ಸಣ್ಣ ವರ್ತಕರಿಗೆ ಜಿಎಸ್ಟಿ ನೋಟಿಸ್‌ಗಳ ವಿರುದ್ಧ ಎಸ್‌ಬಿಐ ವಾರ್ನಿಂಗ್‌!

KannadaprabhaNewsNetwork |  
Published : Jul 23, 2025, 12:31 AM ISTUpdated : Jul 23, 2025, 08:05 AM IST
sbi latest fd rates

ಸಾರಾಂಶ

ಯುಪಿಐ ವಹಿವಾಟಿನ ಮೊತ್ತ ಆಧರಿಸಿ ಕರ್ನಾಟಕದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು, ಸಾವಿರಾರು ಸಣ್ಣ ವರ್ತಕರಿಗೆ ಜಿಎಸ್ಟಿ ನೋಟಿಸ್‌ ಜಾರಿ ಮಾಡಿರುವ ಹೊತ್ತಿನಲ್ಲೇ ಎಸ್‌ಬಿಐ ರಿಸರ್ಚ್‌’ ತನ್ನ ವರದಿಯಲ್ಲಿ ಎಚ್ಚರಿಸಿದೆ.

 ನವದೆಹಲಿ: ಯುಪಿಐ ವಹಿವಾಟಿನ ಮೊತ್ತ ಆಧರಿಸಿ ಕರ್ನಾಟಕದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು, ಸಾವಿರಾರು ಸಣ್ಣ ವರ್ತಕರಿಗೆ ಜಿಎಸ್ಟಿ ನೋಟಿಸ್‌ ಜಾರಿ ಮಾಡಿರುವ ಹೊತ್ತಿನಲ್ಲೇ, ಇಂಥ ತೀವ್ರತರ ನಿಷ್ಕರ್ಷಾ ಕ್ರಮವು ಆರ್ಥಿಕತೆಯು ಮತ್ತೆ ನಗದು ವಹಿವಾಟಿಗೆ ಮುಖಮಾಡಲು ಕಾರಣವಾಗಬಹುದು ಎಂದು ‘ಎಸ್‌ಬಿಐ ರಿಸರ್ಚ್‌’ ತನ್ನ ವರದಿಯಲ್ಲಿ ಎಚ್ಚರಿಸಿದೆ.

ಜಿಎಸ್ಟಿ ನೋಟಿಸ್‌ ವಿರೋಧಿಸಿ ಕರ್ನಾಟಕದಲ್ಲಿ ಸಣ್ಣ ವ್ಯಾಪಾರಿಗಳು ಯುಪಿಐ ಮೂಲಕ ಹಣ ಸ್ವೀಕರಿಸಲು ನಿರಾಕರಿಸುತ್ತಿರುವ ಹೊತ್ತಿನಲ್ಲೇ ‘ಎಸ್‌ಬಿಐ ರಿಸರ್ಚ್‌’ ವರದಿಯೊಂದನ್ನು ಬಿಡುಗಡೆ ಮಾಡಿದ. ವರದಿಯಲ್ಲಿ ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಯಮಗಳ ಜಾರಿ ವೇಳೆ ಸಮತೋಲನದ ಅಗತ್ಯವಿದೆ. ಜಿಎಸ್‌ಟಿ ಜಾರಿಯನ್ನು ಸೂಕ್ಷ್ಮತೆಯೊಂದಿಗೆ ಸಮತೋಲನಗೊಳಿಸಬೇಕು. ಇಲ್ಲದಿದ್ದರೆ, ಸಣ್ಣ ವ್ಯಾಪಾರಿಗಳು ಮತ್ತೆ ನಗದು ಆಧರಿತ ಆರ್ಥಿಕತೆಗೆ ಹಿಂತಿರುಗುವ ಆತಂಕವಿದೆ’ ಎಂದು ಎಚ್ಚರಿಸಿದೆ.

ಜೊತೆಗೆ, ‘ಪರೋಕ್ಷ ತೆರಿಗೆ ವ್ಯವಸ್ಥೆಯು ಹೆಚ್ಚಿನ ಹೊಣೆಗಾರಿಕೆ ಮತ್ತು ಆದಾಯ ಉತ್ಪಾದನೆಗೆ ಅಡಿಪಾಯ ಹಾಕಿರುವ ಹೊತ್ತಿನಲ್ಲಿ, ಸಣ್ಣ ವರ್ತಕರನ್ನು ಸಬಲೀಕರಣಗೊಳಿಸಿದರೆ ಮಾತ್ರ ಇದು ದೀರ್ಘಾವಧಿಯಲ್ಲಿ ಯಶಸ್ವಿಯಾಗುತ್ತದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಆಗಿದ್ದೇನು?:

ಜಿಎಸ್‌ಟಿ ಕಾನೂನಿನ ಪ್ರಕಾರ, ಸರಕು ವ್ಯಾಪಾರಿಗಳ ವಾರ್ಷಿಕ ಆದಾಯ 40 ಲಕ್ಷ ರು.ಗಿಂತ ಹೆಚ್ಚು ಮತ್ತು ಸೇವೆಗಳನ್ನು ಒದಗಿಸುವವರದ್ದು 20 ಲಕ್ಷ ರು.ಗಿಂತ ಅಧಿಕವಿದ್ದರೆ ಅಂತವರು ತೆರಿಗೆ ವ್ಯಾಪ್ತಿಗೆ ಒಳಪಡುತ್ತಾರೆ. ಹೀಗಿರುವಾಗ, ಕರ್ನಾಟಕದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್ಟಿಯಲ್ಲಿ ನೋಂದಣಿ ಮಾಡಿಕೊಳ್ಳದ, ಆದರೆ ಜಿಎಸ್ಟಿ ತೆರಿಗೆ ವ್ಯಾಪ್ತಿಗೆ ಒಳಪಡಬಹುದಾದ 14,000 ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು. ಈ ವ್ಯಾಪಾರಿಗಳ ಯುಪಿಐ ವಹಿವಾಟಿನ ಆಧಾರದಲ್ಲಿ ನೋಟಿಸ್‌ ನೀಡಲಾಗಿತ್ತು. ಕೆಲವರಿಗೆ, 2021-22ರ ತೆರಿಗೆ ಬಾಕಿಯನ್ನೂ ಪಾವತಿಸುವಂತೆ ಸೂಚಿಸಲಾಗಿತ್ತು.

ಇದರ ಬೆನ್ನಲ್ಲೇ ಯುಪಿಐ ನಿರಾಕರಿಸಿ ನಗದಿನತ್ತ ತಿರುಗಿದ ಸಣ್ಣ ವ್ಯಾಪಾರಿಗಳು, ಜಿಎಸ್‌ಟಿ ಹೇರಿಕೆ ವಿರೋಧಿಸಿ ಜು.23ರಿಂದ ಕರ್ನಾಟಕದಲ್ಲಿ 3 ದಿನಗಳ ಪ್ರತಿಭಟನೆ ಆಯೋಜಿಸಿದ್ದರು. ಇದರ ಮುನ್ನಾದಿನವೇ ಈ ವರದಿ ಹೊರಬಿದ್ದಿರುವುದು ಗಮನಾರ್ಹ.

ಎಸ್‌ಬಿಐ ವರದಿ ಹೇಳಿದ್ದೇನು?

- ಜಿಎಸ್ಟಿ ನಿಯಮಗಳ ಜಾರಿ ವೇಳೆ ಸಮತೋಲಿತ ತೆರಿಗೆ ಅಗತ್ಯ

- ಯುಪಿಐ ವಹಿವಾಟಿನ ತೀವ್ರತರದ ನಿಷ್ಕರ್ಷೆಯಿಂದ ಅಪಾಯ

- ಇದರಿಂದ ಆರ್ಥಿಕತೆ ನಗದಿನ ಕಡೆ ಹೋಗುವ ಅಪಾಯವಿದೆ

- ಕರ್ನಾಟಕದಲ್ಲಿ ಜಿಎಸ್ಟಿ ಗದ್ದಲದ ನಡುವೆಯೇ ವರದಿ ಪ್ರಕಟ

PREV
Read more Articles on

Latest Stories

ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ
ಡಯಾಬಿಟೀಸ್ ಬಾಧಿತರಿಗಾಗಿ ಹುಟ್ಟಿದ ನಂದಿನಿ ಸ್ವಾದ್‌ ರೊಟ್ಟಿ
ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್‌ನಲ್ಲಿ ಮೆಟ್ರೋ ಸಂಚಾರ ಶುರು