ರಾಮನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದಿನ ಬಳಕೆ ವಸ್ತುಗಳಿಗೂ ಜಿಎಸ್‌ಟಿ, ರೈತ ಬಳಸುವ ಕೀಟನಾಶಕ, ಗೊಬ್ಬರದ ಮೇಲೂ ಜಿಎಸ್‌ಟಿ ವಿಧಿಸಲಾಗುತ್ತಿದೆ. ರೈತರ ಮಕ್ಕಳೆನ್ನುವವರು ನಿಮ್ಮಪರ ಹೋರಾಟ ಮಾಡದೆ ಅವರ ಜೊತೆ ಶಾಮೀಲಾಗುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಜೆಡಿಎಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಗ್ರಾಪಂ ಆವರಣದಲ್ಲಿ ನಾಲ್ಕು ಗ್ರಾಪಂಗಳ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಹಿತಕಾಯುವ ಕೆಲಸ ಮಾಡುತ್ತಿದೆ. ಇವರಿಗೆ ಸಾಮಾನ್ಯ ಜನರ ಬದುಕು, ಬವಣೆ ಕುರಿತು ಕಾಳಜಿಯೇ ಇಲ್ಲ. ರೈತರು ಎಂದೂ ತೆರಿಗೆ ಕಟ್ಟಿದವರಲ್ಲ. ಆದರೆ, ಕೇಂದ್ರ ಸರ್ಕಾರ ಈಗ ಕಟ್ಟುವ ಪರಿಸ್ಥಿತಿ ತಂದಿದೆ. ಆದರೆ ಇದನ್ನು ಪ್ರಶ್ನಿಸಿ ಹೋರಾಟ ನಡೆಸುವ ಮನೋಭಾವ ಯಾರಿಗೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನುಡಿದಂತೆ ನಡೆದ ಕಾಂಗ್ರೆಸ್:
ಬಡವರು ಕೆಳ ಹಂತದಿಂದ ಮೇಲೆಕ್ಕೇರಿದರೆ ಮಾತ್ರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂಬುದು ಕಾಂಗ್ರೆಸ್‌ಗೆ ಗೊತ್ತಿದೆ. ಅದಕ್ಕಾಗಿಯೇ ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಜನರ ಬವಣೆ ಪರಿಹರಿಸುವ ಜವಾಬ್ದಾರಿ ಇರುವ ನಾವು ನಿಮ್ಮ ಕಷ್ಟಗಳನ್ನು ಆಲಿಸಿ ನುಡಿದಂತೆ ಕೆಲಸ ಮಾಡುತಿದ್ದೇವೆ ಎಂದರು.ಈ ಭಾಗದ ಅಂತರ್ಜಲ ವೃದ್ಧಿಗಾಗಿ ಕಾವೇರಿಯಿಂದ ನೀರು ತರುವ ಬಗ್ಗೆ ಚಿಂತನೆ ನಡೆಸಿದ್ದು ನಾವು. ಆದರೆ ಬೇರೆಯವರು ನಮ್ಮದು ಎನ್ನುತ್ತಾರೆ. ಜಿಲ್ಲೆಯ ಎಲ್ಲ ರೈತರ ಭೂಮಿಗಳ ದುರಸ್ತಿ ನಡೆಯುತ್ತಿದೆ. 9 ಎಕರೆ ಬಡವರಿಗೆ ನಿವೇಶನ ನೀಡಲು ಗುರುತಿಸಲಾಗಿದೆ. ಪಂಚಾಯಿತಿಗೆ 50 ಮನೆ ಮಂಜೂರು ಮಾಡಿಸಿದ್ದೇವೆ. ವಿವಿಧ ಯೋಜನೆಗಳ ಮೂಲಕ ಪ್ರತಿಕುಟುಂಬವನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ್ದೇವೆ ಎಂದು ಹೇಳಿದರು.
ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಿ: ದೊಡ್ಡಗಂಗವಾಡಿ, ಶ್ಯಾನುಭೋಗನಹಳ್ಳಿ, ಕೂಟಗಲ್, ಲಕ್ಷ್ಮೀಪುರ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದ್ದಾರೆ. ಇ-ಖಾತೆ, ದುರಸ್ತಿ, ಸಾಗುವಳಿ ಚೀಟಿ, ಕೆರೆ ತುಂಬಿಸಲ, ಮನೆ, ಆಸ್ತಿ ತಿದ್ದುಪಡಿ, ಗೃಹ ಲಕ್ಷ್ಮಿ ಹಣ ಬಂದಿಲ್ಲದ ಬಗ್ಗೆ ಅರ್ಜಿ ಬಂದಿವೆ. ಈ ಸಮಸ್ಯೆಗಳು ಮೊದಲು ಅಧಿಕಾರಿಗಳಿಗೆ ಅರ್ಥವಾಗಬೇಕು. ಗ್ರಾಮ ಪಂಚಾಯಿತಿಗೆ ಕೊಟ್ಟಿರುವ ಅಧಿಕಾರ ಬಳಸಿಕೊಂಡು ಸಮಸ್ಯೆಗಳನ್ನು ತಾಲೂಕು ಮಟ್ಟದಯೇ ಬಗೆಹರಿಸಲು ಸಾಧ್ಯವಿದ್ದು, ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.ಶಾಸಕ ಬಾಲಕೃಷ್ಣ ಮಾತನಾಡಿ, ಕೂಟಗಲ್ ಗ್ರಾಪಂಗೆ 50 ಮನೆ ಮಂಜೂರು ಮಾಡಲಾಗಿದ್ದು, ಜನವರಿಯಲ್ಲಿ ನೀಡಲಾಗುವುದು. ಅರೆಹಳ್ಳಿಯಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡುತ್ತೇವೆ. ಕೂಟಗಲ್ ಹೈಮಾಸ್ಟ್, ಅರೆಹಳ್ಳಿ ಪಶು ಆಸ್ಪತ್ರೆ ಮಂಜೂರು ಮಾಡಲಾಗಿದೆ. ಮಾಗಡಿಯಿಂದ ಶಾನುಬೋಗನಹಳ್ಳಿ ಕಣ್ವ ಚನ್ನಪಟ್ಟಣ ರಸ್ತೆ ರಾಜ್ಯ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಿದ್ದೇವೆ ಎಂದರು.
ಕಾಂಗ್ರೆಸ್‌ಗೆ ಮತ ಹಾಕದವರಿಗೂ 5 ಕೇಜಿ ಅಕ್ಕಿ, 5 ಕೇಜಿ ಅಕ್ಕಿಗೆ ಹಣ, ಉಚಿತ ವಿದ್ಯುತ್, ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಕೆಲಸ ಮಾಡುವವರಿಗೆ ಮತ ಕೊಡಬೇಕು. ಬೊಗಳೆ ಬಿಡುವವರನ್ನು ತಿರಸ್ಕಾರ ಮಾಡುವಂತೆ ತಿಳಿಸಿದರು.ನೀವು ಹೇಳುವ ಎಲ್ಲ ಕೆಲಸ ಮಾಡುತ್ತೇವೆ. ಲೀಡ್ ಕೊಟ್ಟರೆ ಗಲಾಟೆ ಮಾಡಿ ಸಂಸದರಿಂದ ಕೆಲಸ ಮಾಡಿಸುತ್ತೇವೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಆಶ್ರಯ ಮನೆ ಕೊಡಲು ಸಂಸದರ ಮೂಲಕ ವಸತಿ ಸಚಿವ ಜಮೀರ್ ಅವರೊಂದಿಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಲಾಯಿತು. ಸಭೆಯಲ್ಲಿ ಶಾಸಕ ಬಮೂಲ್ ನಿರ್ದೇಶಕ ನಾಗರಾಜು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎರೇಹಳ್ಳಿ ಮಂಜು, ತಾಪಂ ಮಾಜಿ ಅಧ್ಯಕ್ಷರಾದ ಗಾಣಕಲ್ ನಟರಾಜು, ಡಿ.ಎಂ.ಮಹ ದೇವಯ್ಯ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಗ್ರಾಪಂ ಅಧ್ಯಕ್ಷೆ ಸವಿತಾ, ಸದಸ್ಯೆ ಭಾಗ್ಯಮ್ಮ, ನಂದೀಶ್, ತಹಸೀಲ್ದಾರ್ ತೇಜಸ್ವಿನಿ, ಇಒ ಪ್ರದೀಪ್, ಪಿಡಿಒ ಸೋಮಶೇಖರ್ ಇದ್ದರು.ಪೊಟೋ೨೯ಸಿಪಿಟಿ೪: ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದರು.