ಗೃಹಲಕ್ಷ್ಮಿಯರ ಅಲೆದಾಟ ಇನ್ನೂ ನಿಂತಿಲ್ಲ!

KannadaprabhaNewsNetwork | Published : Oct 20, 2023 1:00 AM

ಸಾರಾಂಶ

ಮಹಿಳಾ ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರದ ಮಹತ್ವದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕು ಎರಡು ತಿಂಗಳು ಕಳೆದರೂ ಇನ್ನೂ ಜಿಲ್ಲೆಯ ಸಾವಿರಾರು ಮಹಿಳೆಯರಿಗೆ ಯೋಜನೆಯ ಲಾಭ ದಕ್ಕಿಲ್ಲ! ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಸೀಡ್ ಆಗದಿರುವುದು ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಮಹಿಳೆಯರಿಗೆ ಗೃಹಲಕ್ಷ್ಮಿಯ ಹಣ ಕೈ ಸೇರಿಲ್ಲ. ಹೀಗಾಗಿ ನಿತ್ಯ ನೂರಾರು ಮಹಿಳೆಯರು ನಗರದ ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಕೇಂದ್ರಗಳು ಹಾಗೂ ಬ್ಯಾಂಕುಗಳಿಗೆ ಅಲೆದಾಡುವಂತಾಗಿದೆ.

ಕೆ.ಎಂ. ಮಂಜುನಾಥ್

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮಹಿಳಾ ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರದ ಮಹತ್ವದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕು ಎರಡು ತಿಂಗಳು ಕಳೆದರೂ ಇನ್ನೂ ಜಿಲ್ಲೆಯ ಸಾವಿರಾರು ಮಹಿಳೆಯರಿಗೆ ಯೋಜನೆಯ ಲಾಭ ದಕ್ಕಿಲ್ಲ!

ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಸೀಡ್ ಆಗದಿರುವುದು ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಮಹಿಳೆಯರಿಗೆ ಗೃಹಲಕ್ಷ್ಮಿಯ ಹಣ ಕೈ ಸೇರಿಲ್ಲ. ಹೀಗಾಗಿ ನಿತ್ಯ ನೂರಾರು ಮಹಿಳೆಯರು ನಗರದ ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಕೇಂದ್ರಗಳು ಹಾಗೂ ಬ್ಯಾಂಕುಗಳಿಗೆ ಅಲೆದಾಡುವಂತಾಗಿದೆ.

44 ಸಾವಿರ ಜನರಿಗೆ ಹಣ ಬಂದಿಲ್ಲ:

ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ವಿತರಿಸುವ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ಖಾತೆಗೆ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿತಲ್ಲದೆ, ಈ ಯೋಜನೆಗೆ ಜು. 19ರಿಂದಲೇ ಅರ್ಜಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಶುರುಮಾಡಲಾಯಿತು.

ಜಿಲ್ಲೆಯಲ್ಲಿ ಅಂತ್ಯೋದಯ, ಬಿಪಿಎಲ್, ಎಪಿಎಲ್ ಸೇರಿದಂತೆ ಒಟ್ಟು 3,45,125 ಕಾರ್ಡ್‌ಗಳಿದ್ದವು. ಈ ಪೈಕಿ ಅಂತ್ಯೋದಯ 26054, ಎಪಿಎಲ್ 44786, ಬಿಪಿಎಲ್ 274285 ಕಾರ್ಡ್‌ದಾರರಿದ್ದರು. ಪರಿಷ್ಕೃತಗೊಂಡ ಬಳಿಕ ಇವುಗಳ ಸಂಖ್ಯೆ 3,01,080ಕ್ಕೆ ಕುಸಿಯಿತು. ಪರಿಷ್ಕೃತ ಕಾರ್ಡ್‌ಗಳ ಪೈಕಿ 2.64 ಲಕ್ಷ ಕಾರ್ಡ್‌ಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಿವೆ. ಇನ್ನು 44 ಸಾವಿರದಷ್ಟು ನೋಂದಣಿಯಾಗಬೇಕಿದೆ. ಆದರೆ, ಅನೇಕ ತಾಂತ್ರಿಕ ಕಾರಣಗಳಿಂದ ನೋಂದಣಿ ಸಾಧ್ಯವಾಗದೆ ಮಹಿಳೆಯರು ನಿತ್ಯ ಬ್ಯಾಂಕ್ ಹಾಗೂ ಇತರ ಸೇವಾ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.

