ಜಿ.ಎಸ್.ಪಾಟೀಲರದ್ದು ದೇಶ ದ್ರೋಹದ ಹೇಳಿಕೆ: ಬಿಜೆಪಿ ಖಂಡನೆ

KannadaprabhaNewsNetwork | Published : Aug 29, 2024 12:48 AM

ಸಾರಾಂಶ

ಇಂದು ಮತ್ತೆ ಸಿದ್ದರಾಮಯ್ಯ ಹೆಸರಲ್ಲಿ ಇದನ್ನೇ ಮಾಡಲು ಹೊರಟಿದೆ

ಗದಗ: ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಬಾಂಗ್ಲಾ ಮಾದರಿಯ ಧಂಗೆಯ ಮೂಲಕ ಪ್ರಧಾನಿ ಮನೆಗೆ ಜನ ನುಗ್ಗುತ್ತಾರೆ ಎನ್ನುವ ರೋಣ ಶಾಸಕ ಜಿ.ಎಸ್‌. ಪಾಟೀಲ ಅವರದ್ದು ದೇಶದ್ರೋಹಿ ಹೇಳಿಕೆಯಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಹಾಗೂ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪುರ ಅವರು ಪ್ರತ್ಯೇಕ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ಏಳುವರೆ ದಶಕದಲ್ಲಿ ಆರು ದಶಕಗಳ ಕಾಲ ಕಾಂಗ್ರೆಸ್‌ ದೇಶದಲ್ಲಿ ಆಡಳಿತ ನಡೆಸಿದ್ದು, ಅಧಿಕಾರ ಹೋಗುತ್ತದೆ ಎಂದಾಗಲೇ ಅರಾಜಕತೆ ಸೃಷ್ಟಿಗೆ ಪ್ರಚೋದನೆ ನೀಡುತ್ತಲೇ ಬಂದಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಇನ್ನೇನು ಜೈಲು ಸೇರುವುದು ಖಚಿತವಾದಾಗ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಅಪಾರ ಪ್ರಮಾಣದ ಕೊಲೆ ಸುಲಿಗೆಗೆ ಕಾರಣವಾದ ಕಾಂಗ್ರೆಸ್‌, ಇಂದು ಮತ್ತೆ ಸಿದ್ದರಾಮಯ್ಯ ಹೆಸರಲ್ಲಿ ಇದನ್ನೇ ಮಾಡಲು ಹೊರಟಿದೆ ಎಂದಿದ್ದಾರೆ.

ಇದೊಂದು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೃತ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೇವಲ ಭ್ರಷ್ಟಾಚಾರ ಮಾತ್ರ ಮಾಡಿದ್ದು, ಅದು ಜನರಿಗೆ ಗೊತ್ತಾಗಬಾರದು ಎನ್ನುವ ಕಾರಣಕ್ಕಾಗಿ ಈ ರೀತಿಯ ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಜನತೆಗೆ ಆ ಯೋಜನೆ ಈ ಯೋಜನೆ ಕೊಡುತ್ತೇವೆಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಇವರು ಅಧಿಕಾರ ಹಿಡಿದ ನಂತರ ಕೇವಲ ರಾಜ್ಯದಲ್ಲಿ ಅಶಾಂತಿ ಮೂಡಿಸಿ ಗೊಂದಲ, ಗಲಭೆ ಸೃಷ್ಟಿಸುವ ಕಾರ್ಯ ಮಾಡುತ್ತಿದೆ ಎಂದಿದ್ದಾರೆ.

ರಾಜ್ಯಪಾಲರ ಬಳಿ ಪ್ರಕರಣ ಹೋಗಿದೆ, ಅದಕ್ಕೆ ಕಾನೂನು ರೀತಿ ಕ್ರಮ ಕೈಗೊಂಡಿದ್ದಾರೆ. ಅದರಲ್ಲಿ ತಪ್ಪು ಕಂಡು ಬಂದರೆ ಕಾನೂನು ಹೋರಾಟ ಮಾಡುವದನ್ನು ಬಿಟ್ಟು ರಾಜ್ಯಪಾಲ, ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ ನಡೆ ಅಸಂವಿಧಾನತ್ಮಕವಾಗಿದೆ. ಹಿರಿಯ ಶಾಸಕ ಜಿ.ಎಸ್‌. ಪಾಟೀಲ ಗಜೇಂದ್ರಗಡದ ಅಹಿಂದ ವೇದಿಕೆಯಲ್ಲಿ ರಾಜ್ಯಪಾಲರು ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವ ನಿರ್ಧಾರ ಕೈಗೊಂಡರೇ ನಾವೆಲ್ಲ ಮನೆಗೂ ನುಗ್ಗುತ್ತೇವೆ ಎಂದು ಬೆದರಿಕೆ ಹಾಕುವ ಮೂಲಕ ವಿವಿಧ ಜಾತಿ ಜನಾಂಗಗಳ ನಡುವೆ, ರಾಜಕೀಯ ಪಕ್ಷಗಳ ಕಾರ್ಯಕರ್ತರ ಮಧ್ಯ ಪ್ರಚೋದನೆ ನೀಡಿದ್ದು ಅಕ್ಷಮ್ಯ ಅಪರಾಧ, ಕೂಡಲೇ ಜಿ.ಎಸ್.ಪಾಟೀಲ ಕ್ಷಮೆ ಕೇಳಬೇಕು ಎಂದು ರಾಜು ಕುರುಡಗಿ, ಲಿಂಗರಾಜ ಪಾಟೀಲ ಮಲ್ಲಾಪೂರ ಒತ್ತಾಯಿಸಿದ್ದಾರೆ.

Share this article