ಚನ್ನಪಟ್ಟಣ: ಕಾಡು ನಾಶ ಮಾಡುವುದರಿಂದ ಮಳೆ ಕಡಿಮೆಯಾಗುತ್ತಿದ್ದರೆ ಮತ್ತೊಂದೆಡೆ ನಿಷೇಧಿತ ಪ್ಲ್ಯಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಟರಿಣಾಮ ಬೀರುವ ಜತೆಗೆ ಅಂತರ್ಜಲವೂ ವಿಷಪೂರಿತವಾಗುತ್ತಿದೆ. ಈಗಲಾದರೂ ನಾವು ಎಚ್ಚೆತ್ತು ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದು ಪೌರಾಯುಕ್ತ ಪುಟ್ಟಸ್ವಾಮಿ ತಿಳಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾವೇರಿ ನದಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವುದರ ಜತೆಗೆ ಮೇಕೆದಾಟು ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ನಿರಂತರ ಹೋರಾಟ 75 ದಿನ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಹೋರಾಟಗಾರರು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಗೌರವ ಸಮರ್ಪಣೆ ಹಾಗೂ ಬಳ್ಳಾರಿಯ ದಾತ್ರಿ ರಂಗ ತಂಡ ನಡೆಸಿಕೊಟ್ಟ ಪ್ಲಾಸ್ಟಿಸಿಟಿ ನಾಟಕ ವೀಕ್ಷಿಸಿ ಅವರು ಮಾತನಾಡಿದರು.ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಮುಕ್ತಿ ಸಿಗುತ್ತದೆ. ಈ ಬಗ್ಗೆ ಶಾಲಾ-ಕಾಲೇಜಿನ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಬಳ್ಳಾರಿಯ ನಾಟಕ ತಂಡವನ್ನು ಕರೆಸಿ ಪ್ರದರ್ಶನಗಳನ್ನು ನೀಡುವುದು ನೋಡಿದರೆ ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡರಿಗೆ ಕಸದ ಸಮಸ್ಯೆ ಬಗ್ಗೆ ಇರುವ ಕಾಳಜಿ ತೋರುತ್ತದೆ. ಮಕ್ಕಳಲ್ಲಿ ನಾಟಕಗಳಿಂದ ಅರಿವು ಮೂಡಿಸಿದರೆ ಅವರಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಸೈಕಲ್ ರೈಡರ್ಸ್ ಕ್ಲಬ್‌ನ ಡಾ.ಟಿ.ವಿ.ಶಂಕರ್ ಮಾತನಾಡಿ, ಪ್ರಸಕ್ತ ದಿನದಲ್ಲಿ ತಮಿಳುನಾಡಿನಲ್ಲಿ ನಿರಂತರ ಮಳೆ ಆಗುತ್ತಿದ್ದರೂ ಕಾವೇರಿ ಪ್ರಾಧಿಕಾರದಿಂದ ನಿರಂತರ ನೀರು ಬಿಡುತ್ತಿರುವುದು ಖಂಡನೀಯ, ರಾಜ್ಯದಲ್ಲಿ ಜನಪ್ರತಿನಿಧಿಗಳು ಕಂಡೂ ಕೇಳದಂತೆ ಇದ್ದು ಮುಂದಾದರೂ ಅವರು ಈ ಬಗ್ಗೆ ಗಮನ ನೀಡಲಿ ಎಂದು ಆಗ್ರಹಿಸಿದರು.ಡಾ. ಮಲವೇಗೌಡ ಮಾತನಾಡಿ, ಡಾ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಜೀವಾಮೃತ ರಕ್ತನಿಧಿಯ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ, ರಕ್ತದಾನ ಹಾಗೂ ನೇತ್ರದಾನ ಮಾಡಿದ ಕುಟುಂಬದವರಿಗೆ ಮತ್ತು ಕಾವೇರಿ ಹೋರಾಟದಲ್ಲಿ ಭಾಗಿಯಾದ ಸಂಘ ಸಂಸ್ಥೆಗಳ 35 ಮಂದಿ ಮುಖ್ಯಸ್ಥರಿಗೆ, ಕಾವೇರಿ ಹೋರಾಟವನ್ನು ಬೆಂಬಲಿಸಿದ ಕಾಲೇಜುಗಳ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರಿಗೆ ಹಾಗೂ ಹೋರಾಟಗಾರರಿಗೆ ಗೌರವ ಸಮರ್ಪಣೆ, ನಿವೃತ್ತ ಸೈನಿಕರಿಗೆ ಅಭಿನಂದನೆ ಮತ್ತು ಬೊಂಬೆನಾಡನ್ನು ಶ್ರೀಗಂಧದ ನಾಡಾಗಿಸುವ ನಿಟ್ಟಿನಲ್ಲಿ ನೂರು ಮಂದಿಗೆ ಗಂಧದ ಸಸಿ ವಿತರಣೆ ಮಾಡಲಾಯಿತು.
ಇಸ್ರೇಲ್-ಹಮಾಸ್ ಯುದ್ಧದ ವರದಿ ಮಾಡಿದ ರಿಪಬ್ಲಿಕ್ ಟಿವಿ ವರದಿಗಾರ ನಾಗೇಂದ್ರಬಾಬು ಸೇರಿದಂತೆ ಪತ್ರಕರ್ತರು, ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ್ದ, ಭಾಗವಹಿಸಲಿರುವ ವಿದ್ಯಾರ್ಥಿಗಳಿಗೆ, ಚಿನ್ನದ ಪದಕ ಪಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು, ವಿಕಲಚೇತನ ಕ್ರೀಡಾಪಟುಗಳು, ಎಸ್ಸೆಸ್ಸೆಲ್ಸಿಯ 56 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಂಜೆ ನಗೆ ಹಬ್ಬದ ಕಾರ್ಯಕ್ರಮದ ಅಂಗವಾಗಿ ಶ್ರೀ ಕೃಷ್ಣ ಸಂಧಾನ ನಗೆ ನಾಟಕ ಪ್ರದರ್ಶನ ಹಾಗೂ ವಿವಿಧ ಸಂಘ ಸಂಸ್ಥೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ, ಪಿಎಸ್‌ಐ ಹರೀಶ್, ಬಾಲು ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವೆಂಕಟಸುಬ್ಬಯ್ಯ ಚೆಟ್ಟಿ, ನಿವೃತ್ತ ಪ್ರಾಂಶುಪಾಲ ನಿಂಗೇಗೌಡ(ಎನ್‌ಜಿ) ವೇದಿಕೆ ರಾಜ್ಯ ಉಪಾಧ್ಯಕ್ಷರಾದ ರಂಜಿತ್‌ಗೌಡ, ಬೆಂಕಿ ಶ್ರೀಧರ್, ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಅರಳಾಳುಸಂದ್ರ ಶಿವಪ್ಪ, ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚನ್ನಪ್ಪ(ಸಿಸಿ), ನಿವೃತ್ತ ಪ್ರಾಂಶುಪಾಲ ಟಿ. ಆರ್. ರಂಗಸ್ವಾಮಿ, ಕವಯತ್ರಿ ಎಂ.ಎಸ್. ಆಶಾಲತಾ, ಮಂಗಳಮ್ಮ ಇತರರಿದ್ದರು.ಪೊಟೋ೨೨ಸಿಪಿಟ೨:
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾವೇರಿ ಹೋರಾಟ 75ದಿನ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.