ಪ್ರಮುಖ ಕಾರಣಗಳಿವು:

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಹೆಚ್ಚಿನವರು ಎಪಿಎಲ್ ಕಾರ್ಡ್‌ದಾರರಿದ್ದಾರೆ. ಕಾರ್ಡ್ ಹೊಂದಿದ ಬಳಿಕ ಬಳಕೆ ಮಾಡದ ಕಾರಣ ಭಾಗಶಃ ಕಾರ್ಡ್‌ಗಳು ನಿಷ್ಕೃಯಗೊಂಡಿವೆ. ಇವುಗಳನ್ನು ಮತ್ತೆ ಮರುನೋಂದಣಿ ಮಾಡಿಕೊಳ್ಳಬೇಕಾಗಿದೆ. ಯಜಮಾನಿಯ ಆಧಾರ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಅಥವಾ ಫಲಾನುಭವಿಯು ಇಚ್ಛಿಸುವ ಪರ್ಯಾಯ ಬ್ಯಾಂಕ್ ಖಾತೆ ವಿವರ ಸರಿಯಾಗಿ ಸಲ್ಲಿಸಲಾಗಿಲ್ಲ. ಅರ್ಜಿ ಸಲ್ಲಿಕೆ ಮುನ್ನ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ, ವಿಳಾಸ ಅಪ್‌ಡೇಟ್ ಆಗಿಲ್ಲ. ಇನ್ನು ಅನೇಕ ರೇಷನ್ ಕಾರ್ಡ್‌ಗಳಲ್ಲಿ ಯಜಮಾನಿ ಹೆಸರು ಬದಲಾಣೆಯಾಗಿಲ್ಲ. ಮತ್ತೆ ಕೆಲವರು ಆಧಾರ್‌ ಕಾರ್ಡ್ ಲಿಂಕ್ ಮಾಡಿದ ಬಳಿಕ ಅಂಚೆ ಇಲಾಖೆ ಖಾತೆಗೆ ಹಣ ಬಂದಿದೆಯೋ, ಬ್ಯಾಂಕ್ ಖಾತೆಗೆ ಹಣ ಬಂದಿದೆಯೋ ಎಂಬುದು ಸಹ ತಿಳಿಯದೆ ಒದ್ದಾಡುತ್ತಿದ್ದಾರೆ. ಖಾತೆ ಹಣ ಬಂದಿದ್ದರೂ ಸರಿಯಾಗಿ ಮಾಹಿತಿ ಇಲ್ಲದೆ ಬ್ಯಾಂಕುಗಳಿಗೆ ಬಂದು ವಿಚಾರಿಸುತ್ತಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಖಾತೆಗೆ ಹಣ ಬಂದಿಲ್ಲ ಎಂದು ಬ್ಯಾಂಕುಗಳಿಗೆ ತೆರಳಿ ವಿಚಾರಣೆ ನಡೆಸುವ ಮಹಿಳೆಯರಿಗೆ ಬ್ಯಾಂಕ್ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿದ್ದು, ಕರ್ನಾಟಕ ಒನ್ ಅಥವಾ ಗ್ರಾಮ ಒನ್‌ಗೆ ಹೋಗಿ ಎಂದು ಹೇಳುತ್ತಿದ್ದಾರೆ. ತಾಂತ್ರಿಕ ಸಮಸ್ಯೆ ನಿವಾರಣೆಯಿಂದ ಹೊರ ಬರದ ಗೃಹಲಕ್ಷ್ಮಿಯರು ನಿತ್ಯ ಬ್ಯಾಂಕ್, ಸೇವಾ ಕೇಂದ್ರಗಳಿಗೆ ಅಲೆಯುವಂತಾಗಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗದಿರುವುದಕ್ಕೆ ಅನೇಕ ತಾಂತ್ರಿಕ ಕಾರಣಗಳಿವೆ. ಸರಿಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರಿಗೆ ಸಹಾಯಕ್ಕೆಂದೇ ಕಚೇರಿಯಲ್ಲಿ ನಾಲ್ಕು ಹೆಲ್ಪ್ ಡೆಸ್ಕ್ ಆರಂಭಿಸಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಳ್ಳಾರಿ ನಗರ ಸಿಡಿಪಿಒ ನಾಗರಾಜ್ ಹೇಳುತ್ತಾರೆ. ಕಳೆದ ಹದಿನೈದು ದಿನಗಳಿಂದ ಅಲೆಯುತ್ತಿದ್ದೇವೆ. ಸೇವಾ ಕೇಂದ್ರ, ಬ್ಯಾಂಕುಗಳಲ್ಲಿ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಬ್ಯಾಂಕ್‌ನವರು ಸ್ಪಂದಿಸುತ್ತಿಲ್ಲ. ಅವರು ಹೇಳುವುದು ನಮಗೂ ಸರಿಯಾಗಿ ಅರ್ಥವಾಗುತ್ತಿಲ್ಲ ಎಂದು ಇಂದಿರಾನಗರದ ನಿವಾಸಿಗಳಾದ ಗೋವಿಂದಮ್ಮ, ರಾಮಲಕ್ಷ್ಮಿ ಹಾಗೂ ಮಾಳಮ್ಮ ಹೇಳುತ್ತಾರೆ.

Share this article