ಕನ್ನಡಪ್ರಭ ವಾರ್ತೆ ಇಂಡಿ
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕೇಳಿದ ಚುಕ್ಕೆಗುರುತ್ತಿಲ್ಲದ ಪ್ರಶ್ನೆಗೆ, ಇಂಡಿ ಪಟ್ಟಣದಲ್ಲಿ ಜಿಟಿಟಿಸಿ ಕಾಲೇಜು ಕಟ್ಟಡ ಕಾಮಗಾರಿ ಕೈಗೊಳ್ಳಲು ಯಾವಾಗ ಟೆಂಡರ್ ಕರೆಯಲಾಗುವುದು, ಯಾವ ಕಾಲಮಿತಿಯೊಳಗೆ ಕಾಮಗಾರಿ ಸಂಪೂರ್ಣಗೊಳಿಸಲಾಗುವುದು. ಯಾವ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿ, ಕಾಲೇಜು ಪ್ರಾರಂಭಿಸಲಾಗುವುದು. ಅದಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸರ್ಕಾರದ ಗಮನ ಸೆಳೆದರು. ಈ ವೇಳೆ ಉತ್ತರಿಸಿದ ಸಚಿವರು, 2027-28ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಬಾಲ ಭವನ ನಿರ್ಮಾಣ:ಇಂಡಿ ನಗರದಲ್ಲಿ ಬಾಲ ಭವನ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ಆಸಕ್ತಿ ಹೊಂದಿದ್ದು, ಇಂಡಿ ಪುರಸಭೆಯಿಂದ ನಿವೇಶನ ಹಂಚಿಕೆಯಾದ ನಂತರ ಬಾಲಭವನ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದರು.
ಪ್ರಶ್ನೋತ್ತರ ಕಲಾಪದ ವೇಳೆ ವಿಜಯಪುರ ಜಿಲ್ಲೆಯ ಇಂಡಿ ನಗರವು ಸುಮಾರು 50 ಸಾವಿರಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ನಗರಸಭೆಯಾಗಿ ಮೇಲ್ದರ್ಜೆಗೇರಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ. ಇಂಡಿ ನಗರದಲ್ಲಿ 6 ರಿಂದ 14 ವರ್ಷಗಳ ಮಕ್ಕಳ ಕ್ರಿಯಾತ್ಮಕ ಹಾಗೂ ಸೃಜಾನಾತ್ಮಕ ಚಟುವಟಿಕೆಗಳಿಗೆ ಹೊರಾಂಗಣ ಮತ್ತು ಒಳಾಂಗಣ ಆಟಗಳಿಗೆ ಸೂಕ್ತ ವ್ಯವಸ್ಥೆಗಳಿಲ್ಲದೇ ತೀವ್ರ ತೊಂದರೆಯಾಗಿದೆ ಎಂಬುದಾಗಿ ಶಾಸಕ ಪಾಟೀಲರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂಡಿ ತಾಲೂಕಿನಲ್ಲಿ ಬಾಲ ಭವನ ಕಟ್ಟಡ ನಿರ್ಮಾಣ ಮಾಡಲು ನಿವೇಶನ ಲಭ್ಯವಿರದ ಕಾರಣ ಪುರಸಭೆ ಇಂಡಿ ಕಚೇರಿಯಿಂದ ಸೂಕ್ತ ನಿವೇಶನ ಒದಗಿಸಲು ಕ್ರಮವಹಿಸಲಾಗಿದೆ ಎಂದು ಉತ್ತರಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಗ್ರಾಮ ಠಾಣಾಗಳಲ್ಲಿ ಭೂ-ಪರಿವರ್ತನೆಯಾಗದ ಮತ್ತು ಕಂದಾಯ ನಿವೇಶನಗಳಲ್ಲಿ ಕಟ್ಟಿಕೊಂಡಿರುವ ಮನೆ ಮತ್ತು ಖಾಲಿ ನಿವೇಶನಗಳಿಗೆ ಎ ಖಾತಾ ಮಾದರಿಯ ಇ-ಸ್ವತ್ತು ನೀಡಿ ಸಕ್ರಮಗೊಳಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ಕುರಿತು ಸರ್ಕಾರದ ಸ್ಪಷ್ಟ ನಿಲುವು ಏನೆಂದು ಶಾಸಕರು ಪ್ರಶ್ನಿಸಿದರು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿ, ಗ್ರಾಮೀಣ ಪ್ರದೇಶದಲ್ಲಿ ಭೂ ಪರಿವರ್ತನೆಯಾಗದ ಮತ್ತು ಕಂದಾಯ ನಿವೇಶನಗಳಲ್ಲಿ ನಿರ್ಮಿಸಿಕೊಂಡಿರುವ ಕಟ್ಟಡ ಮತ್ತು ನಿವೇಶನಗಳಿಗೆ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ರ ನಿಯಮ 8ರಲ್ಲಿ ಭೂ-ಪರಿವರ್ತನೆಯಾಗದ ಮತ್ತು ಕಂದಾಯ ನಿವೇಶನಗಳಲ್ಲಿ ಕಟ್ಟಿಕೊಂಡಿರುವ ಮನೆ ಮತ್ತು ಖಾಲಿ ನಿವೇಶನಗಳಿಗೆ ಖಾತಾ ನೀಡುವ ಬಗ್ಗೆ ವಿವರಿಸಲಾಗಿರುತ್ತದೆ. ಇದಕ್ಕಾಗಿ ಇ-ಸ್ವತ್ತು ತಂತ್ರಾಂಶವನ್ನು ರೂಪಿಸಲಾಗಿದ್ದು ಸಾರ್ವಜನಿಕರು ಸೇವೆಯನ್ನು ಬಳಸಿಕೊಳ್ಳ ಬಹುದಾಗಿರುತ್ತದೆ ಎಂದು ಹೇಳಿದರು.
ಗ್ರಾಮೀಣ ರಸ್ತೆ ಸುಧಾರಣೆ:ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮೀಣ ಹಾಗೂ ಜಿಪಂ ರಸ್ತೆಗಳು ಅತಿವೃಷ್ಟಿಯಿಂದಾಗಿ ಹಲವಾರು ವರ್ಷಗಳಿಂದ ದುರಸ್ತಿ ಕಾಣದೇ ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕ ವಾಹನಗಳ ಸುಗುಮ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರಸ್ತೆಗಳ ಸುಧಾರಣೆಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಶಾಸಕ ಯಶವಂತರಾಯಗೌಡ ಪಾಟೀಲರ ಪ್ರಶ್ನೆಗೆ ಸಚಿವ ಪ್ರಿಯಾಂಕ ಖರ್ಗೆ ಉತ್ತರಿಸಿ, ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ಕೆಲವೊಂದು ರಸ್ತೆಗಳಿಗೆ ಹಾನಿಯಾಗಿರುತ್ತದೆ. ಪ್ರಗತಿಪಥ ಯೋಜನೆಯಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 30.00 ಕಿ.ಮೀ ಉದ್ಯದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ₹21.87 ಕೋಟಿ ಹಂಚಿಕೆ ಮಾಡಲಾಗಿದೆ. 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ₹10 ಕೋಟಿ ಹಂಚಿಕೆ ಮಾಡಿದ್ದು, ಹಂಚಿಕೆ ಮಾಡಿರುವ ಅನುದಾನಕ್ಕೆ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಜಿಲ್ಲಾ ಪಂಚಾಯತಿಯಲ್ಲಿ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ಉತ್ತರಿಸಿದರು.