ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕುಡಿವ ನೀರಿನ ಸಮಸ್ಯೆ

KannadaprabhaNewsNetwork |  
Published : May 12, 2026, 02:15 AM IST
ಹಾವೇರಿ ತಾಲೂಕಿನ ಸಂಗೂರು ಬಳಿ ವರದಾ ನದಿ ಒಡಲು ಬರಿದಾಗಿರುವುದು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ರಣ ಬಿಸಿಲು, ತೀವ್ರ ಸೆಕೆಯ ನಡುವೆ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ತಿಂಗಳಾಂತ್ಯದೊಳಗೆ ಮತ್ತಷ್ಟು ಸಮಸ್ಯೆ ಉದ್ಭವಿಸುವ ಸಾಧ್ಯತೆ ಗೋಚರಿಸುತ್ತಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ಜಿಲ್ಲೆಯಲ್ಲಿ ರಣ ಬಿಸಿಲು, ತೀವ್ರ ಸೆಕೆಯ ನಡುವೆ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ತಿಂಗಳಾಂತ್ಯದೊಳಗೆ ಮತ್ತಷ್ಟು ಸಮಸ್ಯೆ ಉದ್ಭವಿಸುವ ಸಾಧ್ಯತೆ ಗೋಚರಿಸುತ್ತಿದೆ.

ಬಿರು ಬೇಸಿಗೆಗೆ ಜಿಲ್ಲೆಯಲ್ಲಿನ ಜಲಮೂಲಗಳೆಲ್ಲ ಬರಿದಾಗುತ್ತಿದೆ. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಮುಂಜಾಗ್ರತಾ ಕ್ರಮ ಕೈಗೊಂಡರೂ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ 286 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ನಗರ ಪ್ರದೇಶದ 60 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ 57 ಗ್ರಾಮಗಳ 70 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ.ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ, ವರದಾ, ಧರ್ಮಾ ಹಾಗೂ ಕುಮಧ್ವತಿ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಬತ್ತಿವೆ. ಬಿಸಿಲು ಹೆಚ್ಚುತ್ತಿದ್ದಂತೆ ಹಲವು ಕೆರೆಗಳು ಒಣಗುತ್ತಿವೆ. ಅಲ್ಲಲ್ಲಿ ಕೆಲ ಬೋರ್‌ವೆಲ್‌ಗಳಲ್ಲಿ ನೀರು ಖಾಲಿಯಾಗುತ್ತಿವೆ. ಹೀಗಾಗಿ ನಗರಗಳು ಸೇರಿದಂತೆ ಬಹುತೇಕ ಗ್ರಾಮೀಣ ಭಾಗದಲ್ಲಿ ನೀರಿಗೆ ಬವಣೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಕೆರೆಗಳಿದ್ದು, ಬಹುತೇಕ ಕೆರೆಗಳಲ್ಲಿ ನೀರು ಖಾಲಿಯಾಗುತ್ತಿವೆ. ತುಂಗಭದ್ರಾ ನದಿಯಿಂದ ಹಾವೇರಿ, ರಾಣಿಬೆನ್ನೂರ, ಬ್ಯಾಡಗಿ, ಹಿರೇಕೆರೂರ ಸೇರಿದಂತೆ ನೂರಾರು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಜಾರಿಯಲ್ಲಿವೆ. ಆದರೆ, ನದಿಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವುದರಿಂದ ಆ ಗ್ರಾಮಗಳಿಗೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಖಾಸಗಿ ಕೊಳವೆಬಾವಿಯೇ ಗತಿ: ಹೊಸದಾಗಿ ಬೋರ್‌ವೆಲ್‌ ಕೊರೆಯುವ ಕಾಮಗಾರಿಯನ್ನು ಬಹುತೇಕ ಸ್ಥಗಿತಗೊಳಿಸಿರುವ ಜಿಲ್ಲಾಡಳಿತ, ಈಗಾಗಲೇ ಇರುವ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಗ್ರಾಮೀಣ ಭಾಗದ ಮನೆಗಳಿಗೆ ನೀರು ಪೂರೈಸುವ ಕಾರ್ಯ ಮಾಡುತ್ತಿದೆ.

