಸ್ಯರು ಕೈಲಾದಷ್ಟು ಅನುದಾನ ಕೊಡಲು ಒಪ್ಪಿಕೊಂಡಿರುವುದು ಸಂತೋಷವಾಗಿದೆ. ಪಾರದರ್ಶಕವಾಗಿ ಕಟ್ಟಡವನ್ನು ಕಟ್ಟಲು ಮುಂದಾಗಿದ್ದೇವೆ ಎಂದು ತಿಳಿಸಿದರು.ಈ ವೇಳೆ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಯು.ಬಿ ಬಣಕಾರ, ಪ್ರಕಾಶ ಕೋಳಿವಾಡ, ಯಾಸೀರಖಾನ ಪಠಾಣ, ಶ್ರೀನಿವಾಸ ಮಾನೆ, ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಗ್ಯಾರಂಟಿ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಮೋಹನ ಲಿಂಬಿಕಾಯಿ, ಆನಂದಸ್ವಾಮಿ ಗಡ್ಡದೇವರಮಠ, ಎಂ.ಎಂ. ಹಿರೇಮಠ, ಎಸ್.ಎಫ್.ಎನ್ ಗಾಜಿಗೌಡ್ರ, ಎಂ.ಎಂ. ಮೈದೂರ, ಕೊಟ್ರೇಶಪ್ಪ ಬಸೇಗಣ್ಣಿ, ಆರ್. ಶಂಕರ, ನೆಹರು ಓಲೇಕಾರ, ಪ್ರೇಮಾ ಪಾಟೀಲ, ದರ್ಶನ ಲಮಾಣಿ, ರಾಜು ಕುನ್ನೂರ, ಪ್ರಸನ್ನ ಹಿರೇಮಠ, ಎಂ.ಎಫ್ ಮಣಕಟ್ಟಿ, ಮಂಜನಗೌಡ ಪಾಟೀಲ, ರಮೇಶ ಮಡಿವಾಳರ, ದಾನಪ್ಪ ಚೂರಿ, ಪ್ರಭುಗೌಡ ಬಿಷ್ಟನಗೌಡ್ರ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.