ರಾಜ್ಯದ ಗ್ಯಾರಂಟಿ ಯೋಜನೆ ಗುರಿಯಾಗಿಸಿ ಬಿಜೆಪಿ ಮಾಡುತ್ತಿರುವುದು ರಾಜಕೀಯ ದಾಳಿಯಲ್ಲ. ಬಡವರ, ಮಹಿಳೆಯರ ಹಾಗೂ ಕರ್ನಾಟಕ ರಾಜ್ಯದ ವಿರುದ್ಧ ನಡೆಸುತ್ತಿರುವ ಪರೋಕ್ಷ ದಾಳಿ. ಈ ವಿಚಾರದಲ್ಲಿ ಚುನಾವಣಾ ಆಯೋಗ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಆಕ್ರೋಶ ವ್ಯಕ್ತಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಗ್ಯಾರಂಟಿ ಯೋಜನೆ ಗುರಿಯಾಗಿಸಿ ಬಿಜೆಪಿ ಮಾಡುತ್ತಿರುವುದು ರಾಜಕೀಯ ದಾಳಿಯಲ್ಲ. ಬಡವರ, ಮಹಿಳೆಯರ ಹಾಗೂ ಕರ್ನಾಟಕ ರಾಜ್ಯದ ವಿರುದ್ಧ ನಡೆಸುತ್ತಿರುವ ಪರೋಕ್ಷ ದಾಳಿ. ಈ ವಿಚಾರದಲ್ಲಿ ಚುನಾವಣಾ ಆಯೋಗ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಭಾರತದ ಚುನಾವಣಾ ಆಯೋಗವು, ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಗ್ಯಾರಂಟಿ ಯೋಜನೆಗಳಡಿ ಬಿಡುಗಡೆಯಾದ ನಿಧಿಗಳ ವಿವರ ಕೇಳಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಮೂಲಕ ಆಕ್ರೋಶ ಹೊರ ಹಾಕಿರುವ ಮುಖ್ಯಮಂತ್ರಿಗಳ ಕಚೇರಿ, ‘ನಮ್ಮ ಗ್ಯಾರಂಟಿ ಯೋಜನೆಗಳು ಈ ಉಪಚುನಾವಣೆ ಸಮಯದಲ್ಲಿ ಜಾರಿಯಾದವುಗಳಲ್ಲ, 2023ರಿಂದಲೂ ಈ ಯೋಜನೆಗಳಡಿ ರಾಜ್ಯದ ಎಲ್ಲ ಫಲಾನುಭವಿಗಳ ಖಾತೆಗಳಿಗೆ ನಿಯಮಿತವಾಗಿ, ಪಾರದರ್ಶಕವಾಗಿ ಹಣ ವರ್ಗಾವಣೆಯಾಗುತ್ತಿದೆ. ಈ ಯೋಜನೆಗಳು ಆಡಳಿತದ ಭಾಗವೇ ಹೊರತು, ಮತದಾರರನ್ನು ಸೆಳೆಯುವ ಕಾರ್ಯಕ್ರಮಗಳಲ್ಲ’ ಎಂದು ಸ್ಪಷ್ಟಪಡಿಸಿದೆ.
ಬಿಜೆಪಿಯದ್ದು ಇಬ್ಗಗೆಯ ನೀತಿ:
ಬಿಜೆಪಿ ಗ್ಯಾರಂಟಿ ಯೋಜನೆಗಳ ಬಗ್ಗೆ ಇಬ್ಬಗೆ ನೀತಿಯ ಧೋರಣೆ ಹೊಂದಿದೆ. ಒಂದು ಕಡೆ ರಾಜ್ಯದ ಗ್ಯಾರಂಟಿಗಳನ್ನು ‘ಬಿಟ್ಟಿ ಭಾಗ್ಯ’ ಎನ್ನುವ ಅದೇ ಬಿಜೆಪಿ ಬೇರೆ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿಗಳನ್ನು ಅನುಸರಿಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಲಾಗಿದೆ.
ಆಯೋಗದ ನಡೆ ಅನುಮಾನಾಸ್ಪದ:
ಈ ವಿಚಾರವಾಗಿ ಚುನಾವಣಾ ಆಯೋಗ ಅನುಸರಿಸುತ್ತಿರುವ ನೀತಿ ಅನುಮಾನಾಸ್ಪದವಾಗಿದೆ. ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ನಗದು ವರ್ಗಾವಣೆ ಯೋಜನೆ ಪ್ರಕಟಿಸಿ ಅನುಷ್ಠಾನಗೊಳಿಸಿದ್ದಾರೆ. ಬಹಿರಂಗವಾಗಿ ಮತದಾರರಿಗೆ ನೇರವಾಗಿ ಯೋಜನೆಗಳ ಲಾಭವನ್ನು ವರ್ಗಾವಣೆ ಮಾಡಲಾಗಿದೆ.
ಆದರೂ ಚುನಾವಣಾ ಆಯೋಗ ಮೌನವಹಿಸಿ ಕಣ್ಣು ಮುಚ್ಚಿಕೊಂಡಿತ್ತು. ಅದೇ ರಾಜ್ಯದಲ್ಲಿ ವಿನಾಕಾರಣ ಕ್ಯಾತೆ ತೆಗೆಯುತ್ತಿದೆ. ಈ ಇಬ್ಬಗೆಯ ನೀತಿ ಚುನಾವಣಾ ಆಯೋಗದ ಪಕ್ಷಪಾತವನ್ನು ಬಯಲು ಮಾಡುತ್ತದೆ ಎಂದು ಮುಖ್ಯಮಂತ್ರಿಗಳ ಕಚೇರಿ ಕಿಡಿಕಾರಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.