ಸಬಿ.ಜಿ.ಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಸದಾ ಬರದ ದವಡೆಗೆ ಸಿಲುಕುತ್ತಿದ್ದ ಜನರಿಗೆ ಕಳೆದ ಬಾರಿ ಕರುಣಿಸಿದ ವರುಣ ಈ ಭಾಗದ ಪ್ರಮುಖ ಜಲಪಾತ್ರೆಗಳಲ್ಲಿ ಜೀವ ಕಳೆ ತರಿಸಿ ಅಂತರ್ಜಲ ಸುಸ್ತಿರವಾಗಿಸಿದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಬವಣೆಯಿಂದ ತಾಲೂಕು ಹೊರಬರುವಂತಾಗಿದೆ.
ಹೇಳಿ ಕೇಳಿ ಬರಗಾಲ ಪೀಡಿತ ಪ್ರದೇಶ ಕಳೆದ ಎರಡು ದಶಕದಲ್ಲಿ 14 ಬಾರಿ ತಾಲೂಕು ಬರದ ದವಡೆಗೆ ಸಿಲುಕಿದೆ. ಎತ್ತ ಸಾಗಿದರೂ ಬಂಡೆಗಳ ಸಾಲು. ಉರಿ ಬಿಸಿಲ ತಾಪಕ್ಕೆ ಹೈರಾಣಾಗುತ್ತಿರುವ ಜನ ಜಾನುವಾರುಗಳಿಗೆ ದಾಹ ಇಂಗಿಸಿಕೊಳ್ಳಲುಹನಿ ನೀರು ಸಿಗದಂತಾ ಸ್ಥಿತಿ. ಸಾವಿರ ಅಡಿ ಗುರಿ ಇಟ್ಟು ಕೊರೆದರೂ ಫಲ ನೀಡದ ಕೊಳವೆ ಬಾವಿಗಳು. ಇಂತಹ ಸನ್ನಿವೇಶದ ನಡುವೆ ಬದುಕುತ್ತಿದ್ದ ತಾಲೂಕಿನ ಜನತೆಗೆ ಕಳೆದ ಬಾರಿ ಸುರಿದ ಭರ್ಜರಿ ಮಳೆಯಿಂದ ಪ್ರಮುಖ ಜಲ ಪಾತ್ರೆಗಳು ತುಂಬಿ ಅಂತರ್ಜಲ ಹೆಚ್ಚಿಸಿರುವ ಪರಿಣಾಮ ಪ್ರತಿ ಬಾರಿ ಎದುರಾಗುತ್ತಿದ್ದ ಕುಡಿಯುವ ನೀರಿನ ಆತಂಕ ದೂರವಾಗಿದೆ.
ತಾಲೂಕಿನ ಕಸಬಾ ಹಾಗೂ ದೇವಸಮುದ್ರ ಸೇರಿದಂತೆ ಎರಡು ಹೋಬಳಿಗಳಲ್ಲಿನ 128 ಹಳ್ಳಿಗಳ ಪೈಕಿ ದೇವಸಮುದ್ರ ಹೋಬಳಿಯ ಒಂಬತ್ತು ಕೆರೆಗಳು ಭರ್ತಿಯಾಗಿವೆ. ಹಾಗು ಪಟ್ಟಣ ಸೇರಿದಂತೆ ಕಸಬಾ ಹೋಬಳಿ ಯರೇನಹಳ್ಳಿ, ಕೋನಸಾಗರ, ಗುಂಡ್ಲೂರು ಕೆರೆಗಳು ಭರ್ತಿಯಾಗಿದ್ದು ಮುತ್ತಿಗಾರಹಳ್ಳಿ ದುಪ್ಪಿ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ಜೀವ ಕಳೆ ಬಂದಿದೆ. ಪರಿಣಾಮ ಗ್ರಾಮಿಣ ಭಾಗದಲ್ಲಿ ಏಪ್ರಿಲ್ ತಿಂಗಳು ಆರಂಭಗೊಂಡರೂ ಈವರೆಗೂ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಬಿ.ಜಿ.