ಜಿಲ್ಲೆಯ 8 ತಾಲೂಕುಗಳಲ್ಲಿ ಒಟ್ಟು 57 ಗ್ರಾಮಗಳಲ್ಲಿ 70 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ತಾತ್ಕಾಲಿಕವಾಗಿ ನೀರು ಪೂರೈಸಲಾಗುತ್ತಿದೆ. ಬ್ಯಾಡಗಿ ತಾಲೂಕಿನ ರಾಮಗೊಂಡನಹಳ್ಳಿ, ಗುಂಡೆನಹಳ್ಳಿ, ಶಿವಪುರ, ಅರಬಗೊಂಡ, ಹಾನಗಲ್ಲ ತಾಲೂಕಿನ ಹುಲುಗಿನಕೊಪ್ಪ, ಶಂಕರಿಕೊಪ್ಪ, ಗಿರಿಸಿನಕೊಪ್ಪ, ಗುರುರಾಯಪಟ್ಟಣ, ಗೊಂದಿ, ಹಿರೇಕೌಂಸಿ, ನರೇಗಲ್, ಹೊಸಳ್ಳಿ, ಹೊಂಕಣ, ಬೊಬ್ಬನಹಳ್ಳಿ, ಹಾವೇರಿ ತಾಲೂಕಿನ ಕುಳೇನೂರು, ಶಿಗ್ಗಾಂವಿ ತಾಳೂಕಿನ ಗುಡ್ಡದಚನ್ನಾಪೂರ, ಕಮಣಹಳ್ಳಿ, ಎನ್.ಎಂ.ತಡಸ, ಹಿರೇಮಲ್ಲೂರ ಪ್ಲಾಟ್, ಹೊಟ್ಟೂರ, ಸವಣೂರು ತಾಲೂಕಿನ ಮಂತ್ರೊಡಿ, ಹೊಸನೀರಲಗಿ, ಹಿರೇಕೆರೂರ ತಾಲೂಕಿನ ಡಮ್ಮಳ್ಳಿ, ಮಡ್ಲೂರ, ಚಿಕ್ಕೇರೂರ, ಜಾವಳ್ಳಿ, ಶ್ರೀರಾಮನಕೊಪ್ಪ, ರಟ್ಟೀಹಳ್ಳಿ ತಾಳೂಕಿನ ಕಡೂರ, ರಾಮತೀರ್ಥ, ಹಿರೇಮೊರಬ, ಇಂಗಳಗೊಂದಿ, ಹೊಸಳ್ಳಿ, ನಾಗವಂದ, ತಿಮಲಾಪೂರ ಗ್ರಾಮದಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ.ಆರ್‌ಒ ಪ್ಲಾಂಟ್‌ಗಳೂ ಬಂದ್‌: ಜಿಲ್ಲೆಯಲ್ಲಿ ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೈಗೊಂಡ ಸಮೀಕ್ಷೆ ವೇಳೆ ಕಳೆದ ವರ್ಷದ ಈ ದಿನಗಳಿಗೆ ಹೋಲಿಸಿದರೆ ಅಂತರ್ಜಲಮಟ್ಟ 20 ಅಡಿಗೂ ಹೆಚ್ಚು ಕುಸಿದಿದೆ. ಜತೆಗೆ, ಜಿಲ್ಲೆಯಲ್ಲಿ ನದಿಗಳು ಬತ್ತಿ ಬರಿದಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಎದುರಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಹಲವು ಘಟಕಗಳು ಬಂದ್‌ ಆಗಿವೆ. ಇದರಿಂದ ಗಡಸು ನೀರೇ ಕೆಲವು ಗ್ರಾಮಗಳಿಗೆ ಗತಿಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆಯಾಗದೇ ಹೋದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಗೋಚರಿಸುತ್ತಿದೆ. ಶೇ.56.44ರಷ್ಟು ಮಳೆ ಕೊರತೆ: ಜಿಲ್ಲೆಯಲ್ಲಿ ಪ್ರಸಕ್ತ ಮೇ 1ರಿಂದ 11ರ ವರೆಗೆ 20.20 ಮಿಮೀ ವಾಡಿಕೆ ಮಳೆ ಇದ್ದು, ಈವರೆಗೆ ಕೇವಲ 8.80 ಮಿಮೀ ಮಳೆಯಾಗಿ ಶೇ.56.44ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ 11.80 ಮೀಮೀ ವಾಡಿಕೆ ಮಳೆಗೆ ಕೇವಲ 0.94 ಮೀ.ಮೀ ಮಳೆಯಾಗಿದೆ. ಹಾನಗಲ್ಲ ತಾಲೂಕಿನಲ್ಲಿ 10.30 ಮಿಮೀ ವಾಡಿಕೆ ಮಳೆಗೆ ಕೇವಲ 5.65 ಮಿಮೀ ಮಳೆಯಾಗಿದೆ. ಹಾವೇರಿ ತಾಲೂಕಿನಲ್ಲಿ 11.20 ಮಿಮೀ ಮಳೆಗೆ 9.33 ಮಿಮೀ ಮಳೆಯಾಗಿದೆ. ಹಿರೇಕೆರೂರಿನಲ್ಲಿ 10.40 ಮಿಮೀ ಮಳೆಗೆ 5.84 ಮಿಮೀ ಮಳೆಯಾಗಿದೆ. ಸವಣೂರು ತಾಲೂಕಿನಲ್ಲಿ 10.90 ಮಿಮೀ ಮಳೆಗೆ 6.91 ಮಿಮೀ ಮಳೆ ಸುರಿದಿದೆ. ರಟ್ಟೀಹಳ್ಳಿ ತಾಲೂಕಿನಲ್ಲಿ 10.50 ಮಿಮೀ ಮಳೆಗೆ 9.97 ಮಿಮೀ ಮಳೆಯಾಗಿದೆ. ಬ್ಯಾಡಗಿ ತಾಲೂಕಿನಲ್ಲಿ ಮಾತ್ರ ವಾಡಿಕೆ ಮಳೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕುರಿತು ಸಹಾಯವಾಣಿ ಕೂಡ ಆರಂಭಿಸಲಾಗಿದ್ದು, ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ನೀರಿನ ಸಮಸ್ಯೆ ಉದ್ಬವಿಸಬಹುದಾದ 286 ಗ್ರಾಮಗಳನ್ನು ಗುರುತಿಸಲಾಗಿದ್ದು, ಪ್ರಸ್ತುತ 57 ಗ್ರಾಮಗಳಿಗೆ 70 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನೀರು ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರ್ಪಕವಾಗಿ ಬಸ್ ಸಂಚಾರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಸೇವೆ ಸರ್ಕಾರದ ಗುರಿ