ಕೆರೆ ಸಂತೆಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿನ ಕೊಳವೆ ಬಾವಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಕಡಿಮೆಯಾಗಿದೆ ಎನ್ನಲಾಗುತ್ತಿದ್ದು ಹೆಚ್ಚುವರಿ ಪೈಪುಗಳನ್ನು ಇಳಿಸಿ ಸಮಸ್ಯೆ ಸರಿದೂಗಿಸಲಾಗುತ್ತಿದೆ. ಬಿಸಿಲ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು ಏಪ್ರಿಲ್ ಅಂತ್ಯ, ಮೇ ಆರಂಭದಲ್ಲಿ ಸಮಸ್ಯೆ ಬಾದಿಸಬಹುದು ಎನ್ನಲಾಗುತ್ತಿದೆ. ಅಂತ ಸಮಸ್ಯೆ ಎದುರಾದಲ್ಲಿ ತುರ್ತು ಪರಿಹಾರಕ್ಕೆ ಸಂಬಂದಿಸಿದ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಸಧ್ಯ ಯಾವುದೇ ಹಳ್ಳಿಗಳಲ್ಲಿ ನೀರಿನ ಕೊರತೆ ಎದುರಾಗಿಲ್ಲದಿದ್ದರೂ ಮುಂದಿನ ಎರಡು ತಿಂಗಳಲ್ಲಿ ಬಿರು ಬಿಸಿಲ ಝಳಕ್ಕೆ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗುವುದನ್ನು ಅಲ್ಲಗಳೆಯುವಂತಿಲ್ಲ.ಕಳೆದ ಬಾರಿಯ ಉತ್ತಮ ಮಳೆಯಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗಿರುವ ಪರಿಣಾಮ ಪ್ರಸ್ತುತ ದಿನಗಳಲ್ಲಿ ದೇವಸಮುದ್ರ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಇನ್ನೆರಡು ವರ್ಷಗಳ ಕಾಲ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಕೊರತೆ ಬಾಧಿಸುವುದಿಲ್ಲ.
-ಲಕ್ಷ್ಮಿ ಚಂದ್ರಣ್ಣ, ಗ್ರಾಪಂ ಅಧ್ಯಕ್ಷೆ ದೇವಸಮುದ್ರ
ಬರದ ಬವಣೆಯಿಂದ ಅಂತರ್ಜಲ ಕಡಿಮೆಯಾಗಿ ಸಾವಿರಾರು ಅಡಿ ಬೋರ್ ಕೊರೆದರೂ ಹನಿ ನೀರು ಸಿಗದೆ ಪರಿತಪಿಸುವಂತಾಗಿತ್ತು. ಉತ್ತಮ ಮಳೆಯಿಂದಾಗಿ ಈ ಬಾರಿ ಮಾರ್ಚ್ ಅಂತ್ಯ ಸಮೀಪಿಸುತ್ತಿದ್ದರೂ ಬಿ.ಜಿ.ಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ.ಆದರೂ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೇವೆ.
-ಎಸ್.ಜಯಣ್ಣ. ಅಧ್ಯಕ್ಷ .ಬಿ.ಜಿ.ಕೆರೆ ಗ್ರಾಮ ಪಂಚಾಯಿತಿ.ತಾಲೂಕಿನ ಗಡಿ ಭಾಗದಲ್ಲಿರುವ ಸಂತೆಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿಲ್ಲ.ಕೆಲ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗುತ್ತಿದೆ ಪರಿಶೀಲಿಸಿ ಮತ್ತಷ್ಟು ಪೈಪುಗಳನ್ನು ಇಳಿಸಿ ಸಮಸ್ಯೆ ಬರದಂತೆ ಎಚ್ಚರವಹಿಸುತ್ತೇವೆ
-ಓ.ಶಿಲ್ಪ ಗೋವಿಂದಪ್ಪ, ಅಧ್ಯಕ್ಷೆ ಸಂತೆಗುಡ್ಡ ಗ್ರಾಪಂ